ಇಸ್ಲಾಮಾಬಾದ್: ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ (Jaffar Express) ಮತ್ತೊಮ್ಮೆ ಭೀಕರ ಸ್ಫೋಟ ಸಂಭವಿಸಿದೆ. ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಸಮೀಪದ ಸುಲ್ತಾನ್ ಕೋಟ್ ಪ್ರದೇಶದಲ್ಲಿ ಇಂದು ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಹಳಿಗಳ ಮೇಲೆ (Bomb Blast) ಅಳವಡಿಸಲಾಗಿದ್ದ ಸ್ಫೋಟಕ ಸಾಧನ ಸ್ಫೋಟಿಸಿ, ಕ್ವೆಟ್ಟಾದಿಂದ ಪೆಶಾವರ್‌ಗೆ ಹೊರಟಿದ್ದ ರೈಲಿನ ಮೇಲೆ ದಾಳಿ ಮಾಡಲಾಗಿದೆ. ಇದರಿಂದ ರೈಲಿನ ಹಲವು ಬೋಗಿಗಳು ಹಳಿತಪ್ಪಿ ದೊಡ್ಡ ದುರಂತ ಸಂಭವಿಸಿದೆ. ಬಲೂಚ್ ಬಂಡುಕೋರ ಗುಂಪು, ಬಲೂಚ್ ರಿಪಬ್ಲಿಕ್ ಗಾರ್ಡ್ಸ್, ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಪಾಕಿಸ್ತಾನಿ ಸೇನೆಯ ಸಿಬ್ಬಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರಿಂದ ಇದನ್ನು ಗುರಿಯಾಗಿಸಲಾಗಿತ್ತು.
ಸ್ಫೋಟದಿಂದ ರೈಲು ಹಳಿ ತಪ್ಪಿ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ, ಸದ್ಯ ಯಾವುದೇ ಸಾವಿನ ವರದಿಗಳು ಇನ್ನೂ ಬಂದಿಲ್ಲ. ರಕ್ಷಣಾ ತಂಡಗಳು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದೆ. ವೈದ್ಯಕೀಯ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪಾಕಿಸ್ತಾನಿ ಸೇನೆಯ ಸಿಬ್ಬಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ರೈಲಿನ ಮೇಲೆ ದಾಳಿ ನಡೆಸಲಾಯಿತು. ಸ್ಫೋಟದ ಪರಿಣಾಮವಾಗಿ, ಹಲವಾರು ಸೈನಿಕರು ಸಾವನ್ನಪ್ಪಿದರು ಮತ್ತು ಗಾಯಗೊಂಡಿದ್ದಾರೆ ಎಂದು ಲೂಚ್ ರಿಪಬ್ಲಿಕನ್ ಗಾರ್ಡ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಈ ದಾಳಿಯ ಹೊಣೆಯನ್ನು ಬಿಆರ್‌ಜಿ ಹೊತ್ತುಕೊಂಡಿದೆ.
ಸ್ಫೋಟಗೊಂಡಿರುವ ಜಾಫರ್ ಎಕ್ಸ್‌ಪ್ರೆಸ್
ಜಾಫರ್ ಎಕ್ಸ್‌ಪ್ರೆಸ್ ಮೇಲೆ ನಡೆಯುತ್ತಿರುವ ನಾಲ್ಕನೇ ದಾಳಿ ಇದಾಗಿದ್ದು, ಮಾರ್ಚ್‌ನಲ್ಲಿ ನಡೆದ ದಾಳಿ ಅತ್ಯಂತ ಭೀಕರವಾಗಿತ್ತು. ಮಾರ್ಚ್ 11 ರಂದು, ಬೋಲಾನ್ ಪ್ರದೇಶದಲ್ಲಿ ಕ್ವೆಟ್ಟಾದಿಂದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದಾಗ ಜಾಫರ್ ಎಕ್ಸ್‌ಪ್ರೆಸ್ ಅನ್ನು ಅಪಹರಿಸಲಾಯಿತು. 400ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿದ್ದರು. ಅದರಲ್ಲಿರುವ 21 ಪ್ರಯಾಣಿಕರು ಮತ್ತು ನಾಲ್ವರು ಭದ್ರತಾ ಸಿಬ್ಬಂದಿಗಳನ್ನು ಬಲೂಚ್ ಆರ್ಮಿ ಕೊಂದಿತ್ತು. ಪಾಕಿಸ್ತಾನ್ ಸೇನೆಯ 'ಆಪರೇಶನ್ ಗ್ರೀನ್ ಬೋಲನ್' ಮೂಲಕ 33 ಉಗ್ರರನ್ನು ಸಂಹಾರ ಮಾಡಿ, 354 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:Khawaja Asif: ಮತ್ತೆ ಭಾರತದ ವಿರುದ್ಧ ಉದ್ಧಟತನ ತೋರಿದ ಪಾಕಿಸ್ತಾನ
ಸೆಪ್ಟೆಂಬರ್ 24 ರಂದು, ಬಲೂಚಿಸ್ತಾನದ ಮಾಸ್ಟಂಗ್‌ನ ಸ್ಪಿಜೆಂಡ್ ಪ್ರದೇಶದಲ್ಲಿ ಅದೇ ರೈಲಿನ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಒಂದು ಡಜನ್ ಜನರು ಗಾಯಗೊಂಡಿದ್ದರು. ಆಗಸ್ಟ್ 10 ರಂದು, ಮಸ್ತಂಗ್ ಜಿಲ್ಲೆಯಲ್ಲಿ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್‌ನ ಆರು ಬೋಗಿಗಳನ್ನು ಸ್ಫೋಟಗೊಳಿಸಲಾಗಿತ್ತು. ಬಲೂಚಿಸ್ತಾನ್‌ನಲ್ಲಿ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಇಂತಹ ದಾಳಿಗಳು ಮುಂದುವರಿಯುತ್ತವೆ ಎಂದು ಬಲೂಚ್ ಲಿಬರೇಷನ್ ಆರ್ಮಿ ಎಚ್ಚರಿಕೆ ನೀಡಿದೆ.