ಕಾಠ್ಮಂಡು, ಮೇ 31: ಮಾರ್ಚ್ ಚುನಾವಣೆಯ ನಂತರ ಅಧಿಕಾರ ವಹಿಸಿಕೊಂಡ ನೇಪಾಳ ಪ್ರಧಾನಿ ಬಾಲೇಂದ್ರ ಶಾ (Balendra Shah) ಭಾನುವಾರ (ಮೇ 31) ಮೊದಲ ಬಾರಿಗೆ ನೇಪಾಳ (Nepal) ಸಂಸತ್ತನ್ನುದ್ದೇಶಿಸಿ ಮಾತನಾಡಿದರು. ಭಾರತದೊಂದಿಗಿನ ಗಡಿ ವಿವಾದಗಳನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹರಿಸಲಾಗುವುದು ಎಂದು ಒತ್ತಿ ಹೇಳಿದರು. ಸಂಸತ್ತನ್ನುದ್ದೇಶಿಸಿ ಮಾತನಾಡಿದ ಶಾ, “ಭಾರತದೊಂದಿಗಿನ ಗಡಿ ಸಮಸ್ಯೆಯನ್ನು ಮಾತುಕತೆ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಪರಿಹರಿಸಲಾಗುವುದು” ಎಂದು ಹೇಳಿದರು. ಇದು ನೇಪಾಳದ ದಕ್ಷಿಣ ನೆರೆಯ ರಾಷ್ಟ್ರದೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಕಾಪಾಡಿಕೊಳ್ಳುವ ಮತ್ತು ದೀರ್ಘಕಾಲದ ಪ್ರಾದೇಶಿಕ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸುವ ತನ್ನ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳುತ್ತದೆ.
ಲಿಪುಲೇಖ್-ಲಿಂಪಿಯಾಧುರ ಪ್ರದೇಶದ ಮೇಲಿನ ನೇಪಾಳದ ಹಕ್ಕು ಕುರಿತು ಮಾತನಾಡಿದ ಶಾ, ವಿವಾದದ ಮೂಲ ಬ್ರಿಟಿಷ್ ಭಾರತ ಕಾಲಕ್ಕೆ ಸಂಬಂಧಿಸಿದ್ದು ಎಂದು ಅಭಿಪ್ರಾಯಪಟ್ಟರು. ತಮ್ಮ ಸರ್ಕಾರವು ಇಂಗ್ಲೆಂಡ್‌ನೊಂದಿಗೂ ಈ ವಿಷಯವನ್ನು ಚರ್ಚಿಸಲಿದೆ ಎಂದು ಹೇಳಿದರು. ನೇಪಾಳವು ರಾಜತಾಂತ್ರಿಕ ಮಾರ್ಗಗಳು ಮತ್ತು ಭಾರತದೊಂದಿಗೆ ಮಾತುಕತೆಗಳ ಮೂಲಕ ಪರಿಹಾರವನ್ನು ಬಯಸುತ್ತದೆ ಎಂದು ಅವರು ಹೇಳಿದರು. ಮುಖಾಮುಖಿಗಿಂತ ಸಂಭಾಷಣೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದರು.
ಭಾರತೀಯ ಪ್ರವಾಸಿಗರ ಮೇಲೆ ನಿರ್ಬಂಧ ಹೇರಿತಾ ನೇಪಾಳ? ಪ್ರಯಾಣ ನಿಯಮಗಳ ಕುರಿತು ಹೇಳಿದ್ದು ಹೀಗೆ
ಸೂಕ್ಷ್ಮ ದ್ವಿಪಕ್ಷೀಯ ವಿಷಯಗಳನ್ನು ನಿಭಾಯಿಸುವಲ್ಲಿ ನೇಪಾಳವು ರಾಜತಾಂತ್ರಿಕತೆ, ಪರಸ್ಪರ ಗೌರವ ಮತ್ತು ರಚನಾತ್ಮಕ ಸಹಭಾಗಿತ್ವಕ್ಕೆ ಆದ್ಯತೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.
ದೀರ್ಘ ಕಾಲದ ಗಡಿ ವಿವಾದಗಳು
ಭಾರತ ಮತ್ತು ನೇಪಾಳ ಸುಮಾರು 1,751 ಕಿಲೋ ಮೀಟರ್ ಮುಕ್ತ ಗಡಿಯನ್ನು ಹಂಚಿಕೊಂಡಿವೆ. ಸಾಂಸ್ಕೃತಿಕ, ಆರ್ಥಿಕ ವಿಚಾರಗಳಲ್ಲಿ ಎರಡೂ ದೇಶಗಳ ಜನರ ನಡುವೆ ನಿಕಟ ಸಂಬಂಧ ಇದೆ. ಆದರೆ ಭಾರತ-ನೇಪಾಳ ನಡುವೆ ಗಡಿಯ ಕೆಲವು ಭಾಗಗಳಿಗೆ ಸಂಬಂಧಿಸಿದಂತೆ ದೀರ್ಘ ಕಾಲದ ಭಿನ್ನಾಭಿಪ್ರಾಯಗಳಿವೆ. ವಿಶೇಷವಾಗಿ ಪಶ್ಚಿಮ ಭಾಗದಲ್ಲಿರುವ ಕಾಲಾಪಾನಿ–ಲಿಂಪಿಯಾಧುರಾ–ಲಿಪುಲೇಖ್ ಪ್ರದೇಶ ಮತ್ತು ದಕ್ಷಿಣ ಭಾಗದಲ್ಲಿರುವ ಸುಸ್ತಾ ಪ್ರದೇಶಗಳ ಕುರಿತು ವಿವಾದ ಮುಂದುವರಿದಿದೆ.
1816ರ ಸುಗೌಲಿ ಒಪ್ಪಂದದ ವಿಭಿನ್ನ ವ್ಯಾಖ್ಯಾನಗಳೊಂದಿಗೆ ಗಡಿ ವಿವಾದವು ಸಂಬಂಧ ಹೊಂದಿದೆ. ಈ ಒಪ್ಪಂದವು ನೇಪಾಳ ಸಾಮ್ರಾಜ್ಯ ಮತ್ತು ಬ್ರಿಟಿಷ್ ಭಾರತದ ನಡುವೆ ಸಹಿ ಮಾಡಲಾಗಿತ್ತು. ವಿವಾದಿತ ಪ್ರದೇಶಗಳ ಮೇಲೆ ಎರಡೂ ದೇಶಗಳು ತಮ್ಮ ಹಕ್ಕುಗಳನ್ನು ಉಳಿಸಿಕೊಂಡಿವೆ.
2020ರಲ್ಲಿ ಭಾರತವು ಉತ್ತರಾಖಂಡದ ಧಾರ್ಚುಲಾವನ್ನು ಕೈಲಾಶ್ ಮಾನಸ ಸರೋವರ ಯಾತ್ರೆಗೆ ಬಳಸುವ ಲಿಪುಲೇಖ್ ಪಾಸ್‌ಗೆ ಸಂಪರ್ಕಿಸುವ ರಸ್ತೆಯನ್ನು ಉದ್ಘಾಟಿಸಿದ ನಂತರ ಕಲಾಪಾನಿ ವಲಯದ ಕುರಿತು ಉದ್ವಿಗ್ನತೆ ಹೆಚ್ಚಾಯಿತು. ನೇಪಾಳವು ತರುವಾಯ ತನ್ನ ಪ್ರದೇಶದೊಳಗೆ ಕಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾವನ್ನು ತೋರಿಸುವ ಪರಿಷ್ಕೃತ ಅಧಿಕೃತ ನಕ್ಷೆಯನ್ನು ಬಿಡುಗಡೆ ಮಾಡಿತು. ನಂತರ ಸಾಂವಿಧಾನಿಕ ತಿದ್ದುಪಡಿಯ ಮೂಲಕ ನಕ್ಷೆಯನ್ನು ಅನುಮೋದಿಸಿತು.
ಭಾರತವು ಆ ಪ್ರದೇಶಗಳು ತಮಗೆ ಸೇರಿದ್ದು ಎಂದು ಸಮರ್ಥಿಸಿಕೊಂಡಿದೆ. ಬಾಕಿ ಇರುವ ಎಲ್ಲ ಗಡಿ ಸಮಸ್ಯೆಗಳನ್ನು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಕಾರ್ಯವಿಧಾನಗಳು ಮತ್ತು ರಾಜತಾಂತ್ರಿಕ ಸಂವಾದದ ಮೂಲಕ ಪರಿಹರಿಸಬೇಕು ಎಂದು ನಿರಂತರವಾಗಿ ಹೇಳುತ್ತಿದೆ. ಈ ಹಿಂದೆ ಸಹ, ಗಡಿ ಸಂಬಂಧಿತ ವಿಷಯಗಳ ಕುರಿತು ಭಾರತ ಮತ್ತು ನೇಪಾಳವು ಸ್ಥಾಪಿತ ರಾಜತಾಂತ್ರಿಕ ಮಾರ್ಗಗಳ ಮೂಲಕ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿವೆ.