ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಹಂಚಿಕೆಯ ಗಡಿಯಲ್ಲಿ ಮತ್ತೆ (Pakistan Vs Afghanistan War) ಘರ್ಷಣೆಗಳು ನಡೆದ ನಂತರ ಪಾಕಿಸ್ತಾನ ಅಫ್ಘಾನ್ ತಾಲಿಬಾನ್ ಸರ್ಕಾರದ ಮೇಲೆ "ಮುಕ್ತ ಯುದ್ಧ" ಘೋಷಿಸಿದೆ. ಈ ವಾರದ ಆರಂಭದಲ್ಲಿ ಮಾರಕ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನಿ ಗಡಿ ಪಡೆಗಳ ಮೇಲೆ ದಾಳಿ ಮಾಡಿದ ಗಂಟೆಗಳ ನಂತರ, ಶುಕ್ರವಾರ ಪಾಕಿಸ್ತಾನವು ಅಫ್ಘಾನಿಸ್ತಾನದ ಕಾಬೂಲ್ ಮತ್ತು ಕಂದಹಾರ್ ಮೇಲೆ ಬಾಂಬ್ ದಾಳಿ ಮಾಡಿತ್ತು. ನಮ್ಮ ತಾಳ್ಮೆ ಮಿತಿಯನ್ನು ತಲುಪಿದೆ. ಈಗ ನಮ್ಮ ಮತ್ತು ನಿಮ್ಮ ನಡುವೆ ಮುಕ್ತ ಯುದ್ಧ ನಡೆಯುತ್ತಿದೆ" ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಪಾಕಿಸ್ತಾನಿ ಸೇನೆಯು ಅಫ್ಘಾನಿಸ್ತಾನದ ವಿರುದ್ಧ 'ಘಜಾಬ್ ಲಿಲ್ ಹಕ್' ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾಗಿ ಘೋಷಿಸಿದ್ದಾರೆ.
ಹಿಂಸಾಚಾರ ಉಲ್ಬಣಗೊಳ್ಳುತ್ತಿದ್ದಂತೆ, ಎರಡೂ ಮಿಲಿಟರಿಗಳು ಇನ್ನೊಂದು ಬದಿಯಲ್ಲಿ ಡಜನ್‌ಗಟ್ಟಲೆ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡಿವೆ. ಕಾಬೂಲ್, ಕಂದಹಾರ್‌ನಲ್ಲಿರುವ ಅಫ್ಘಾನ್ ತಾಲಿಬಾನ್ ರಕ್ಷಣಾ ಸ್ಥಾನಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಪಾಕಿಸ್ತಾನದ ವೈಮಾನಿಕ ದಾಳಿಗಳು ಅಫ್ಘಾನ್ ತಾಲಿಬಾನ್ ಸರ್ಕಾರದ 27 ಔಟ್‌ಪೋಸ್ಟ್‌ಗಳನ್ನು ನಾಶಪಡಿಸಿದವು ಮತ್ತು ಪಾಕಿಸ್ತಾನ ಒಂಬತ್ತು ಔಟ್‌ಪೋಸ್ಟ್‌ಗಳನ್ನು ವಶಪಡಿಸಿಕೊಂಡಿತು.
ಅಫ್ಘಾನ್ ಪಡೆಗಳೇ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿವೆ ಎಂದು ಆರೋಪಿಸಿರುವ ಪಾಕಿಸ್ತಾನ, ತನ್ನ ಕೇವಲ ಇಬ್ಬರು ಸೈನಿಕರು ಹತರಾಗಿದ್ದಾರೆ. ಮತ್ತು ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 36 ಅಫ್ಘಾನ್ ಹೋರಾಟಗಾರರು ಹತರಾಗಿದ್ದಾರೆ ಎಂದು ತಿಳಿಸಿದೆ. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, "ಪಾಕಿಸ್ತಾನ ಶಾಂತಿ ಮತ್ತು ಪ್ರಾದೇಶಿಕ ಸಮಗ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ" ಎಂದು ಉಲ್ಲೇಖಿಸಿದ್ದಾರೆ. "ನಮ್ಮ ಸಶಸ್ತ್ರ ಪಡೆಗಳ ಪ್ರತಿಕ್ರಿಯೆ ಸಮಗ್ರ ಮತ್ತು ನಿರ್ಣಾಯಕವಾಗಿದೆ. ನಮ್ಮ ಶಾಂತಿಯನ್ನು ದೌರ್ಬಲ್ಯವೆಂದು ತಪ್ಪಾಗಿ ಭಾವಿಸುವವರು ಬಲವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ - ಮತ್ತು ಯಾರೂ ತಲುಪಲು ಸಾಧ್ಯವಿಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.
ಉಭಯ ದೇಶಗಳ ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾದ 'ತೋರ್ಖಾಮ್' ಗಡಿ ಭಾಗದಲ್ಲೂ ಸಂಘರ್ಷ ಹರಡಿದ್ದು, ಸಾವಿರಾರು ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಅಫ್ಘಾನಿಸ್ತಾನದ ನಿರಾಶ್ರಿತರ ಶಿಬಿರಗಳ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರದಂತೆ ಹಲವರ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.