ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಜಮಿನ್‌ ನೆತನ್ಯಾಹು ಬದುಕಿದ್ದಾರೆ; ಇಸ್ರೇಲ್‌ ಪ್ರಧಾನಿ ಹಂಚಿಕೊಂಡ ವಿಡಿಯೊ ಮೂಲಕ ಸಿಕ್ತು ಪುರಾವೆ

Benjamin Netanyahu: ಇರಾನ್‌ ದಾಳಿಯಲ್ಲಿ ತಾವು ಮೃತಪಟ್ಟಿಲ್ಲ ಎಂದು ವಿಡಿಯೊ ಮೂಲಕ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಇಸ್ರೇಲ್‌ ಪ್ರಧಾನಿ ಕಾಫಿ ಕುಡಿಯುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ತಾವು ಆರೋಗ್ಯದಿಂದ ಇರುವುದಾಗಿ ಸಂದೇಶ ಸಾರಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (ಸಂಗ್ರಹ ಚಿತ್ರ)

ಜೆರುಸಲೇಂ, ಮಾ. 15: ಇರಾನ್‌ ಮೇಲೆ ಇಸ್ರೇಲ್‌ ಮತ್ತು ಅಮೆರಿಕ ಜಂಟಿ ದಾಳಿ ನಡೆಸಿದ ನಂತರ, ಸಂಘರ್ಷದ ಆರಂಭವಾದ ಬಳಿಕ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಮೃತಪಟ್ಟಿದ್ದಾರೆ ಎನ್ನುವ ವಿಚಾರ ಭಾರಿ ಚರ್ಚೆಯಲ್ಲಿದೆ. ಯುದ್ಧ ಆರಂಭವಾದಾಗಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಇರಾನ್‌ನ ದಾಳಿಗೆ ಬಲಿಯಾಗಿದ್ದಾರೆ ಎನ್ನುವ ವದಂತಿ ಹರಡಿತ್ತು. ಆದರೆ ಇಸ್ರೇಲ್‌ ಈ ವಾದವನ್ನು ಅಲ್ಲಗೆಳೆಯುತ್ತ ಬಂದಿದೆ. ಇದೀಗ ಸ್ವತಃ ಬೆಂಜಮಿನ್‌ ನೆತನ್ಯಾಹು ತಾವು ಮೃತಪಟ್ಟಿಲ್ಲ ಎಂದು ವಿಡಿಯೊ ಮೂಲಕ ಸಾರಿ ಹೇಳಿದ್ದಾರೆ. ಜತೆಗೆ ಶತ್ರುಗಳ ವಾದದಲ್ಲಿ ಯಾವುದೇ ಹುರುಳಿಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಇಸ್ರೇಲ್‌ ಪ್ರಧಾನಿ ಕಾಫಿ ಕುಡಿಯುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ತಾವು ಆರೋಗ್ಯದಿಂದ ಇರುವುದಾಗಿ ದೊಡ್ಡ ಸಂದೇಶ ಸಾರಿದ್ದಾರೆ. ಕೆಫೆಯೊಂದರಲ್ಲಿ ಕಾಫಿ ಕುಡಿಯುತ್ತ ಅವರು ತಮ್ಮ ಕುರಿತಾಗಿ ಹಬ್ಬಿರುವ ವದಂತಿಯನ್ನು ತಳ್ಳಿಹಾಕಿದ್ದಾರೆ.

ಬೆಂಜಮಿನ್‌ ನೆತನ್ಯಾಹು ಅವರ ಎಕ್ಸ್‌ ವಿಡಿಯೊ:



ʼಸತ್ತಿದ್ದೇನೆʼ ಎಂದ ಬೆಂಜಮಿನ್‌ ನೆತನ್ಯಾಹು

ವಿಡಿಯೊದಲ್ಲಿ ನೆತನ್ಯಾಹು ಖುಷಿಯಿಂದ ಕಾಫಿ ಹೀರುತ್ತಿರುವುದು ಕಂಡುಬಂದಿದೆ. ಈ ವೇಳೆ ಅವರು, ʼʼಕಾಫಿಗಾಗಿ ಸತ್ತಿದ್ದೇನೆʼʼ ಎಂದು ತಮಾಷೆ ಮಾಡಿದ್ದಾರೆ. ಸಾಮಾನ್ಯವಾಗಿ ನಾವು ಅತೀ ಹೆಚ್ಚು ಇಷ್ಟಪಡುವ ವಸ್ತುವನ್ನು ವರ್ಣಿಸುವಾಗ ಈ ಪದವನ್ನು ಬಳಸುತ್ತೇವೆ. ಅದೇ ರೀತಿಯ ಅರ್ಥ ಬರುವಂತೆ ಅವರು ಈ ಮಾತು ಹೇಳಿದ್ದಾರೆ. ʼʼಸಾಯುವವರೆಗೂ ನನ್ನ ದೇಶವನ್ನು ಪ್ರೀತಿಸುತ್ತೇನೆʼʼ ಎಂದಿದ್ದಾರೆ. ಬಿಕ್ಕಟ್ಟಿನ ನಡುವೆಯೂ ಇಸ್ರೇಲಿಗರು ತೋರುತ್ತಿರುವ ಬದ್ಧತೆಯನ್ನು ಈ ಸಂದರ್ಭದಲ್ಲಿ ಅವರು ಶ್ಲಾಘಿಸಿದ್ದಾರೆ. ಜತೆಗೆ ಅವರು ಸ್ಪಷ್ಟವಾಗಿ ಕಾಣುವಂತೆ ತಮ್ಮ ಕೈಯನ್ನು ಕ್ಯಾಮರಾದ ಎದುರು ಚಾಚಿದ್ದಾರೆ. ʼʼನಿಮಗೆ ನನ್ನ ಕೈಬೆರಳು ಎಣಿಸಬೇಕೆ? ಇಲ್ಲಿದೆ ನೋಡಿʼʼ ಎಂದು ನಗುತ್ತ ತಮ್ಮೆರಡೂ ಕೈಗಳನ್ನು ತೋರಿಸಿದ್ದಾರೆ.

ದಾಳಿಯಲ್ಲಿ ನೆತನ್ಯಾಹು ಹತ್ಯೆ? ಹಿಂಸಿಸಿ ಕೊಲ್ಲುತ್ತೇವೆ ಎಂದ ಇರಾನ್‌ಗೆ ಇಸ್ರೇಲ್‌ ಪಿಎಂ ಕಚೇರಿ ಹೇಳಿದ್ದೇನು?

ಇಸ್ರೇಲಿಗರಿಗೆ ನೀಡಿದ ಸಂದೇಶವೇನು?

ಇಸ್ರೇಲಿ ನಾಗರಿಕರಿಗೆ ನೀಡಿದ ಸಂದೇಶದಲ್ಲಿ ನೆತನ್ಯಾಹು, "ಹೊರಗೆ ಹೋಗಿ ಸ್ವಲ್ಪ ತಾಜಾ ಗಾಳಿಯಲ್ಲಿ ಉಸಿರಾಡಿ. ಆದರೆ ಸಂರಕ್ಷಿತ ಸ್ಥಳದ ಬಳಿಯಲ್ಲೇ ಇರಿ. ನಿಮ್ಮ ಸಹಕಾರ ಅದ್ಭುತ. ಇದು ನನಗೆ, ಸರ್ಕಾರಕ್ಕೆ, ಐಡಿಎಫ್‌ಗೆ ಮತ್ತು ಮೊಸಾದ್‌ಗೆ ಆನೆ ಬಲವನ್ನು ನೀಡುತ್ತದೆ. ನಾನು ಮಾಡಲಾಗದ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ. ನಾವು ಇಂದಿಗೂ ಇರಾನ್ ಮೇಲೆ ತೀವ್ರ ದಾಳಿ ನಡೆಸುತ್ತಿದ್ದೇವೆʼʼ ಎಂದಿದ್ದಾರೆ.

"ಹೋಮ್ ಫ್ರಂಟ್ ಕಮಾಂಡ್ ಸೂಚನೆಗಳನ್ನು ಪಾಲಿಸಿ ಯಾವಾಗಲೂ ಸಂರಕ್ಷಿತ ಸ್ಥಳದ ಬಳಿ ಇರಿ. ಸಾಧ್ಯವಾದಷ್ಟು ನಿರ್ಬಂಧಗಳನ್ನು ಸಡಿಲಿಸುತ್ತೇವೆ. ಕಾಫಿಗೆ ಧನ್ಯವಾದಗಳು. ಇದು ಅದ್ಭುತವಾಗಿದೆ. ಕ್ಯಾಲೋರಿಗಳ ಬಗ್ಗೆ ನನಗೆ ತಿಳಿದಿಲ್ಲ" ಎಂದು ಅವರು ಹೇಳಿದ್ದಾರೆ. ಆ ಮೂಲಕ ಜನತೆಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದಾರೆ.

ಖಮೇನಿ ಹತ್ಯೆಗೆ ತಿರುಗೇಟು ನೀಡಲು ಇರಾನ್‌ ಸಜ್ಜು; ಮಸೀದಿ ಮೇಲೆ ಹಾರಾಡಿತು ಕೆಂಪು ಧ್ವಜ: ಇಸ್ರೇಲ್‌-ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ

ಯಾಕಾಗಿ ಈ ಸ್ಪಷ್ಟನೆ?

ಈ ಹಿಂದೆ ಇರಾನ್‌ ಬೆಂಜಮಿನ್‌ ನೆತನ್ಯಾಹು ಅವರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿತ್ತು. ಅಲ್ಲದೆ ಇತ್ತೀಚೆಗೆ ವೈರಲ್‌ ಆದ ವಿಡಿಯೊವೊಂದರಲ್ಲಿ ಬೆಂಜಮಿನ್‌ ನೆತನ್ಯಾಹು ಅವರ ಬಲಗೈಯಲ್ಲಿ 6 ಬೆರಳು ಕಾಣಿಸಿಕೊಂಡಿತ್ತು. ಇದು ಎಐ ವಿಡಿಯೊ. ಅವರು ಮೃತಪಟ್ಟಿರುವುದರಿಂದ ಇಸ್ರೇಲ್‌ ಎಐ ವಿಡಿಯೊ ಹಂಚಿಕೊಂಡಿದೆ ಎನ್ನುವ ವದಂತಿ ಹರಡಿತ್ತು. ಇದೀಗ ವಿಡಿಯೊ ಮೂಲಕ ನೆತನ್ಯಾಹು ಅನುಮಾನಗಳೆಲ್ಲ ನಿವಾಳಿಸಿ ಎಸೆದಿದ್ದಾರೆ. ಇದಕ್ಕೆ ಇರಾನ್‌ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author