ಟೆಹರಾನ್, ಏ. 22: ಅಮೆರಿಕ-ಇರಾನ್ ಸಂಘರ್ಷದಲ್ಲಿ (US-Iran Crisis) ಪಾಕಿಸ್ತಾನದ ಮಧ್ಯವರ್ತಿ ಪಾತ್ರದ ಮೇಲೆ ಇರಾನ್ ಗರಂ ಆಗಿದೆ. ಇರಾನ್ ಸರ್ಕಾರ ನಿಯಂತ್ರಿತ ದೂರದರ್ಶನವು, ಪಾಕಿಸ್ತಾನದ ಡಬಲ್ ಗೇಮ್ ಆಟಕ್ಕೆ ನೇರ ದಾಳಿ ನಡೆಸಿದೆ. ಇಸ್ಲಾಮಾಬಾದ್ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಅದರ ತಟಸ್ಥ ನಡೆಯನ್ನು ಪ್ರಶ್ನಿಸಿದೆ. ಕೆಲ ವರದಿಗಳ ಪ್ರಕಾರ, ಇರಾನ್ ಪಾಕಿಸ್ತಾನದ ನಿಷ್ಪಕ್ಷಪಾತ ನಿಲುವನ್ನು ಅನುಮಾನದಿಂದ ನೋಡುತ್ತಿದೆ ಹಾಗೂ ಅದು ಅಮೆರಿಕ ಪರವಾಗಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದೆ.
ಟೆಲಿವಿಷನ್ ಚರ್ಚೆಯ ವೇಳೆ ಪ್ರಸಾರವಾದ ಈ ಟೀಕೆ ಟೆಹರಾನ್‍ನ ಅಧಿಕೃತ ಮಾಧ್ಯಮ ವ್ಯವಸ್ಥೆ ಪಾಕಿಸ್ತಾನದ ಸೈನಿಕ ನಾಯಕತ್ವವನ್ನು ಇಷ್ಟು ನೇರವಾಗಿ ಗುರಿಯಾಗಿಸಿಕೊಂಡಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ. ವಿಶೇಷವಾಗಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಬಹಿರಂಗವಾಗಿ ಗುರಿಯಾಗಿಸಿಕೊಂಡಿರುವುದು ಇದೇ ಮೊದಲು.
ಪಾಕಿಸ್ತಾನದ ವಿರುದ್ಧ ಇರಾನ್ ವಾಗ್ದಾಳಿ:
ವಿವರಗಳ ಪ್ರಕಾರ ಇರಾನ್‌ನ ಸರ್ಕಾರಿ ಟಿವಿಯು ಪಾಕಿಸ್ತಾನವು ಡಬಲ್ ಗೇಮ್ ಆಡುತ್ತಿದೆ ಎಂದು ಆರೋಪಿಸಿದೆ. ಇಸ್ಲಾಮಾಬಾದ್ ಟೆಹರಾನ್‌ನೊಂದಿಗೆ ಖಾಸಗಿಯಾಗಿ ಸಂಬಂಧವನ್ನು ಕಾಯ್ದುಕೊಳ್ಳುವಾಗ, ಅಮೆರಿಕದ ಜತೆ ಸಾರ್ವಜನಿಕವಾಗಿ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದೆ.
ಶಾಂತಿ ಮಾತುಕತೆ ಇರಾನ್ ಅಸಹಕಾರ: ಇಸ್ಲಾಮಾಬಾದ್ ಪ್ರವಾಸ ಮುಂದೂಡಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ಈ ಹಿಂದೆ ಇರಾನ್‌ನ ವಿಶ್ಲೇಷಕರು, ಪಾಕಿಸ್ತಾನವು ವಾಸ್ತವದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಶಾಂತಿ ಮಾತುಕತೆಗಳಲ್ಲಿ ಪ್ರಗತಿ ಇದೆ ಎಂದು ತೋರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಇಂತಹ ಸಂದೇಶಗಳನ್ನು ಅಕಾಲಿಕ ಹಾಗೂ ತಪ್ಪುಮಾಹಿತಿ ನೀಡುವಂಥವು ಎಂದು ಅವರು ಹೇಳಿದ್ದರು. ಮುಂದಿನ ಮಾತುಕತೆ ಹಂತಗಳಲ್ಲಿ ಪ್ರಗತಿ ಇದೆ ಎಂದು ತೋರಿಸುವ ಪ್ರಯತ್ನಗಳನ್ನು ಸಹ ಟೀಕಿಸಿದ್ದಾರೆ. ಅದೇ ವೇಳೆ, ಇರಾನ್ ಮುಂದಿನ ಸುತ್ತಿನ ಸಂವಾದಗಳಲ್ಲಿ ಭಾಗವಹಿಸಲು ಹಿಂಜರಿಕೆ ವ್ಯಕ್ತಪಡಿಸುತ್ತಿರುವುದಾಗಿ ತಿಳಿದುಬಂದಿದೆ.
ಇರಾನ್, ಪಾಕಿಸ್ತಾನದ ಮಾತುಕತೆ ಪ್ರಕ್ರಿಯೆಯ ನಿರ್ವಹಣೆಯನ್ನು ಕೂಡ ಪ್ರಶ್ನಿಸಿದ್ದು, ಇರಾನ್‌ನ ಪ್ರಸ್ತಾವನೆಗಳನ್ನು ಕಡೆಗಣಿಸಿ ಅಮೆರಿಕದಿಂದ ಬಂದ ಹೊಸ ಬೇಡಿಕೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ಆರೋಪಿಸಿದೆ.
ಜನರಲ್ ಆಸಿಮ್ ಮುನೀರ್ ಟೆಹರಾನ್‌ನ ಪ್ರಸ್ತಾವನೆಯ ಕರಡನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ಪ್ರತಿಕ್ರಿಯೆಯನ್ನು ತಮ್ಮ ಜತೆ ಹಂಚಿಕೊಳ್ಳಲು ವಿಫಲರಾಗಿದ್ದಾರೆ ಎಂದು ಇರಾನ್ ಆರೋಪಿಸಿದೆ.
ಇರಾನ್ ಟೆಲಿವಿಷನ್‌ನ ವಿಶ್ಲೇಷಕರು, ಮಾತುಕತೆಗಳಲ್ಲಿ ಇರಾನ್‌ನ ಸ್ಥಿತಿಯನ್ನು ಮುಂದುವರಿಸುವ ಬದಲು, ಪಾಕಿಸ್ತಾನವು 15ರಿಂದ 16 ಹೊಸ ಅಮೆರಿಕ ಬೆಂಬಲಿತ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ವಾದಿಸಿದ್ದಾರೆ. ಜತೆಗೆ ಟೆಹರಾನ್‌ನ ಮೂಲ 10 ಅಂಶಗಳ ರೂಪುರೇಖೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದಾರೆ. ಇನ್ನು ಕದನ ವಿರಾಮ ವಿಸ್ತರಿಸಲ್ಪಟ್ಟರೂ ಮಾತುಕತೆಗಳು ಸ್ಥಗಿತಗೊಂಡಿರುವುದರಿಂದ ಭವಿಷ್ಯವು ಅನಿಶ್ಚಿತವಾಗಿಯೇ ಉಳಿದಿದೆ.