ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nimisha Priya Case: ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ನಿಮಿಷಾ ಪ್ರಿಯಾ ಮುಂದಿದೆ 5 ದಾರಿ

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇನ್ನು 5 ದಾರಿಗಳಿವೆ. ಬ್ಲಡ್‌ ಮನಿ ನಿರಾಕರಣೆ ಮಾಡಿದ ಮೇಲೂ ನಿಮಿಷಾ ಪ್ರಿಯಾ ಅವರಿಗೆ ಪಾರಾಗಲು ಐದು ದಾರಿಗಳಿವೆ. ಆ ದಾರಿಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ನಿಮಿಷಾ ಪ್ರಿಯಾಗೆ ಇರುವ ಕೊನೆಯ 5 ದಾರಿಗಳು ಇವು

ನವದೆಹಲಿ: ಯೆಮೆನ್‌ನಲ್ಲಿ (Yemen) ಮರಣದಂಡನೆಗೆ (Death penalty) ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ (Nimisha Priya case) ಭಾರತವು ಉಚಿತ ಕಾನೂನು ನೆರವು, ರಾಯಭಾರಿ, ವೀಸಾ ಬೆಂಬಲವನ್ನು ಒದಗಿಸಲು ಯೆಮೆನ್‌ಗೆ ಅರ್ಹ ತಜ್ಞರನ್ನು ಕಳುಹಿಸಿದೆ. ಇದರೊಂದಿಗೆ ಇರಾನ್ ಮತ್ತು ಗಲ್ಫ್ ಮಿತ್ರರಾಷ್ಟ್ರಗಳ ಮೂಲಕ ರಾಜತಾಂತ್ರಿಕ ಒತ್ತಡವನ್ನು ಹೇರುತ್ತಿದೆ. ಇತ್ತ ನಿಮಿಷಾ ಪ್ರಿಯ ಅವರಿಂದ ನೀಡಲಾಗುವ ಬ್ಲಡ್‌ ಮನಿಯನ್ನು ಕೊಲೆಯಾದ ತಲಾಲ್ ಅಬ್ದೋ ಮಹ್ದಿ ಕುಟುಂಬ ಸ್ವೀಕರಿಸಲು ನಿರಾಕರಿಸಿದೆ. ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆಯನ್ನೇ ನೀಡುವಂತೆ ಮನವಿ ಮಾಡಿದೆ.

2017ರಲ್ಲಿ ನಡೆದಿರುವ ತಲಾಲ್ ಅಬ್ದೋ ಮಹ್ದಿ ಕೊಲೆ ಪ್ರಕರಣದಲ್ಲಿ ನಿಮಿಷಾ ಪ್ರಿಯಾ ಅಪರಾಧಿ ಎಂಬುದು ಸಾಬೀತಾಗಿದೆ. ಈ ಕುರಿತು ವಿಚಾರಣೆಯು ಸ್ಥಳೀಯ ನ್ಯಾಯಾಲಯ ಮತ್ತು ಯೆಮೆನ್‌ನ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಮುಂದುವರಿದಿದೆ. ಎರಡೂ ನ್ಯಾಯಾಲಯದಲ್ಲೂ ಅವರಿಗೆ ಮರಣದಂಡನೆಯನ್ನು ವಿಧಿಸಲಾಗಿದೆ.

ಜುಲೈ 16ರಂದು ಅವರನ್ನು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು. ಸಾಕಷ್ಟು ಒತ್ತಡ ಬಂದಿದ್ದರಿಂದ ಮರಣದಂಡನೆಯನ್ನು ಮುಂದೂಡಲಾಗಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 14ಕ್ಕೆ ನಿಗದಿಪಡಿಸಲಾಗಿದೆ. ರಕ್ತದ ಹಣ ಪರಿಹಾರವಾಗಿ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಈಗ ತಲಾಲ್ ಅಬ್ದೋ ಮಹ್ದಿ ಕುಟುಂಬ ನಿರಾಕರಿಸಿರುವುದರಿಂದ ಅವರಿಗೆ ಈಗ ಉಳಿದಿರುವ ಪ್ರಮುಖ ಐದು ದಾರಿಗಳಿವೆ.

ಯೆಮೆನ್ ಶರಿಯಾ ಕಾನೂನಿನಡಿಯಲ್ಲಿ ಮರಣದಂಡನೆಯನ್ನು ತಪ್ಪಿಸಲು ಒಂದು ಪ್ರಮುಖ ಮಾರ್ಗವೆಂದರೆ ರಕ್ತದ ಹಣ. ಆದರೆ ಇದನ್ನು ಬಲಿಪಶುವಿನ ಕುಟುಂಬ ನಿರಾಕರಿಸಿರುವುದರಿಂದ ನಿಮಿಷಾ ಪ್ರಿಯಾ ಈಗ ಇತರ ಆಯ್ಕೆಗಳನ್ನು ಹುಡುಕಬೇಕಿದೆ.

ಅಧ್ಯಕ್ಷೀಯ ಕ್ಷಮಾದಾನ

ವಿಶೇಷ ಪ್ರಕರಣಗಳಲ್ಲಿ ಕ್ಷಮೆ ನೀಡುವ ಸಾಂವಿಧಾನಿಕ ಅಧಿಕಾರವನ್ನು ಯೆಮೆನ್ ಅಧ್ಯಕ್ಷರು ಹೊಂದಿದ್ದಾರೆ. ಆದರೂ ಇದು ಅಪರೂಪ. ಬಲವಾದ ರಾಜಕೀಯ, ಧಾರ್ಮಿಕ ಅಥವಾ ಮಾನವೀಯ ವಾದಗಳು ಇದಕ್ಕೆ ಬೇಕಾಗುತ್ತವೆ. ಭಾರತ ಸರ್ಕಾರವು ರಾಜತಾಂತ್ರಿಕ ಒತ್ತಡ ಮತ್ತು ಮಾನವೀಯ ಮೇಲ್ಮನವಿಗಳ ಮೂಲಕ ಈ ಮಾರ್ಗವನ್ನು ಅನುಸರಿಸುತ್ತಿದೆ.

ಕಾನೂನು ಮೇಲ್ಮನವಿ

ಮೇಲ್ಮನವಿ ನ್ಯಾಯಾಲಯದಲ್ಲಿ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬಹುದು. ಇದು ಪ್ರಕರಣವನ್ನು ರದ್ದುಗೊಳಿಸುವ ಸಾಧ್ಯತೆಯಿದೆ. ನಿಮಿಷಾ ಸ್ವರಕ್ಷಣೆಗಾಗಿ ತಪ್ಪು ಮಾಡಿದ್ದಾರೆ ಎಂಬುದು ಸಾಬೀತಾದರೆ ಪ್ರಕರಣವನ್ನು ಮೇಲ್ಮನವಿಯ ಮೂಲಕ ರದ್ದುಗೊಳಿಸಬಹುದು.

ರಾಜತಾಂತ್ರಿಕ ಮತ್ತು ಅಂತಾರಾಷ್ಟ್ರೀಯ ಹಸ್ತಕ್ಷೇಪ

ಮಾನವೀಯ ಆಧಾರದ ಮೇಲೆ ಭಾರತ ಸರ್ಕಾರ ಮತ್ತು ಯೆಮೆನ್‌ನ ಹೌತಿ ಸರ್ಕಾರದ ನಡುವೆ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿವೆ. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ರೆಡ್‌ಕ್ರಾಸ್‌ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಹಾಯವನ್ನು ಸಹ ಪಡೆಯಬಹುದು.

ಸಾರ್ವಜನಿಕ ಒತ್ತಡ

ವ್ಯಾಪಕವಾದ ಅಂತಾರಾಷ್ಟ್ರೀಯ ಬೆಂಬಲವನ್ನು ಗಳಿಸಲು ಹೌತಿ ಬಂಡುಕೋರರ ಮೇಲೆ ಒತ್ತಡ ಹೇರಬಹುದು.

ಶಿಕ್ಷೆಯ ಪರಿವರ್ತನೆ

ಕೊನೆಯದಾಗಿ ರಕ್ತದ ಹಣವನ್ನು ತಿರಸ್ಕರಿಸಿದರೆ, ಕ್ಷಮೆಯ ಸಾಧ್ಯತೆಯನ್ನು ತಳ್ಳಿ ಹಾಕಿದರೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವ ಪ್ರಯತ್ನಗಳನ್ನು ನಡೆಸುವ ಅವಕಾಶವಿದೆ. ಇದಕ್ಕೆ ಬಲವಾದ ಮಾನವೀಯ, ವೈದ್ಯಕೀಯ ಅಥವಾ ರಾಜತಾಂತ್ರಿಕ ವಾದಗಳು ಬೇಕಾಗುತ್ತವೆ. ಭಾರತ ಸರ್ಕಾರವು ಈ ವಿಧಾನದ ಬಗ್ಗೆ ಗಂಭೀರವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Sarfaraz Khan: 2 ತಿಂಗಳ ಅಂತರದಲ್ಲಿ 17 ಕೆಜಿ ತೂಕ ಇಳಿಸಿಕೊಂಡ ಸರ್ಫರಾಜ್

ಹೌತಿ ಬಂಡುಕೋರರು ಸಹಾಯ ಮಾಡಬಹುದೇ?

ಭಾರತವು ಹೌತಿ ಬಂಡುಕೋರರ ಮೇಲೆ ಹೆಚ್ಚಿನ ಒತ್ತಡ ಹೇರಲು ಸಾಧ್ಯವಿಲ್ಲ. ಇದಕ್ಕಾಗಿ ರಾಜತಾಂತ್ರಿಕ ಮಾರ್ಗಗಳನ್ನು ಹುಡುಕಬೇಕು. ಶಿಯಾ ಝಾಯಿದಿ ಬಂಡುಕೋರ ಗುಂಪಾದ ಹೌತಿಗಳು ಉತ್ತರ ಮತ್ತು ಪಶ್ಚಿಮ ಯೆಮೆನ್‌ನ ಹೆಚ್ಚಿನ ಭಾಗಗಳನ್ನು ನಿಯಂತ್ರಿಸುತ್ತಿದ್ದಾರೆ. ಇವರಿಗೆ ಇರಾನ್ ಬೆಂಬಲ ನೀಡುತ್ತಿದೆ. ಭಾರತವು ಟೆಹ್ರಾನ್‌ನೊಂದಿಗಿನ ಸೌಹಾರ್ದಯುತ ಸಂಬಂಧಗಳನ್ನು ಬಳಸಿಕೊಂಡು ಹೌತಿ ಬಂಡುಕೋರರ ಮೇಲೆ ಪ್ರಭಾವ ಬೀರಿ ರಾಜತಾಂತ್ರಿಕ ಮಾರ್ಗವನ್ನು ತೆರೆಯುವ ಪ್ರಯಾಂತ ನಡೆಸುತ್ತಿದೆ. ಆದರೆ ಈ ನಿಟ್ಟಿನಲ್ಲಿ ಇರಾನ್ ಹೇಗೆ ಸ್ಪಂದಿಸುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾದಂತಿಲ್ಲ.