ಇಸ್ಲಾಮಾಬಾದ್: ದೇಶದಲ್ಲಿ ಆಂತರಿಕ ಬಿಕ್ಕಟ್ಟು ಹೆಚ್ಚಾಗಿರುವಾಗಲೇ ಭಾರತದ ವಿರುದ್ಧ ಯುದ್ಧ (war threat) ನಡೆಸುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವರು ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Pakistan's Defence Minister Khawaja Asif) ಅವರು ಶನಿವಾರ ಮಾಧ್ಯಮವೊಂದರ ಜೊತೆ ಮಾತನಾಡಿ, ನೀರು ನಮ್ಮ ರಾಷ್ಟ್ರೀಯ ಭದ್ರತೆಯ ಭಾಗವೆಂದು ಪರಿಗಣಿಸಬೇಕಾದ ಕ್ಷಣ ಬಂದಿದೆ. ಇದಕ್ಕಾಗಿ ನಾವು ಭಾರತದ ವಿರುದ್ಧ ಖಂಡಿತಾ ಯುದ್ಧ ಮಾಡಬೇಕಾಗುತ್ತದೆ. ಪಾಕಿಸ್ತಾನಕ್ಕೆ ಸರಬರಾಜಾಗುವ ನೀರಿನ (Water Security) ಹರಿವಿಗೆ ಅಡ್ಡಿ ಪಡಿಸಲು ಭಾರತ ಆತಂಕಕಾರಿ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಇಸ್ಲಾಮಾಬಾದ್ ಗೆ ಸಾಕ್ಷಿ ದೊರೆತರೆ ಮಿಲಿಟರಿ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಅಸ್ಥಿರತೆ ಮತ್ತು ಆಂತರಿಕ ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಮಧ್ಯೆಯೇ ಅವರು ಈ ಹೇಳಿಕೆ ನೀಡಿದ್ದು, ಇದು ಮತ್ತಷ್ಟು ಉದ್ವಿಗ್ನತೆ ಹೆಚ್ಚಾಗಲು ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ಬೆದರಿಕೆಗೆ ಬಗ್ಗದ ಇರಾನ್; ಶಾಂತಿ ಮಾತುಕತೆ ಮಧ್ಯೆಯೇ ವಾಕ್‌ಔಟ್
ಕಳೆದ ವರ್ಷ 2025ರ ಏಪ್ರಿಲ್ ತಿಂಗಾಳಾಂತ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾಮಾನ್ಯ ನಾಗರಿಕರು ಮೃತಪಟ್ಟ ಬಳಿಕ ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಇದರಲ್ಲಿ 1960 ರ ಸಿಂಧೂ ಜಲ ಒಪ್ಪಂದ ಅಮಾನತು ಕೂಡ ಸೇರಿದೆ. ಈ ಕುರಿತು ಭಾರತವು ಪಾಕಿಸ್ತಾನಕ್ಕೆ ಹಲವು ಬಾರಿ ಕಠಿಣ ಎಚ್ಚರಿಕೆ ನೀಡುವ ಪ್ರಯತ್ನವನ್ನು ಕೂಡ ಮಾಡಿದೆ.
ಪಾಕಿಸ್ತಾನವು ತನ್ನ ಗಡಿಯಾಚೆಗಿನ ಭಯೋತ್ಪಾದನಾ ಚಟುವಟಿಕೆಗಳನ್ನು ಮುಂದುವರಿಸಿರುವುದರಿಂದ ಈ ನಿಟ್ಟಿನಲ್ಲಿ ದೃಢ ನಿರ್ಧಾರವನ್ನು ನವದೆಹಲಿಯು ಕೈಗೊಂಡಿದ್ದು ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳುವವರೆಗೆ ಒಪ್ಪಂದವನ್ನು ಸ್ಥಗಿತಗೊಳಿಸಲಾಗುವುದು ಎಂಬ ಪುನರುಚ್ಚರಿಸಿದೆ.
ಸಿಂಧೂ ನದಿ ನೀರು ಒಪ್ಪಂದವು ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದಿದೆ. ಇದರ ಭಾಗವಾಗಿ ಸಿಂಧೂ ನದಿ ನೀರಿನ ಜಲಾನಯನ ಪ್ರದೇಶದ ಶೇಕಡಾ 80ರಷ್ಟು ನೀರನ್ನು ತನ್ನ ಕೃಷಿ ಅಗತ್ಯಗಳಿಗಾಗಿ ಬಳಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ನೀಡಲಾಗಿದೆ. ಆದರೆ ಇದನ್ನು ನಿರ್ವಹಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಇದಕ್ಕಾಗಿ ಕೂಡ ಪಾಕಿಸ್ತಾನ ನವದೆಹಲಿಯನ್ನು ದೂಷಿಸುತ್ತಿದೆ.
ಪಾಕಿಸ್ತಾನಿ ತಂಡಗಳು ಈ ಹಿಂದೆ ಸುಮಾರು 115 ಬಾರಿ ತನಿಖೆ ನಡೆಸಿದ್ದರೂ ಮಾಹಿತಿಯ ಕೊರತೆಯಿದೆ ಎಂದು ಹೇಳಿಕೊಂಡಿದೆ. ಹೀಗಾಗಿ ಇದು ಅವರ ದೌರ್ಬಲ್ಯವನ್ನು ಪ್ರದರ್ಶಿಸಿದೆ. ಸಿಂಧೂ ನದಿ ನೀರಿನ ಕೊರತೆಯು ಪಾಕಿಸ್ತಾನದ ಜನಸಂಖ್ಯೆಯ ಮೂರನೇ ಒಂದು ಭಾಗದ ಮೇಲೆ ಮುಖ್ಯವಾಗಿ ಸಿಂಧ್ ಮತ್ತು ಬಲೂಚಿಸ್ತಾನದ ಮೇಲೆ ಪರಿಣಾಮ ಬೀರುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಬೆವರಿಳಿಸಿದ ಭಾರತ; ಅಸಂಬದ್ಧ ಹೇಳಿಕೆಗೆ ತರಾಟೆ
ಸಿಂಧ್‌ನ ನೀರಾವರಿ ಇಲಾಖೆಯ ಅಧಿಕೃತ ಅಂಕಿ ಅಂಶಗಳ ಪ್ರಕಾರ ಪಾಕಿಸ್ತಾನದ ವಾಯುವ್ಯ ಕಾಲುವೆಯಲ್ಲಿ ಶೇಕಡಾ 64.1 ರಷ್ಟು ನೀರಿನ ಕೊರತೆ ಇದೆ. ಮುಖ್ಯವಾಗಿ ಸುಕ್ಕೂರ್ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಕುಸಿಯುತ್ತಲೇ ಇದ್ದು, ಇದು ಆಂತರಿಕವಾಗಿ ನೀರಿನ ಬಿಕ್ಕಟ್ಟನ್ನು ಹೆಚ್ಚಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.