ಕಠ್ಮಂಡು, ಮಾ. 30: ನೇಪಾಳದ (Nepal) ನೂತನ ಪ್ರಧಾನಿ ಬಲೇಂದ್ರ 'ಬಾಲೆನ್' ಶಾ (Balendra ‘Balen’ Shah) ಅಧಿಕಾರ ಸ್ವೀಕರಿಸಿದ ಕೇವಲ 48 ಗಂಟೆಗಳಲ್ಲಿ ಸರ್ಕಾರಿ ಸಂಸ್ಥೆಗಳ ಸುಧಾರಣೆಗಾಗಿ 100 ಅಂಶಗಳ ಬೃಹತ್ ಕ್ರಿಯಾ ಯೋಜನೆಯನ್ನು ಅನಾವರಣಗೊಳಿಸುವ ಮೂಲಕ ಇಡೀ ರಾಷ್ಟ್ರದಲ್ಲೇ ಸಂಚಲನ ಸೃಷ್ಟಿಸಿದ್ದಾರೆ. ಈ ಯೋಜನೆಯಲ್ಲಿ ಅತ್ಯಂತ ವಿವಾದಾತ್ಮಕ ಹಾಗೂ ಸಾಹಸದ ನಿರ್ಧಾರವೆಂದರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಕ್ಯಾಂಪಸ್ ರಾಜಕೀಯವನ್ನು (Campus politics) ಸಂಪೂರ್ಣವಾಗಿ ನಿಷೇಧಿಸಿರುವುದು.
ಮಾರ್ಚ್ 5ರಂದು ನಡೆದ ಚುನಾವಣೆಯಲ್ಲಿ ರಾಷ್ಟ್ರಿಯ ಸ್ವತಂತ್ರ ಪಾರ್ಟಿಯ ಭರ್ಜರಿ ಗೆಲುವಿನ ನಂತರ ನೇಪಾಳದ ಅತ್ಯಂತ ಕಿರಿಯ ಪ್ರಧಾನಿಯಾಗಿ 35 ವರ್ಷದ ಬಾಲೆನ್ ಶಾ ಅಧಿಕಾರಕ್ಕೇರಿದರು. ಯುವಜನತೆಯ ಅಪಾರ ಬೆಂಬಲದೊಂದಿಗೆ ಜನಾದೇಶ ಪಡೆದ ಅವರು, ಈಗ ದಶಕಗಳ ಹಳೆಯ ರಾಜಕೀಯ ವ್ಯವಸ್ಥೆಯನ್ನು ಆಳವಾಗಿ ಬದಲಿಸಲು ಮುಂದಾಗಿದ್ದಾರೆ.
ಪ್ರಮುಖ ಸುಧಾರಣೆ ಮತ್ತು ಕಠಿಣ ಕ್ರಮಗಳು
ಕ್ಯಾಂಪಸ್ ರಾಜಕೀಯಕ್ಕೆ ಮುಕ್ತಿ: ರಾಜಕೀಯ ಪಕ್ಷಗಳ ಅಂಗಸಂಸ್ಥೆಗಳಾದ ವಿದ್ಯಾರ್ಥಿ ಸಂಘಟನೆಗಳನ್ನು ಕ್ಯಾಂಪಸ್‌ಗಳಿಂದ ಹೊರಹಾಕಲು ಆದೇಶಿಸಲಾಗಿದೆ. ಇವುಗಳ ಬದಲಿಗೆ 90 ದಿನಗಳಲ್ಲಿ ಪಕ್ಷಾತೀತ 'ವಿದ್ಯಾರ್ಥಿ ಮಂಡಳಿ'ಗಳನ್ನು ಸ್ಥಾಪಿಸಲಾಗುವುದು.
ಆಡಳಿತ ಯಂತ್ರದ ಶುದ್ಧೀಕರಣ: ಸರ್ಕಾರಿ ನೌಕರರು ಮತ್ತು ಶಿಕ್ಷಕರು ಯಾವುದೇ ರಾಜಕೀಯ ಪಕ್ಷದ ಸದಸ್ಯತ್ವ ಹೊಂದುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪೌರತ್ವ ಇಲ್ಲದಿದ್ದರೂ ಪದವಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಶಾಂತಿ ನೆಲೆಸಲು ಸಹಕರಿಸಿ ಎಂದು ಕ್ರಿಶ್ಚಿಯನ್‌ರಿಂದ ವಿಶೇಷ ಪ್ರಾರ್ಥನೆ: ರೆವೆರೆಂಡ್ ಪ್ರವೀಣ್
ಶಿಕ್ಷಣದಲ್ಲಿ ಬದಲಾವಣೆ: ಆಕ್ಸ್‌ಫರ್ಡ್, ಸೇಂಟ್ ಕ್ಸೇವಿಯರ್ಸ್‌ನಂತಹ ವಿದೇಶಿ ಹೆಸರು ಹೊಂದಿರುವ ಶಿಕ್ಷಣ ಸಂಸ್ಥೆಗಳು ಈ ವರ್ಷದಿಂದ ಕಡ್ಡಾಯವಾಗಿ ಮೂಲ ನೇಪಾಳಿ ಹೆಸರು ಅಳವಡಿಸಿಕೊಳ್ಳಬೇಕು.
ಬಾಲೆನ್ ಶಾ ಸರ್ಕಾರವು ತನ್ನ ಸುಧಾರಣಾ ಕ್ರಮಗಳ ಜತೆಗೆ ರಾಜಕೀಯ ವಿರೋಧಿಗಳ ವಿರುದ್ಧವೂ ಸಮರ ಸಾರಿದೆ. ಕಳೆದ ವರ್ಷ ನಡೆದ ಜೆನ್ ಝೀ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ ಆರೋಪದ ಮೇಲೆ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮತ್ತು ರಮೇಶ್ ಲೇಖಕ್ ಅವರನ್ನು ಶನಿವಾರ (ಮಾರ್ಚ್ 28) ಬಂಧಿಸಲಾಗಿದೆ. ಈ ಪ್ರತಿಭಟನೆಯಲ್ಲಿ 77 ಜನರು ಮೃತಪಟ್ಟಿದ್ದರು. ಅಲ್ಲದೆ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಾಸಕಿ ರೇಖಾ ಶರ್ಮಾ ಅವರನ್ನು ಬಂಧಿಸಲಾಗಿದೆ. ಭಾರತದ ಪ್ರಧಾನಿ ಮೋದಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿರುವ ಶಾ, ನೇಪಾಳದ ರಾಜಕೀಯದಲ್ಲಿ ಆಕ್ರಮಣಕಾರಿ ಮತ್ತು ನಿರ್ಣಾಯಕ ಹಾದಿಯನ್ನು ತುಳಿಯುತ್ತಿದ್ದಾರೆ.