ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

ಪಾಕಿಸ್ತಾನ ಮಿಲಿಟರಿ ಕ್ಯಾಂಪ್‌ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ; ಕನಿಷ್ಠ 9 ಸಾವು

ವಾಯುವ್ಯ ಪಾಕಿಸ್ತಾನದಲ್ಲಿ ನಡೆದ 2 ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿದ್ದಾರೆ. ಬನ್ನು ಎಂಬಲ್ಲಿನ ಮಿಲಿಟರಿ ಕ್ಯಾಂಪ್ ಮೇಲೆ‌ ಈ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದೆ. ಇಬ್ಬರು ಆತ್ಮಾಹುತಿ ದಾಳಿಕೋರರು ಸ್ಫೋಟಕಗಳನ್ನು ತುಂಬಿದ್ದ 2 ಕಾರುಗಳನ್ನು ಮಿಲಿಟರಿ ಕ್ಯಾಂಪ್‌ನ ಕಾಂಪೌಂಡ್‌ ಒಳಗೆ ನುಗ್ಗಿಸಿದ್ದಾರೆ.

ಪಾಕಿಸ್ತಾನ ಮಿಲಿಟರಿ ಕ್ಯಾಂಪ್‌ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ

Profile Ramesh B Mar 4, 2025 11:12 PM

ಇಸ್ಲಾಮಾಬಾದ್‌: ವಾಯುವ್ಯ ಪಾಕಿಸ್ತಾನದಲ್ಲಿ ನಡೆದ 2 ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿದ್ದಾರೆ. ಬನ್ನು (Bannu) ಎಂಬಲ್ಲಿನ ಮಿಲಿಟರಿ ಕ್ಯಾಂಪ್ ಮೇಲೆ‌ ಈ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದೆ. ಇಬ್ಬರು ಆತ್ಮಾಹುತಿ ದಾಳಿಕೋರರು ಸ್ಫೋಟಕಗಳನ್ನು ತುಂಬಿದ್ದ 2 ಕಾರುಗಳನ್ನು ಮಿಲಿಟರಿ ಕ್ಯಾಂಪ್‌ನ ಕಾಂಪೌಂಡ್‌ ಒಳಗೆ ನುಗ್ಗಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ʼʼಮಂಗಳವಾರ (ಮಾ. 4) ಇಬ್ಬರು ಆತ್ಮಾಹುತಿ ಬಾಂಬರ್‌ಗಳು, ಸ್ಫೋಟಕಗಳಿಂದ ತುಂಬಿದ್ದ 2 ಕಾರುಗಳನ್ನು ಪಾಕಿಸ್ತಾನದ ಮಿಲಿಟರಿ ಕ್ಯಾಂಪ್‌ನ ಒಳಗೆ ನುಗ್ಗಿಸಿದ್ದಾರೆ'' ಎಂದು ಮಾಧ್ಯಮ ಸಂಸ್ಥೆ ಎಎಫ್‌ಪಿ ಮಾಹಿತಿ ನೀಡಿದೆ.

ಖೈಬರ್ ಪಖ್ತುನ್ಖ್ವಾ (Khyber Pakhtunkhwa) ಪ್ರಾಂತ್ಯದ ಬನ್ನು ಎಂಬಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ಉಗ್ರಗಾಮಿ ಗುಂಪು ವಹಿಸಿಕೊಂಡಿದೆ ಮೂಲಗಳು ತಿಳಿಸಿವೆ. ʼʼಮಿಲಿಟರಿ ಗುಂಪಿನ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 9 ಜನರು ಸಾವನ್ನಪ್ಪಿದ್ದಾರೆ'' ಎಂದು ಬನ್ನು ಬಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ 3 ಮಕ್ಕಳು ಸೇರಿದ್ದಾರೆ.



ಕಾರು ಮಿಲಿಟರಿ ಕ್ಯಾಂಪ್‌ನ ಕಾಂಪೌಂಡ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಭಾರೀ ಸ್ಫೋಟ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕಾರುಗಳು ಸ್ಫೋಟವಾಗುತ್ತಿದ್ದಂತೆ ಹಲವು ಉಗ್ರರು ಮಿಲಿಟರಿ ಕ್ಯಾಂಪ್‌ ಒಳಗೆ ನುಗ್ಗಲು ಯತ್ನಿಸಿದ್ದರು. ಆದರೆ ಸೈನಿಕರು ಉಗ್ರರ ದಾಳಿಯ ಯೋಜನೆಯನ್ನು ವಿಫಲಗೊಳಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ಸೇನೆ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಕಾರ್ಯಾಚರಣೆ ಮುಂದುವರಿಸಿದೆ.

ʼʼಸ್ಫೋಟದ ರಭಸಕ್ಕೆ ದಟ್ಟ ಹೊಗೆ ಸ್ಥಳದಲ್ಲಿ ಕಂಡು ಬಂತು. ಅಲ್ಲದೆ ಸ್ಫೋಟಗಳ ನಂತರ ಗುಂಡಿನ ಚಕಮಕಿ ನಡೆಯಿತುʼʼ ಎಂದು ಪೊಲೀಸ್ ಅಧಿಕಾರಿ ಜಾಹಿದ್ ಖಾನ್ ತಿಳಿಸಿದ್ದಾರೆ. ಮೃತ ಸಂತ್ರಸ್ತರು ಸ್ಫೋಟ ನಡೆದ ಸ್ಥಳದ ಸಮೀಪ ವಾಸಿಸುತ್ತಿದ್ದರು. ಇಬ್ಬರು ಆತ್ಮಾಹುತಿ ಬಾಂಬರ್‌ಗಳು ವಿಶಾಲವಾದ ಮಿಲಿಟರಿ ಪ್ರದೇಶದ ಕಾಂಪೌಂಡ್‌ ಬಳಿ ತಮ್ಮನ್ನು ಸ್ಫೋಟಿಸಿಕೊಂಡರು ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಫೋಟದ ನಂತರ 5-6 ಆಕ್ರಮಣಕಾರರು ಮಿಲಿಟರಿ ನೆಲೆಯೊಳಗೆ ನುಗ್ಗಲು ಯತ್ನಿಸಿದರೂ ಅವರನ್ನು ತಡೆಯಲಾಯಿತು.

ಈ ಸುದ್ದಿಯನ್ನೂ ಓದಿ: Donald Trump: ಉಕ್ರೇನ್‌ಗೆ ಶಾಕ್‌ ಕೊಟ್ಟ ಟ್ರಂಪ್‌; ಅಮೆರಿಕದಿಂದ ಮಿಲಿಟರಿ ನೆರವು ಸ್ಥಗಿತ

ಹೊಣೆಹೊತ್ತ ಹಫೀಜ್ ಗುಲ್ ಬಹದ್ದೂರ್ ಗುಂಪು

ಈ ದಾಳಿಯ ಹೊಣೆಯನ್ನು ಹಫೀಜ್ ಗುಲ್ ಬಹದ್ದೂರ್ ಹೆಸರಿನ ಸಶಸ್ತ್ರ ಗುಂಪು ಹೊತ್ತುಕೊಂಡಿದೆ. ಈ ಸಂಘಟನೆ 2001ರಿಂದ ಯುಎಸ್ ನೇತೃತ್ವದ ನ್ಯಾಟೋ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ, ಅಫ್ಘಾನಿಸ್ತಾನದ ತಾಲಿಬಾನ್‌ಗೆ ಬೆಂಬಲವಾಗಿ ನಿಂತಿದೆ. "ನಮ್ಮ ಹೋರಾಟಗಾರರು ನಿರ್ದಿಷ್ಟ ಕಾರ್ಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ" ಎಂದು ಹಫೀಜ್ ಗುಲ್ ಬಹದ್ದೂರ್ ಉಗ್ರ ಸಂಘಟನೆ ತಿಳಿಸಿದೆ.

ಉಗ್ರರು ಈ ಹಿಂದೆಯೂ ಬನ್ನು ಪ್ರದೇಶವನ್ನು ಗುರಿಯಾಗಿಸಿಕೊಂಡು ಹಲವು ಬಾರಿ ದಾಳಿ ನಡೆಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಇಲ್ಲಿ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 12 ಯೋಧರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.