ಇಸ್ಲಮಾಬಾದ್: ಪಾಕಿಸ್ತಾನದ (Pakistan) ಬಲೂಚಿಸ್ತಾನದಲ್ಲಿ ಮಂಗಳವಾರ 450ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲನ್ನು (Train Hijack) ಅಪಹರಿಸಿರುವ ಪ್ರತ್ಯೇಕತಾವಾದಿ ಉಗ್ರರು, 182 ಮಂದಿ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಬಂಡೂಕೋರರು ಅಪಹರಣದ ಒಂದೊಂದೇ ವಿಡಿಯೊ ರಿಲೀಸ್ ಮಾಡುತ್ತಿದ್ದಾರೆ. ಇದೀಗ ಪಾಕಿಸ್ತಾನದ ರೈಲನ್ನು ಗುರಿಯಾಗಿಸಿ ಬಲೂಚ್ ಬಂಡುಕೋರರು ಬಾಂಬ್ ಸ್ಫೋಟಿಸಿದ ವಿಡಿಯೊ ಇದೀಗ ವೈರಲ್(Viral Video) ಆಗುತ್ತಿದೆ.
ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನದ ಬಂಡುಕೋರರ ಗುಂಪೊಂದು ಮಂಗಳವಾರ ಮಧ್ಯಾಹ್ನ ರೈಲ್ವೆ ಹಳಿಯ ಒಂದು ಭಾಗದ ಮೇಲೆ ಬಾಂಬ್ ದಾಳಿ ನಡೆಸಿ ರೈಲಿಗೆ ನುಗ್ಗಿದ್ದು, ಪ್ರಯಾಣಿಕರು ಮತ್ತು ಪಾಕ್ ಸೈನಿಕರನ್ನು ವಶಕ್ಕೆ ಪಡೆದಿತ್ತು. ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿರುವ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿಂದಿನ ಕಾರಣವಾಗಿರುವ ಬಲೂಚ್ ಲಿಬರೇಶನ್ ಆರ್ಮಿ ಈ ಕೃತ್ಯದ ಹಿಂದೆ ಇದ್ದು, ಇದೀಗ ಈ ಕುರಿತ ವೀಡಿಯೊವೊಂದನ್ನು ಬಿಡುಗಡೆ ಮಾಡಿದೆ.
ಬಂಡುಕೋರರ ದಾಳಿ ವಿಡಿಯೊ ಇಲ್ಲಿದೆ:
ದೂರದ ಗಡಿ ಜಿಲ್ಲೆಯ ಸುರಂಗದ ಪ್ರವೇಶದ್ವಾರದಲ್ಲಿ ಬಂಡುಕೋರರು ರೈಲನ್ನು ವಶಪಡಿಸಿಕೊಂಡಾಗ 450ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಎರಡು ದಿನಗಳಲ್ಲಿ, ಪಾಕಿಸ್ತಾನಿ ಪಡೆಗಳು ಬಂಡುಕೋರರ ವಶದಲ್ಲಿದ್ದ 190 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ 26ಕ್ಕೂ ಹೆಚ್ಚು ಬಂಡುಕೋರರನ್ನು ಹೊಡೆದುರುಳಿಸಿದೆ.
ಈ ಸುದ್ದಿಯನ್ನೂ ಓದಿ: ಪಾಕಿಸ್ತಾನ ಮಿಲಿಟರಿ ಕ್ಯಾಂಪ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ; ಕನಿಷ್ಠ 9 ಸಾವು
ಪಾಕಿಸ್ತಾನ ವಿರೋಧಿ ಧೋರಣೆ ಹೊಂದಿರುವ ಬಲೂಚಿಸ್ತಾನದ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಉಗ್ರರು ಖೈಬರ್ ಕಣಿವೆಯ ಗುಡಾಲಾರ್ ಹಾಗೂ ಪಿರು ಕೊಣೇರಿ ನಡುವಿನ 8ನೇ ಸುರಂಗದ ಸನಿಹ ಸಾಗುತ್ತಿದ್ದ 9 ಕೋಚ್‌ಗಳಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ರೈಲು ಚಾಲಕ ಹಾಗೂ ಕೆಲವರು ಗಾಯಗೊಂಡಿದ್ದಾರೆ. ಬಳಿಕ ರೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಎಲ್ಲಾ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದಾದ ಬಳಿಕ ಪಾಕಿಸ್ತಾನ ಸೇನಾ ಪಡೆ ಪ್ರತಿ ಕಾರ್ಯಾಚರಣೆ ಕೈಗೊಂಡಲ್ಲಿ ಪರಿಣಾಮಗಳು ತೀವ್ರವಾಗಿರಲಿವೆ. ನಮ್ಮ ವಿರುದ್ಧ ಸೇನೆ ದಂಡೆತ್ತಿ ಬಂದರೆ ಎಲ್ಲಾಒತ್ತೆಯಾಳುಗಳನ್ನು ಕೊಲ್ಲುತ್ತೇವೆ. ಮುಂದಾಗುವ ರಕ್ತಪಾತದ ಹೊಣೆಯನ್ನು ಸೇನೆಯೇ ಹೊರಬೇಕಾಗುತ್ತದೆ,' ಎಂದು ಬಿಎಲ್‌ಎ ಎಚ್ಚರಿಕೆ ನೀಡಿತ್ತು.