ಹೊಸ ದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯ ಬಳಿಕ ಪಾಕಿಸ್ತಾನ (Pakisthan) ಬಾಲ ಸುಟ್ಟ ಮಂಗನಂತೆ ಆಗಿದೆ. ಇದೀಗ ಪಾಕ್ ಮತ್ತೆ ತನ್ನ ನಾಲಗೆ ಹರಿಯಬಿಟ್ಟಿದೆ. ಭಾರತದಿಂದ ಪೆಟ್ಟು ತಿಂದು ಯುದ್ದ ನಿಲ್ಲಿಸುವಂತೆ ಅಂಗಲಾಚಿದ್ದ ಪಾಕಿಸ್ತಾನ ಮೇಲಿಂದ ಮೇಲೆ ಭಾರತವನ್ನು ಕೆರಳಿಸುವಂತಹ ಹೇಳಿಕೆಯನ್ನು ನೀಡುತ್ತಿದೆ. ಹೌದು, ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಮುಂದುವರಿಸಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಭಾರತ ನೀಡಿದ್ದ ಎಚ್ಚರಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, “ಭಾರತವು ಅದರ ಯುದ್ಧ ವಿಮಾನಗಳ ಅವಶೇಷಗಳಡಿಯಲ್ಲಿ ಹೂತುಹೋಗಲಿದೆ” ಎಂದು ಎಚ್ಚರಿಸಿದ್ದರು.
ಇದೀಗ ಮತ್ತೇ ಭಾರತದ ಬಗ್ಗೆ ತುಚ್ಚವಾಗಿ ಮಾತನಾಡಿದ್ದು, ಮತ್ತೊಂದು ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ಹೊರತುಪಡಿಸಿ ಭಾರತ “ನಿಜವಾಗಿಯೂ ಎಂದಿಗೂ ಒಗ್ಗಟ್ಟಾಗಿರಲಿಲ್ಲ ಅಥವಾ ಅಖಂಡವಾಗಿರಲಿಲ್ಲ” ಎಂಬ ವಿವಾದಾತ್ಮಕ ನೀಡಿದ್ದಾರೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆ:
ಪಾಕಿಸ್ತಾನದ ಸ್ಥಳೀಯ ದೃಶ್ಯ ಮಾಧ್ಯಮವಾದ ಸಮಾ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆಸಿಫ್ ಈ ರೀತಿ ಅಸಂಬದ್ಧ ಹೇಳಿಕೆಯನ್ನು ಕೊಟ್ಟಿದ್ದು, “ಭಾರತದೊಂದಿಗೆ ಯುದ್ಧದ ಸಾಧ್ಯತೆಗಳು ನಿಜ” ಎಂದು ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ವಿವಾದಾತ್ಮಕ ಹೇಳಿಕೆ ನಗೆಪಾಟಲಿಗೀಡಾಗಿದೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯ ಮೂಲಕ ಸುದ್ದಿಯಲ್ಲಿದ್ದಾರೆ. ಅವರು “ಭಾರತ ಎಂದಿಗೂ ಒಂದೇ ಏಕೀಕೃತ ರಾಷ್ಟ್ರವಾಗಿರಲಿಲ್ಲ. ಸಂಕ್ಷಿಪ್ತವಾಗಿ ಔರಂಗಜೇಬನ ಆಳ್ವಿಕೆಯ ಅವಧಿಯಲ್ಲಿ ಮಾತ್ರ ಭಾರತ ಒಗ್ಗಟ್ಟಾಗಿತ್ತು. ಔರಂಗಜೇಬ್ ಉತ್ತರದಿಂದ ದಕ್ಷಿಣದವರೆಗೆ ಇಡೀ ಭಾರತವನ್ನು ಒಂದುಗೂಡಿಸಿದ ದೊರೆ. ಆತನ ಅವಧಿಯಲ್ಲಿ ಭಾರತ ಅತ್ಯಂತ ಸಮರ್ಥ ರಾಷ್ಟ್ರವಾಗಿತ್ತು” ಎಂದು ಹೇಳಿ, ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ.
ಈ ಸುದ್ದಿಯನ್ನು ಓದಿ: Nobel Peace Prize 2025: ಟ್ರಂಪ್, ಮಸ್ಕ್, ಪೋಪ್ ಫ್ರಾನ್ಸಿಸ್, ಇಮ್ರಾನ್ ಖಾನ್...: ನೊಬೆಲ್ ಶಾಂತಿ ಪ್ರಶಸ್ತಿಯ ಸಂಭಾವ್ಯರ ಪಟ್ಟಿಯಲ್ಲಿದೆ ಅಚ್ಚರಿಯ ಹೆಸರು
ಆಸಿಫ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇತಿಹಾಸಕಾರರು ಮತ್ತು ನೆಟ್ಟಿಗರು ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕ್ರಿ.ಪೂ. 322ರಿಂದ ಕ್ರಿ.ಪೂ. 185ರವರೆಗೆ ಅಸ್ತಿತ್ವದಲ್ಲಿದ್ದ ಮೌರ್ಯ ಸಾಮ್ರಾಜ್ಯವು ಭಾರತೀಯ ಉಪಖಂಡದ ಹೆಚ್ಚಿನ ಭಾಗವನ್ನು ಏಕೀಕರಿಸಿತ್ತು. ನಂತರ ಗುಪ್ತ, ಹರ್ಷವರ್ಧನ ಹಾಗೂ ಚೋಳ ಸಾಮ್ರಾಜ್ಯಗಳ ಕಾಲದಲ್ಲಿಯೂ ಭಾರತ ರಾಜಕೀಯ ಹಾಗೂ ಸಾಂಸ್ಕೃತಿಕ ಏಕತೆಯನ್ನು ಕಂಡಿತ್ತು ಎಂಬುದು ಇತಿಹಾಸದ ಸತ್ಯ ಎಂದು ಕೆಲವರು ಹೇಳಿದ್ದಾರೆ.
ಇನ್ನು ಪಹಲ್ಗಾಮ್‌ನಲ್ಲಿ 26 ಭಾರತೀಯರ ಹತ್ಯೆಗೆ ಭಾರತ ‘ಆಪರೇಷನ್ ಸಿಂದೂರ’ದ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡಿತು. ಇಡೀ ದೇಶ ನಿದ್ದೆಯಲ್ಲಿರುವಾಗ ರಾತ್ರಿ 1 ಗಂಟೆಯಿಂದ ಎರಡರ ನಡುವೆ ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಮೂರು ನಿಷೇಧಿತ ಉಗ್ರ ಸಂಘಟನೆಗಳ ಒಂಬತ್ತು ನೆಲೆಗಳ ಮೇಲೆ ಕ್ಷಿಪಣಿಗಳ ದಾಳಿಯನ್ನು ಮಾಡಿತ್ತು. ಪರಿಣಾಮವಾಗಿ 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು.