Nimisha Priya : ನಿಮಿಷಾ ಪ್ರಿಯಾಗೆ ಬಿಗ್ ರಿಲೀಫ್; ಕೇರಳದ ನರ್ಸ್‌ಗೆ ಯೆಮೆನ್ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದು
ಯೆಮೆನ್‌ನಲ್ಲಿ ಜೈಲಿನಲ್ಲಿರುವ ಭಾರತೀಯ ಪ್ರಜೆ ನಿಮಿಷಾ ಪ್ರಿಯಾಗೆ ಕೊನೆಗೂ ರಿಲೀಫ್ ಸಿಕ್ಕಿದೆ. ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಮಂಗಳವಾರ ರದ್ದುಗೊಳಿಸಲಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಚೇರಿ ಹೇಳಿದೆ. 37 ವರ್ಷದ ನಿಮಿಷಾ ಪ್ರಿಯಾ 2018ರ ಜೂನ್‌ನಲ್ಲಿ ಯೆಮೆನ್ ಪ್ರಜೆಯೊಬ್ಬರನ್ನು ಕೊಂದ ಆರೋಪದ ಮೇಲೆ ಜುಲೈ 16 ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು


ಸನಾ: ಯೆಮೆನ್‌ನಲ್ಲಿ ಜೈಲಿನಲ್ಲಿರುವ ಭಾರತೀಯ ಪ್ರಜೆ ನಿಮಿಷಾ ಪ್ರಿಯಾಗೆ (Nimisha Priya) ಕೊನೆಗೂ ರಿಲೀಫ್ ಸಿಕ್ಕಿದೆ. ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಮಂಗಳವಾರ ರದ್ದುಗೊಳಿಸಲಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಚೇರಿ ಹೇಳಿದೆ. ಆದಾಗ್ಯೂ, ಯೆಮೆನ್ ಅಧಿಕಾರಿಗಳಿಂದ ಅಧಿಕೃತ ಲಿಖಿತ ಸಂವಹನ ಇನ್ನೂ ಬಂದಿಲ್ಲ ಎಂದು ಕಚೇರಿ ತಿಳಿಸಿದೆ. ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ "ಈ ಹಿಂದೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು" ನಿರ್ಧರಿಸಲಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ, ಕಾಂತಪುರಂ A P ಅಬುಬಕ್ಕರ್ ಮುಸ್ಲೈಯರ್ ಅವರ ಕಚೇರಿ ತಿಳಿಸಿದೆ.
37 ವರ್ಷದ ನಿಮಿಷಾ ಪ್ರಿಯಾ 2018ರ ಜೂನ್‌ನಲ್ಲಿ ಯೆಮೆನ್ ಪ್ರಜೆಯೊಬ್ಬರನ್ನು ಕೊಂದ ಆರೋಪದ ಮೇಲೆ ಜುಲೈ 16 ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು. ಈ ನಿರ್ಧಾರವನ್ನು ದೇಶದ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ನವೆಂಬರ್ 2023ರಲ್ಲಿ ಎತ್ತಿಹಿಡಿದಿತ್ತು. ಆದರೆ, ಭಾರತೀಯ ಗ್ರ್ಯಾಂಡ್ ಮುಫ್ತಿ ಮತ್ತು ಭಾರತ ಸರ್ಕಾರಗಳ ಜಂಟಿ ಪ್ರಯತ್ನದಿಂದ ಅವರ ಮರಣದಂಡನೆಯನ್ನು ಮುಂದೂಡಲಾಗಿತ್ತು.
ಇದೀಗ ಅವರ ಮರಣದಂಡನೆ ರದ್ದಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ಆದರೂ ಹೆಚ್ಚಿನ ಚರ್ಚೆಗಳನ್ನು ನಿರೀಕ್ಷಿಸಲಾಗಿದೆ. ಕೊಲೆಯಾದ ಯೆಮೆನ್ ಪ್ರಜೆ ತಲಾಲ್ ಅವರ ಕುಟುಂಬದೊಂದಿಗೆ ಪರಿಹಾರ ಸೇರಿದಂತೆ ಉಳಿದ ವಿಷಯಗಳನ್ನು ನಿರಂತರ ಚರ್ಚೆಗಳ ಮೂಲಕ ಅಂತಿಮಗೊಳಿಸಲಾಗುವುದು ಎಂದು ಮುಸ್ಲಿಯಾರ್ ಅವರ ಕಚೇರಿ ಹೇಳಿದೆ.
ಈ ಸುದ್ದಿಯನ್ನೂ ಓದಿ: Nimisha Priya Case: ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ನಿಮಿಷಾ ಪ್ರಿಯಾ ಮುಂದಿದೆ 5 ದಾರಿ
ಏನಿದು ಪ್ರಕರಣ?
ನಿಮಿಷಾ ಪ್ರಿಯಾ ತರಬೇತಿ ಪಡೆದ ನರ್ಸ್ ಆಗಿದ್ದು, ಕೆಲವು ವರ್ಷಗಳಿಂದ ಯೆಮೆನ್‌ನ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆರ್ಥಿಕ ಕಾರಣಗಳಿಂದಾಗಿ ಅವರ ಪತಿ ಮತ್ತು ಅಪ್ರಾಪ್ತ ಮಗಳು 2014 ರಲ್ಲಿ ಭಾರತಕ್ಕೆ ವಾಪಸ್ ಆಗಿದ್ದರು. ಮತ್ತು ಅದೇ ವರ್ಷದಲ್ಲಿ ಯೆಮೆನ್ ಅಂತರ್ಯುದ್ಧದಲ್ಲಿ ಸಿಲುಕಿಕೊಂಡಿತು ಮತ್ತು ದೇಶವು ಹೊಸ ವೀಸಾಗಳನ್ನು ನೀಡುವುದನ್ನು ನಿಲ್ಲಿಸಿದ್ದರಿಂದ ಅವರು ಹಿಂತಿರುಗಲು ಸಾಧ್ಯವಾಗಲಿಲ್ಲ. ಆ ಬಳಿಕ 2015 ರಲ್ಲಿ ನಿಮಿಷಾ ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಅವರೊಂದಿಗೆ ಕೈಜೋಡಿಸಿ ಸನಾದಲ್ಲಿ ಕ್ಲಿನಿಕ್ ಸ್ಥಾಪಿಸಿದ್ದರು. ಬಳಿಕ ಆತ ನಿಮಿಷಾಗೆ ಸಾಕಷ್ಟು ಕಿರುಕುಳ ನೀಡಿದ್ದ. ಆಕೆಯ ಪಾಸ್‌ಪೋರ್ಟ್ ತೆಗೆದುಕೊಂಡು ಸತಾಯಿಸಿದ್ದ. ಪಾಸ್‌ಪೋರ್ಟ್ ಅನ್ನು ಹಿಂಪಡೆಯಲು ನಿಮಿಷಾ ಮಹ್ದಿಗೆ ನಿದ್ರೆಯ ಇಂಜೆಕ್ಷನ್ ನೀಡಿದ್ದರು. ಆದರೆ ಅದು ಓವರ್ ಡೋಸ್ ಆಗಿದ್ದರಿಂದ ಮಹ್ದಿ ಮೃತಪಟ್ಟಿದ್ದರು ಎಂದು ಪ್ರಿಯಾ ಕುಟುಂಬಸ್ಥರು ಹೇಳಿದ್ದಾರೆ. ದೇಶ ತೊರೆಯಲು ಪ್ರಯತ್ನಿಸುತ್ತಿದ್ದಾಗ ನಿಮಿಷಾ ಅವರನ್ನು ಬಂಧಿಸಲಾಯಿತು ಮತ್ತು 2018ರಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿತ್ತು.