ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ವಲಸೆ ನೀತಿ (immigration policy) ಹಾಗೂ ಇರಾನ್ (Iran war) ಮೇಲೆ ಯುಎಸ್ ನಡೆಸುತ್ತಿರುವ ದಾಳಿಯನ್ನು ವಿರೋಧಿಸಿ ಅಮೆರಿಕ ಮತ್ತು ಯುರೋಪ್ ನ ವಿವಿಧ ಭಾಗಗಳಲ್ಲಿ ಶನಿವಾರ "ರಾಜರು ಇಲ್ಲ" ಪ್ರತಿಭಟನೆ (No Kings Protest) ನಡೆಯಿತು. ಇದರಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಅಮೆರಿಕದ ಎಲ್ಲಾ 50 ರಾಜ್ಯಗಳ ಪ್ರಮುಖ ನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಪ್ರತಿಭಟನೆಗಳು ನಡೆಯಿತು. ಅಮೆರಿಕ ಅಧ್ಯಕ್ಷರ ವಿರುದ್ಧ ಒಂದು ವರ್ಷದಲ್ಲಿ ನಡೆಯುತ್ತಿರುವ ಮೂರನೇ ಪ್ರತಿಭಟನೆ ಇದಾಗಿದೆ.
ಡೊನಾಲ್ಡ್ ಟ್ರಂಪ್ ವಿರುದ್ಧ ದೇಶಾದ್ಯಂತ 3,200ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದವು. ಇದರಲ್ಲಿ ಸಣ್ಣ ಸಮುದಾಯಗಳು ಹೆಚ್ಚಾಗಿ ಪಾಲ್ಗೊಂಡಿದ್ದವು. ನ್ಯೂಯಾರ್ಕ್ ನಗರದ ಇಡಾಹೊದ ಡ್ರಿಗ್ಸ್‌ವರೆಗಿನ ವಿವಿಧ ಸ್ಥಳಗಳಲ್ಲಿ ಮೆರವಣಿಗೆಗಳು ನಡೆದವು.
ಇರಾನ್ ನೆಲದಲ್ಲಿ ಸೇನೆ ಇಳಿಸ್ತಾ ಅಮೆರಿಕ? ಹೊರ್ಮುಜ್ ವಶಪಡಿಸಿಕೊಳ್ಳಲು ಟ್ರಂಪ್ ಹರಸಾಹಸ
ವಾಷಿಂಗ್ಟನ್, ಲಾಸ್ ಏಂಜಲೀಸ್, ಡಲ್ಲಾಸ್, ಫಿಲಡೆಲ್ಫಿಯಾ ಮತ್ತು ನ್ಯೂಯಾರ್ಕ್ ಸೇರಿದಂತೆ ನಗರಗಳಲ್ಲಿ ದೊಡ್ಡ ಮಟ್ಟದ ಸಭೆಗಳನ್ನು ಆಯೋಜಿಸಲಾಗಿದ್ದು, ಹತ್ತಾರು ಸಾವಿರ ಜನರು ಸೇರಿ ಪ್ರಜಾಪ್ರಭುತ್ವ ಪರ ಘೋಷಣೆಗಳನ್ನು ಕೂಗಿದರು. ಟ್ರಂಪ್ ವಿರೋಧಿ ಫಲಕಗಳನ್ನು ಪ್ರದರ್ಶಿಸಿದರು. ಪ್ರತಿಭಟನೆ ವೇಳೆ ನಾಗರಿಕ ಸ್ವಾತಂತ್ರ್ಯ, ವಲಸೆ ಜಾರಿ ಮತ್ತು ಇರಾನ್ ಮೇಲೆ ಯುಎಸ್ ಮಿಲಿಟರಿ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಯಿತು.
ಟ್ರಂಪ್ ಅವರು 2025ರ ಜನವರಿಯಲ್ಲಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬಳಿಕ ಅವರ ವಿರುದ್ಧ ನಡೆಯುತ್ತಿರುವ ಅತೀ ದೊಡ್ಡ ಪ್ರತಿಭಟನೆ ಇದಾಗಿದೆ. ಈ ಬಾರಿಯ ಪ್ರತಿಭಟನೆಯಲ್ಲಿ ಗಮನ ಸೆಳೆದಿರುವುದು ಮಿನ್ನೇಸೋಟ. ಇಲ್ಲಿನ ಸೇಂಟ್ ಪಾಲ್‌ನಲ್ಲಿ ದೊಡ್ಡ ಮಟ್ಟದ ಮೆರವಣಿಗೆ ನಡೆಸಲಾಯಿತು.
ಈ ವರ್ಷದ ಆರಂಭದಲ್ಲಿ ಮಿನಿಯಾಪೊಲಿಸ್‌ನಲ್ಲಿ ಸಂಗೀತಗಾರರಾದ ರೆನೀ ಗುಡ್ ಮತ್ತು ಅಲೆಕ್ಸ್ ಪ್ರೆಟ್ಟಿ ಅವರನ್ನು ಫೆಡರಲ್ ಏಜೆಂಟ್‌ಗಳು ಹತ್ಯೆ ಮಾಡಿದ್ದರು. ಇದರ ಬಳಿಕ ಅಮೆರಿಕದಲ್ಲಿ ಭಾರಿ ರಾಜಕೀಯ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಹೀಗಾಗಿ ಇಲ್ಲಿ ವಲಸೆ ಜಾರಿ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಿವೆ. ಶನಿವಾರ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಗುಡ್ ಮತ್ತು ಪ್ರೆಟ್ಟಿ ಅವರ ಚಿತ್ರಗಳನ್ನು ಹಿಡಿದಿದ್ದರು.
ಇರಾನ್ ವಿರುದ್ಧ ಯುಎಸ್ ನಡೆಸುತ್ತಿರುವ ಯುದ್ಧ ಮತ್ತು ವಲಸೆ ಜಾರಿ ಪ್ರತಿಭಟನೆಯ ವಿಷಯವಾಗಿದ್ದರೂ ಕೂಡ ಪ್ರತಿಭಟನಾಕಾರರು ಆರ್ಥಿಕ ಅಸಮಾನತೆ, ನಾಗರಿಕ ಸ್ವಾತಂತ್ರ್ಯ ಮತ್ತು ಟ್ರಾನ್ಸ್‌ಜೆಂಡರ್ ಹಕ್ಕುಗಳಿಗೆ ಸಂಬಂಧಿಸಿ ಕಳವಳ ವ್ಯಕ್ತಪಡಿಸಿದ್ದರು. ವಾಷಿಂಗ್ಟನ್‌ನಲ್ಲಿ ಪ್ರತಿಭಟನಾಕಾರರು ಲಿಂಕನ್ ಸ್ಮಾರಕದಿಂದ ನ್ಯಾಷನಲ್ ಮಾಲ್ ಕಡೆಗೆ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿದರು.
ದೇಶಾದ್ಯಂತ ನಡೆದ ಹೆಚ್ಚಿನ ಪ್ರತಿಭಟನೆಗಳು ಶಾಂತಿಯುತವಾಗಿದ್ದರೂ ಕೂಡ ಲಾಸ್ ಏಂಜಲೀಸ್‌ನಲ್ಲಿರುವ ಫೆಡರಲ್ ಬಂಧನ ಕೇಂದ್ರದ ಬಳಿ ಭದ್ರತಾ ಸಿಬ್ಬಂದಿಯ ಮೇಲೆ ಪ್ರತಿಭಟನಾಕಾರರು ವಸ್ತುಗಳನ್ನು ಎಸೆದರು. ಇದರಿಂದ ಅಧಿಕಾರಿಗಳು ಅಶ್ರುವಾಯು ಬಳಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದರು. ಡಲ್ಲಾಸ್‌ನಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರಿಂದ ಅವರನ್ನು ಬಂಧಿಸಲಾಯಿತು.
ಮಾತುಕತೆಗೂ ಸಿಗುತ್ತಿಲ್ಲ ಇರಾನ್ ನಾಯಕರು! ಕದನ ವಿರಾಮಕ್ಕೆ ಟ್ರಂಪ್ ನಡೆಯೇನು?
ದೇಶಾದ್ಯಂತ ನಡೆದ ಪ್ರತಿಭಟನೆ ಪ್ರದರ್ಶನಗಳನ್ನು ರಿಪಬ್ಲಿಕನ್ ಅಧಿಕಾರಿಗಳು ಟೀಕಿಸಿದರು. ಇದು ರಾಜಕೀಯ ಪ್ರೇರಿತ ಎಂದು ಶ್ವೇತಭವನದ ವಕ್ತಾರರು ಕರೆದಿದ್ದಾರೆ.
ಲಂಡನ್, ಪ್ಯಾರಿಸ್ ಮತ್ತು ರೋಮ್ ಸೇರಿದಂತೆ ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ಕೂಡ ಪ್ರತಿಭಟನೆಗಳು ನಡೆದವು. ಈ ಪ್ರತಿಭಟನೆಗಳು ಇರಾನ್ ಸಂಘರ್ಷಕ್ಕೆ ಸಂಬಂಧಿಸಿ ಬಲಪಂಥೀಯ ರಾಜಕೀಯ ಮತ್ತು ಮಿಲಿಟರಿ ಉದ್ವಿಗ್ನತೆಯನ್ನು ವಿರೋಧಿಸಿತ್ತು.