ಬಲೂಚಿಸ್ತಾನ, , ಆಗಸ್ಟ್ 12: ಬಲೂಚಿಸ್ತಾನ (Balochistan) ಪ್ರಾಂತ್ಯದ ಸುರಾಬ್ ಜಿಲ್ಲೆಯಲ್ಲಿ ಪಾಕಿಸ್ತಾನ್ ಮಿಲಿಟರಿ (Pakistani military) ನಡೆಸಿದ ತಡರಾತ್ರಿಯ ವೈಮಾನಿಕ ದಾಳಿಯಲ್ಲಿ (Airstrike) 9 ಮಕ್ಕಳು ಮತ್ತು 7 ಮಹಿಳೆಯರು ಸೇರಿದಂತೆ ಕನಿಷ್ಠ 28 ನಾಗರಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಭೀಕರ ಘಟನೆಯು ಪಾಕಿಸ್ತಾನ ಸೇನೆಯ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ವೈಖರಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ತೀವ್ರ ಪ್ರಶ್ನೆಗಳನ್ನು ಹಾಗೂ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶವನ್ನು ಹುಟ್ಟುಹಾಕಿದೆ.
ದಾಳಿಯ ವಿವರ
ಮಧ್ಯರಾತ್ರಿ ಸುಮಾರು 2:00 ಗಂಟೆಯ ಅವಧಿಯಲ್ಲಿ ಸುರಾಬ್ ಜಿಲ್ಲೆಯ ಗೊಂಡಾನ್ ಗ್ರಾಮದಲ್ಲಿ ಜನರು ಗಾಢ ನಿದ್ರೆಯಲ್ಲಿದ್ದಾಗ ಈ ವೈಮಾನಿಕ ದಾಳಿ ನಡೆದಿದೆ. ದಾಳಿಯಲ್ಲಿ 9 ಸಣ್ಣ ಮಕ್ಕಳು, 7 ಮಹಿಳೆಯರು ಹಾಗೂ 12 ಪುರುಷರು ಸೇರಿದಂತೆ ಒಟ್ಟು 28 ನಿರಪರಾಧಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೆ 17 ಜನರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ದಾಳಿಯ ರಭಸಕ್ಕೆ ಗ್ರಾಮದ ಸಾಲು ಸಾಲು ಮನೆಗಳು ನೆಲಸಮಗೊಂಡಿವೆ. ಬೃಹತ್ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಣ್ಣ ಮಕ್ಕಳು ಮತ್ತು ವೃದ್ಧರ ಶವಗಳು ಸಿಲುಕಿರುವ ಹಾಗೂ ದೇಹದ ಭಾಗಗಳು ಛಿದ್ರಗೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊರಬಂದಿದ್ದು, ಪ್ರತಿಯೊಬ್ಬರನ್ನೂ ಕಂಬನಿ ಮಿಡಿಯುವಂತೆ ಮಾಡಿದೆ.
ಪಾಕಿಸ್ತಾನ ಸೇನೆಯು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಹೆಸರಿನಲ್ಲಿ ತನ್ನದೇ ದೇಶದ ಅಮಾಯಕ ನಾಗರಿಕರನ್ನು ಬಲಿ ಪಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್ 21 ಮತ್ತು 22 ರಂದು ಖೈಬರ್ ಪಖ್ತುಂಖ್ವಾದ ತಿರಾ ಕಣಿವೆಯಲ್ಲಿ ಪಾಕ್ ಮಿಲಿಟರಿ ನಡೆಸಿದ ಇಂತಹುದೇ ವೈಮಾನಿಕ ದಾಳಿಯಲ್ಲಿ 30 ನಾಗರಿಕರು ಅಸಹಾಯಕರಾಗಿ ಪ್ರಾಣ ಕಳೆದುಕೊಂಡಿದ್ದರು. ಮಿಲಿಟರಿಯ ಈ ದೌರ್ಜನ್ಯವು ಸ್ಥಳೀಯರಲ್ಲಿ ತೀವ್ರ ಭಯ ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸಿದೆ.
ಮಾನವ ಹಕ್ಕುಗಳ ಉಲ್ಲಂಘನೆ ಮತ್ತು
ಸುರಾಬ್ ಗ್ರಾಮದಲ್ಲಿ ನಡೆದಿರುವ ಈ ಭೀಕರ ಹತ್ಯಾಕಾಂಡದ ಬಳಿಕ ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಐಎಸ್ಪಿಆರ್ (ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್) ಸಂಪೂರ್ಣ ಮೌನ ವಹಿಸಿದೆ. ಈವರೆಗೆ ಸೇನಾ ಪ್ರಧಾನ ಕಚೇರಿಯು ಕಾರ್ಯಾಚರಣೆಯ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ವಿವರಣೆಯನ್ನು ನೀಡದೆ ಜಾರಿಕೊಳ್ಳುತ್ತಿದೆ. ಸ್ಥಳೀಯ ಮಾನವ ಹಕ್ಕುಗಳ ಸಂಘಟನೆಗಳು ಈ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದು, ಈ ಅನ್ಯಾಯದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿವೆ