ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump), ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ (Elon Musk) ಸೇರಿದಂತೆ ಒಟ್ಟು 338 ಅಭ್ಯರ್ಥಿಗಳು 2025ರ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Prize 2025)ಯ ಕಣದಲ್ಲಿದ್ದಾರೆ. ಶುಕ್ರವಾರ ಯಾರಿಗೆ ಈ ಪ್ರಶಸ್ತಿ ದೊರೆಯಲಿದೆ ಎಂಬುದು ಸ್ಪಷ್ಟವಾಗಲಿದೆ. ವಿಶ್ವದ ಶ್ರೇಷ್ಠ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಅವರು ಸಾಕಷ್ಟು ಬಾರಿ ಉಲ್ಲೇಖವನ್ನೂ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ಇದೀಗ ಎಲ್ಲರೂ ಕುತೂಹಲದಿಂದ ಕಾಯುವಂತಾಗಿದೆ.
2025ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಶುಕ್ರವಾರ ನಡೆಯಲಿದೆ. ಈ ವರ್ಷದ ಶಾಂತಿ ಪ್ರಶಸ್ತಿಗೆ 244 ವ್ಯಕ್ತಿಗಳು ಮತ್ತು 94 ಸಂಸ್ಥೆಗಳು ಸೇರಿದಂತೆ ಒಟ್ಟು 338 ಅಭ್ಯರ್ಥಿಗಳಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿದೆ.
ಕಳೆದ ವರ್ಷದ 286 ನಾಮನಿರ್ದೇಶನವಾಗಿದ್ದು,ಈ ಬಾರಿ ಇದು ಮತ್ತಷ್ಟು ಹೆಚ್ಚಳವಾಗಿದೆ. ನಾಮನಿರ್ದೇಶಿತರ ಬಗ್ಗೆ ಸಮಿತಿಯು ಯಾವುದೇ ಮಾಹಿತಿ ನೀಡದೇ ಇದ್ದರೂ ಕೆಲವು ಪ್ರಮುಖರ ಹೆಸರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ಬಾರಿ ಡೊನಾಲ್ಡ್ ಟ್ರಂಪ್, ಪೋಪ್ ಫ್ರಾನ್ಸಿಸ್, ಇಮ್ರಾನ್ ಖಾನ್, ಎಲಾನ್ ಮಸ್ಕ್, ಅನ್ವರ್ ಇಬ್ರಾಹಿಂ ಮುಂತಾದವರು ಕಣದಲ್ಲಿದ್ದಾರೆ.
ಡೊನಾಲ್ಡ್ ಟ್ರಂಪ್
ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಟ್ರಂಪ್ ಹೆಸರು ಬಹಳ ಹಿಂದಿನಿಂದಲೇ ಕೇಳಿ ಬರುತ್ತಿತ್ತು. ಇದಕ್ಕಾಗಿ ಅವರು ಹಲವಾರು ವೇದಿಕೆಗಳನ್ನು ಬಳಸಿಕೊಂಡು ತಾವು ಈ ಗೌರವಕ್ಕೆ ಅರ್ಹರು ಎಂದು ಹೇಳುತ್ತಿದ್ದರು. ಅಮೆರಿಕದ ಜನರು ಮತ್ತು ವಿದೇಶಗಳ ನಾಯಕರು ಅವರನ್ನು ಹಲವು ಬಾರಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನಿರ್ ಮತ್ತು ಕಾಂಬೋಡಿಯಾ ಪ್ರಧಾನಿ ಹನ್ ಮಾನೆಟ್ ನಾರ್ವೆಯ ಪ್ರಶಸ್ತಿ ಸಮಿತಿಗೆ ಅಮೆರಿಕ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಿದ್ದರು.
ಪೋಪ್ ಫ್ರಾನ್ಸಿಸ್
ಕಳೆದ ಏಪ್ರಿಲ್‌ನಲ್ಲಿ ನಿಧನರಾದ ಪೋಪ್ ಫ್ರಾನ್ಸಿಸ್ ಅವರನ್ನು ಕೂಡ ನೊಬೆಲ್ ಶಾಂತಿ ಪ್ರಶಸ್ತಿಗೆ ಈ ವರ್ಷದ ಆರಂಭದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ಆದರೆ ಈವರೆಗೆ ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿಲ್ಲ. ಹೀಗಾಗಿ ಈ ಬಾರಿ ನೀಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಶಾಂತಿ ಮತ್ತು ಭ್ರಾತೃತ್ವವನ್ನು ಉತ್ತೇಜಿಸುವಲ್ಲಿ ಅವರ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿಗೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನ ವಿಶ್ವ ಒಕ್ಕೂಟ (PWA) ಮತ್ತು ನಾರ್ವೇಜಿಯನ್ ರಾಜಕೀಯ ಪಕ್ಷ ಪಾರ್ಟಿಯೆಟ್ ಸೆಂಟ್ರಮ್ ಸದಸ್ಯರು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಕೆಲಸಕ್ಕಾಗಿ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವುದಾಗಿ ಪಾರ್ಟಿಯೆಟ್ ಸೆಂಟ್ರಮ್ ಹೇಳಿಕೊಂಡಿದೆ.
ಎಲಾನ್ ಮಸ್ಕ್
ಉದ್ಯಮಿ ಎಲಾನ್ ಮಸ್ಕ್ ಅವರನ್ನು ವಾಕ್ ಸ್ವಾತಂತ್ರ್ಯದ ಪರವಾಗಿ ಮಾತನಾಡಿರುವುದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಲಾಗಿದೆ. ಸ್ಲೊವೇನಿಯಾದ ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯ ಬ್ರಾಂಕೊ ಗ್ರಿಮ್ಸ್ ಅವರು ಮಸ್ಕ್ ಅವರ ನಾಮನಿರ್ದೇಶನಕ್ಕಾಗಿ ಅರ್ಜಿಯನ್ನು ನೊಬೆಲ್ ಸಮಿತಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Zubeen Garg: ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್; ಡಿಎಸ್‌ಪಿ ಸಂದೀಪನ್ ಗರ್ಗ್ ಬಂಧನ
ಅನ್ವರ್ ಇಬ್ರಾಹಿಂ
ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಪ್ರೊಫೆಸರ್ ಡಾ. ದತುಕ್ ಉಸ್ಮಾನ್ ಬಕರ್ ಮತ್ತು ಪ್ರೊ. ಡಾ. ಫಾರ್ ಕಿಮ್ ಬೆಂಗ್ ಸಾಮರಸ್ಯ ಮತ್ತು ಶಾಂತಿಗೆ ಅವರ ಕೊಡುಗೆಗಾಗಿ ನಾಮ ನಿರ್ದೇಶನ ಮಾಡಿದ್ದಾರೆ.