ನವದೆಹಲಿ, ಸೆ. 8: ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ವೇಳೆ ಭಾರತೀಯ ಸೇನೆ ಮತ್ತು ವಾಯುಪಡೆಯ ದಾಳಿಯಿಂದ ಹಾನಿಗೊಳಗಾದ ಸೇನಾ ನೆಲೆಗಳು ಹಾಗೂ ಉಗ್ರ ಮೂಲಸೌಕರ್ಯಗಳನ್ನು ಪಾಕಿಸ್ತಾನ ತುರ್ತಾಗಿ ಮರುನಿರ್ಮಿಸುತ್ತಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ. ಭಾರತೀಯ ಥರ್ಮಲ್ ಇಮೇಜರ್‌ಗಳು, ಫೋಲಿಯೇಜ್-ಪೆನೆಟ್ರೇಟಿಂಗ್ ರಡಾರ್‌ಗಳು ಮತ್ತು ಉಪಗ್ರಹ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು, ನಿಯಂತ್ರಣ ರೇಖೆ (LoC) ಸಮೀಪದ ದಟ್ಟ ಅರಣ್ಯಗಳಲ್ಲಿ ಸಣ್ಣ ಮತ್ತು ಚದುರಿದ ಉಗ್ರ ಶಿಬಿರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲುನಿ, ಪುಟ್ವಾಲ್, ತೈಪು ಪೋಸ್ಟ್, ಜಮೀಲಾ ಪೋಸ್ಟ್, ಉಮ್ರಾನ್‌ವಾಲಿ, ಛಪ್ರಾರ್, ಫಾರ್ವರ್ಡ್ ಕಹುತಾ, ಛೋಟಾ ಚಕ್ ಮತ್ತು ಜಂಗ್ಲೋರಾ ಪ್ರದೇಶಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗಿದೆ.
ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳಲ್ಲಿ ಸಂಚಾರ ನಿರ್ಬಂಧ ಹಂತ ಹಂತವಾಗಿ ಜಾರಿ: ಪ್ರಿಯಾಂಕ್ ಖರ್ಗೆ
ಹೊಸ ಶಿಬಿರಗಳಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಗಳು ಹಾಗೂ ಥರ್ಮಲ್ ಸೆನ್ಸರ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ವರದಿಯಾಗಿದೆ. 2025ರ ಮೇ 7ರಂದು ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂದೂರ್ ಆರಂಭಿಸಿತ್ತು. ಆರಂಭಿಕ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಉಗ್ರ ಶಿಬಿರಗಳನ್ನು ನಾಶ ಪಡಿಸಲಾಗಿತ್ತು. ಸಂಘರ್ಷ ಮತ್ತಷ್ಟು ತೀವ್ರಗೊಂಡ ಬಳಿಕ ನೂರ್ ಖಾನ್, ಸರ್ಗೋಧಾ, ರಫೀಕಿ, ಮುರೀದ್, ಸುಕ್ಕೂರು, ಸಿಯಾಲ್ಕೋಟ್, ಪಸ್ರೂರ್, ಚೂನಿಯನ್, ಸ್ಕಾರ್ಡು, ಭೋಲಾರಿ ಮತ್ತು ಜಾಕೋಬಾಬಾದ್ ಸೇರಿದಂತೆ 11 ಪಾಕಿಸ್ತಾನಿ ವಾಯುನೆಲೆಗಳ ಮೇಲೂ ಭಾರತ ದಾಳಿ ನಡೆಸಿತ್ತು.
88 ಗಂಟೆಗಳ ಸಂಘರ್ಷದ ವೇಳೆ ಪಂಜಾಬ್ ಮತ್ತು ಜಮ್ಮು ವಲಯಗಳಲ್ಲಿನ 118 ಪಾಕಿಸ್ತಾನಿ ಗಡಿ ಕಾವಲು ಕಚೇರಿಗಳನ್ನು ಬಿಎಸ್‌ಎಫ್ ಗುರಿಯಾಗಿಸಿತ್ತು ಎಂದು ವರದಿ ಹೇಳಿದೆ. ದಾಳಿಯಲ್ಲಿ ಪಾಕಿಸ್ತಾನಿ ಉಗ್ರರ ಸಂವಹನ ವ್ಯವಸ್ಥೆಗಳು, ರಕ್ಷಣಾತ್ಮಕ ಕೋಟೆಗಳು ಮತ್ತು ಕಣ್ಗಾವಲು ಮಾಸ್ಟ್‌ಗಳು ಹಾನಿಗೊಳಗಾಗಿದ್ದವು.
ಹಾನಿಗೊಳಗಾದ ನೆಲೆಗಳನ್ನು ದುರಸ್ತಿ ಮಾಡಲು ಹಾಗೂ JF-17 ಯುದ್ಧ ವಿಮಾನಗಳು ಮತ್ತು C-130 ಸಾರಿಗೆ ವಿಮಾನಗಳನ್ನು ದುರಸ್ತಿಪಡಿಸಲು ಪಾಕಿಸ್ತಾನ ಬಳಿಕ ಕೋಟ್ಯಂತರ ಡಾಲರ್ ಮೌಲ್ಯದ ಟೆಂಡರ್‌ಗಳನ್ನು ಆಹ್ವಾನಿಸಿತ್ತು ಎನ್ನಲಾಗಿದೆ.