Michael Randrianirina: ಲೆಫ್ಟಿನೆಂಟ್ ಕರ್ನಲ್ ಮೈಕಲ್ ರ್ಯಾಂಡ್ರಿಯನ್‌ರಿನಾ ಮಡಗಾಸ್ಕರ್‌ನ ನೂತನ ಅಧ್ಯಕ್ಷ
ಕೆಲವು ದಿನಗಳ ಹಿಂದೆಯಷ್ಟೇ ಜೆನ್ ಝೀಗಳ ಹೋರಾಟ ಪ್ರತಿಭಟನೆಯಿಂದ ಹೊತ್ತಿ ಉರಿದಿದ್ದ ಮಡಗಾಸ್ಕರ್‌ನಲ್ಲಿ ದೊಡ್ಡ ರಾಜಕೀಯ ಬೆಳವಣಿಗೆ ನಡೆದಿದೆ. ಅಧ್ಯಕ್ಷ ಆಂಡ್ರಿ ರಾಜೋಲಿನಾ ಫ್ರೆಂಚ್ ಮಿಲಿಟರಿ ವಿಮಾನದಲ್ಲಿ ದೇಶವನ್ನು ಬಿಟ್ಟು ಪಲಾಯನ ಮಾಡಿದ ಬಳಿಕ ಶುಕ್ರವಾರ ಮಡಗಾಸ್ಕರ್‌ನ ನೂತನ ಅಧ್ಯಕ್ಷರಾಗಿ ಕರ್ನಲ್ ಮೈಕಲ್ ರ್ಯಾಂಡ್ರಿಯನ್‌ರಿನಾ ಅಧಿಕಾರ ಸ್ವೀಕರಿಸಿದ್ದಾರೆ.

ಮೈಕಲ್ ರ್ಯಾಂಡ್ರಿಯನ್‌ರಿನಾ -

ಅಂಟಾನನರಿವೊ: ಮಡಗಾಸ್ಕರ್‌ನ (Madagascar) ನೂತನ ಅಧ್ಯಕ್ಷರಾಗಿ ಕರ್ನಲ್ ಮೈಕಲ್ ರ್ಯಾಂಡ್ರಿಯನ್‌ರಿನಾ (Michael Randrianirina) ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಕೆಲವೇ ದಿನಗಳ ಹಿಂದೆ ಯುವಜನತೆ (Jen Z) ಪ್ರತಿಭಟನೆಗಳಿಂದ ಮಡಗಾಸ್ಕರ್ ಸರ್ಕಾರ ಪತನಗೊಂಡು, ಹಿಂದಿನ ಅಧ್ಯಕ್ಷ ಆಂಡ್ರಿಯ್ ರಜೋಲಿನಾ (Andry Rajoelina) ಪಲಾಯನ ಮಾಡಿದ್ದರು. ಮಡಗಾಸ್ಕರ್‌ನ ಹೈ ಕಾನ್‌ಸ್ಟಿಟ್ಯೂಷನಲ್ ಕೋರ್ಟ್‌ನಲ್ಲಿ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಈ ವೇಳೆ ಮಾತನಾಡಿದ ಸೇನಾ ಘಟಕ CAPSATನ ಕಮಾಂಡರ್ ಆಗಿರುವ ನೂತನ ಅಧ್ಯಕ್ಷ ರ್ಯಾಂಡ್ರಿಯನ್‌ರಿನಾ, ರಾಷ್ಟ್ರೀಯ ಏಕತೆ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವುದಾಗಿ ಶಪಥ ಮಾಡಿದರು. "ಸೇನೆಯ ನಿಯಂತ್ರಣದಲ್ಲಿ ತಾತ್ಕಾಲಿಕ ಸರ್ಕಾರ ಸ್ಥಾಪನೆಯಾಗಲಿದ್ದು, ಎರಡು ವರ್ಷಗಳವರೆಗೆ ಅಧಿಕಾರದಲ್ಲಿ ಇರಲಿದೆ. ಈ ಅವಧಿಯ ನಂತರ ಹೊಸ ಚುನಾವಣೆ ನಡೆಸಲಾಗುವುದು" ಅವರು ಘೋಷಿಸಿದ್ದಾರೆ.
ಈ ಸುದ್ದಿಯನ್ನು ಓದಿ: Zubeen Garg: ಗಾಯಕ ಜುಬೀನ್ ಗಾರ್ಗ್ ಸಾವು; ಕೊಲೆ ನಡೆದ ಬಗ್ಗೆ ಪುರಾವೆ ಇಲ್ಲ ಎಂದ ಸಿಂಗಾಪುರ ಪೊಲೀಸ್
ರಜೋಲಿನಾ ಅವರನ್ನು ಅಧಿಕಾರಕ್ಕೆ ತಂದ 2009ರ ದಂಗೆಯಲ್ಲಿ ರ್ಯಾಂಡ್ರಿಯನ್‌ರಿನಾ ಭಾಗಿಯಾಗಿರಲಿಲ್ಲ. ಆದರೆ ಈ ಸಲದ ಬಂಡಾಯದ ವೇಳೆ ಅವರು ಸೈನಿಕರಿಗೆ "ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಬೇಡಿ" ಎಂದು ಕರೆ ನೀಡಿ, ಅವರಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು.
ಇನ್ನೂ ವಿದೇಶಕ್ಕೆ ಪಲಾಯನಗೊಂಡಿರುವ ಮಾಜಿ ಅಧ್ಯಕ್ಷರಾದ ಆಂಡ್ರಿಯ್ ರಜೋಲಿನಾ, ಈ ಅಧಿಕಾರ ವಶಪಡಿಸಿಕೊಳ್ಳುವಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಅಧಿಕೃತವಾಗಿ ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಜೆನ್ ಝಿ ಪ್ರತಿಭಟನೆಯಿಂದ ಕ್ರಾಂತಿ
ಮಡಗಾಸ್ಕರ್‌ನಲ್ಲಿ ದೀರ್ಘ ಕಾಲದಿಂದ ವಿದ್ಯುತ್ ಹಾಗೂ ನೀರಿನ ಕೊರತೆಯ ಸಮಸ್ಯೆ ಕಾಡುತ್ತಿತ್ತು. ಇದರಿಂದ ಬೇಸತ್ತು ಜೆನ್ ಝಿಗಳ ಆರಂಭಿಸಿದ ಪ್ರತಿಭಟನೆಗಳಿಂದಾಗಿ ಈ ಕ್ರಾಂತಿ ಉಂಟಾಗಿದೆ. 2009ರಲ್ಲಿ ದಂಗೆ ಮೂಲಕ ಅಧಿಕಾರಕ್ಕೆ ಬಂದ ರಜೋಲಿನಾ ಸರ್ಕಾರದ ಪತನವನ್ನು ಕೆಲವರು ಸಂಭ್ರಮಿಸಿದರೆ, ಮತ್ತೆ ಕೆಲವರು ಮಿಲಿಟರಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ
ಆಫ್ರಿಕನ್ ಯೂನಿಯನ್ ಮತ್ತು ಯುಎನ್ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ಈ ದಂಗೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇತಿಹಾಸದಲ್ಲಿ ಅಸ್ಥಿರತೆಯ ಚಕ್ರದಲ್ಲೇ ಸಿಲುಕಿದ ಮಡಗಾಸ್ಕರ್ ಮತ್ತೆ ಅದೇ ದಾರಿಗೆ ಹೋಗಬಹುದು ಎಂದು ಅನೇಕ ಅಂತಾರಾಷ್ಟ್ರೀಯ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ಅಡಿಪಾಯದ ಸವಾಲುಗಳು
ಮಡಗಾಸ್ಕರ್‌ನ ಮೂಲ ಸಮಸ್ಯೆಗಳಲ್ಲಿ ಪ್ರಮುಖವಾದದ್ದು ಕಡು ಬಡತನ. ಸುಮಾರು 30 ಮಿಲಿಯನ್ ಜನರಲ್ಲಿ ಮುಕ್ಕಾಲು ಭಾಗ ತೀವ್ರ ಬಡತನದಲ್ಲಿ ಬದುಕುತ್ತಿದ್ದಾರೆ. ವ್ಯಾಪಾರದಲ್ಲಿ ಮಡಗಾಸ್ಕರ್ ಪ್ರಮುಖ ದೇಶವಾಗಿದ್ದರೂ ಸಹ, ವರ್ಷಕ್ಕೆ ಅದರ ಸರಾಸರಿ ಆದಾಯ ಕೇವಲ $600 ಮಾತ್ರ. ಅತಿ ಮೂಲಭೂತ ಆಹಾರಗಳ ಬೆಲೆ ಗಗನಕ್ಕೇರಿದೆ. ವಿಶ್ವ ಬ್ಯಾಂಕ್ ವರದಿಯ ಪ್ರಕಾರ, 1960ರ ಸ್ವಾತಂತ್ರ್ಯದ ನಂತರದಿಂದ 2020ರವರೆಗೆ ಪ್ರತಿ ವ್ಯಕ್ತಿಯ GDP ಅರ್ಧಕ್ಕಿಂತ ಕಡಿಮೆ ಆಗಿದೆ.