ಟೆಹ್ರಾನ್: ನಾವು ನಮ್ಮ ಸಹೋದರ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿಲ್ಲ. ನಮ್ಮ ದಾಳಿ ಕೇವಲ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಮೇಲಷ್ಟೇ. ನಾವು ಕೇವಲ ಪ್ರತಿಕ್ರಿಯೆ ನೀಡುತ್ತಿದ್ದೇವೆ. ಹೀಗಾಗಿ ಯುದ್ಧ ನಿಲ್ಲಿಸುವಂತೆ ನಮ್ಮ ಮೇಲೆ ಒತ್ತಡ ಹೇರಬೇಡಿ. ಏನಿದ್ದರೂ ವಾಷಿಂಗ್ಟನ್ ಮತ್ತು ಟೆಲ್ ಅವಿವ್ ಮೇಲೆ ಒತ್ತಡ ಹೇರುವಂತೆ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಹೇಳಿದ್ದಾರೆ. ಯುದ್ಧ ಮಾಡುತ್ತಿರುವುದು ಟೆಹ್ರಾನ್ ಎನ್ನಲಾಗುತ್ತಿದೆ. ಆದರೆ ಅದು ನಮಗೆ ಅನಿವಾರ್ಯ ಆಯ್ಕೆಯಾಗಿದೆ ಎಂದು ಹೇಳಿದರು.
ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ ಯುಎಸ್ ಮತ್ತು ಇಸ್ರೇಲ್ ಸಂಘರ್ಷವನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅಬ್ಬಾಸ್ ಅರಗ್ಚಿ, ಗಲ್ಫ್ ಪ್ರದೇಶದಲ್ಲಿನ ಯುಎಸ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ. ಅದು ನೆರೆಯ ದೇಶಗಳ ಮೇಲೆ ನಡೆಸುವ ಯುದ್ಧವಲ್ಲ ಎಂದರು.
ಖಮೇನಿ ಹತ್ಯೆಗೆ ಪ್ರತಿಯಾಗಿ ಇಸ್ರೇಲ್ ಮೇಲೆ ಇರಾನ್ ದಾಳಿ, 9 ಸಾವು
ಇರಾನ್‌ನ ದಾಳಿಗಳು ಇರಾನ್ ವಿರುದ್ಧದ ಕಾರ್ಯಾಚರಣೆಗಳನ್ನು ಬೆಂಬಲಿಸುವ ಅಮೆರಿಕನ್ ಆಸ್ತಿಗಳ ಮೇಲೆ ಕೇಂದ್ರೀಕೃತವಾಗಿವೆ. ನಾವು ಪರ್ಷಿಯನ್ ಕೊಲ್ಲಿಯಲ್ಲಿರುವ ನಮ್ಮ ಸಹೋದರ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತಿಲ್ಲ ಎಂದ ಅವರು, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಟೀಕೆಯ ಬಳಿಕ ಪ್ರತಿಕ್ರಿಯೆ ನೀಡಿದರು. ನಹ್ಯಾನ್ ಅವರು, ಇರಾನ್ ನಮ್ಮ ದೇಶದ ಹಲವಾರು ಭಾಗಗಳಿಗೆ ಕ್ಷಿಪಣಿಗಳಿಂದ ದಾಳಿ ನಡೆಸಿದೆ ಎಂದು ಹೇಳಿದ್ದರು.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆ ನಡೆಸಿದ ದಾಳಿಯ ಪರಿಣಾಮ ಇರಾನ್ ಹಾರಿಸಿರುವ ಕ್ಷಿಪಣಿಗಳು ಯುಎಇಯಲ್ಲಿ ಮಾತ್ರವಲ್ಲದೆ ಹಲವಾರು ಗಲ್ಫ್ ದೇಶಗಳ ಮೇಲೆ ಬಿದ್ದಿದೆ. ಇದರಿಂದ ದುಬೈ, ಕತಾರ್, ಒಮಾನ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಸಂಘರ್ಷ ಮಧ್ಯಪ್ರಾಚ್ಯ ರಾಷ್ಟ್ರಗಳಾದ್ಯಂತ ಹರಡಿದೆ.
ಅಮೆರಿಕದ ಪ್ರದೇಶಗಳ ಮೇಲೆ ಇರಾನ್ ನೇರವಾಗಿ ದಾಳಿ ನಡೆಸುವುದು ಸಾಧ್ಯವಿಲ್ಲ. ಹೀಗಾಗಿ ಅಮೆರಿಕದ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಪ್ರಾದೇಶಿಕ ನೆಲೆಗಳು ಮತ್ತು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ಮಾಡಿದೆ. ಯುಎಸ್ ಮಿಲಿಟರಿ ದಾಳಿಗೆ ಪ್ರತಿಕ್ರಿಯೆ ನೀಡಲೇಬೇಕು. ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅಬ್ಬಾಸ್ ಅರಗ್ಚಿ ಹೇಳಿದ್ದಾರೆ.
ಇರಾನ್ ದಾಳಿಯನ್ನು ಮಿಲಿಟರಿ ಉದ್ದೇಶಗಳಿಗೆ ಸೀಮಿತಗೊಳಿಸಲು ಯುಎಸ್ ಪ್ರಯತ್ನಿಸುತ್ತಿದೆ. ನಾವು ಅವರ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದ್ದರಿಂದ ಅವರು ಮಿಲಿಟರಿ ನೆಲೆಗಳನ್ನು ಸ್ಥಳಾಂತರಿಸಿದ್ದಾರೆ. ಇರಾನ್ ಹೋರಾಡುವ ಪ್ರತಿಜ್ಞೆ ಮಾಡಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವುದೆಲ್ಲ ನಮ್ಮ ತಪ್ಪಲ್ಲ, ಅದು ನಮ್ಮ ಆಯ್ಕೆಯಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಇದು ಅಮೆರಿಕ ಮತ್ತು ಇಸ್ರೇಲ್ ಹೇರಿದ ಯುದ್ಧ. ಈ ಯುದ್ಧವನ್ನು ನಿಲ್ಲಿಸಲು ನಮ್ಮ ಮೇಲೆ ಒತ್ತಡ ಹೇರಬಾರದು, ಅವರನ್ನು ಒತ್ತಾಯಿಸಲಿ ಎಂದರು.
ದಾಳಿಗಳು ಮುಂದುವರಿಯುವವರೆಗೂ ಇರಾನ್ ವಿರೋಧಿಸುತ್ತಲೇ ಇರುತ್ತದೆ. ಯುದ್ಧದಿಂದ ಯಾವುದೇ ಪ್ರಯೋಜನವನ್ನು ಇಸ್ರೇಲ್ ಮತ್ತು ಯುಎಸ್ ಪಡೆಯುವುದಿಲ್ಲ. ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಕಾನೂನುಬಾಹಿರವಾಗಿದೆ. ಇದು ಇಲ್ಲಿನ ರಾಜಕೀಯವನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.