ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆ: ಆಪರೇಷನ್ ಸಿಂದೂರ್ ವೇಳೆ ಧ್ವಂಸಗೊಂಡ ಮುರಿದ್ ವಾಯುನೆಲೆ ಕಟ್ಟಡ ದುರಸ್ತಿ ವಿಫಲ; ಉಪಗ್ರಹ ಚಿತ್ರ ಬಿಡುಗಡೆ

Pak Airbase Building Destroyed: ಪಾಕಿಸ್ತಾನದ ಚಕ್ವಾಲ್ ಬಳಿಯ ತನ್ನ ಪ್ರಮುಖ ಮುರಿದ್ ವಾಯುನೆಲೆಯ ಪ್ರಮುಖ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ದುರಸ್ತಿ ಮಾಡಲು ಮತ್ತು ಪುನಃಸ್ಥಾಪಿಸಲು ಪಾಕಿಸ್ತಾನ ವಾಯುಪಡೆಯ ಪ್ರಯತ್ನ ವಿಫಲವಾಗಿದೆ. ಮುರಿದ್ ಏರ್ ಬೇಸ್‌ನಲ್ಲಿ ದುರಸ್ತಿ ಕೆಲಸ ವಿಫಲವಾಗಿದೆ ಎಂಬುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ.

ವಾಯುನೆಲೆ ಕಟ್ಟಡ ದುರಸ್ತಿ ಮಾಡುವಲ್ಲಿ ಪಾಕ್ ವಿಫಲ

ನವದೆಹಲಿ, ಮಾ. 10: ಕಳೆದ ವರ್ಷ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ (Operation Sindhoor) ಸಮಯದಲ್ಲಿ ಪಾಕಿಸ್ತಾನದ ಮುರಿದ್ ವಾಯುನೆಲೆ (Pakistan’s Murid Airbase) ಕಟ್ಟಡವನ್ನು ಕೆಡವಲಾಗಿತ್ತು. ಚಕ್ವಾಲ್ ಬಳಿಯ ತನ್ನ ಪ್ರಮುಖ ಮುರಿದ್ ವಾಯುನೆಲೆಯಲ್ಲಿ ಪ್ರಮುಖ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ದುರಸ್ತಿ ಮಾಡಲು ಮತ್ತು ಪುನಃಸ್ಥಾಪಿಸಲು ಪಾಕಿಸ್ತಾನ ವಾಯುಪಡೆ ನಡೆಸಿದ ಪ್ರಯತ್ನಗಳು ವಿಫಲವಾಗಿವೆ ಎಂದು ಇತ್ತೀಚಿನ ಉಪಗ್ರಹ ಚಿತ್ರಗಳು (Satellite Images) ತೋರಿಸಿವೆ.

ಮುರಿದ್ ಏರ್ ಬೇಸ್‌ನಲ್ಲಿ ದುರಸ್ತಿ ಕೆಲಸ ವಿಫಲವಾಗಿದೆ ಎಂಬುದನ್ನು ಉಪಗ್ರಹ ಚಿತ್ರಗಳು ಸ್ಪಷ್ಟಪಡಿಸಿವೆ. ದಾಳಿ ನಂತರ ಟಾರ್ಪಾಲಿನೊಂದಿಗೆ ಮುಚ್ಚಲ್ಪಟ್ಟ ಕಟ್ಟಡದ ಕೇಂದ್ರ ಭಾಗದಲ್ಲಿ ಈಗ ಗುಲಾಬಿ-ಕೆಂಪು ಬಣ್ಣದ ತುಂಡುಗಳು ಕಾಣುತ್ತಿವೆ. ಇದು ಮರು ನಿರ್ಮಾಣ ವಿಫಲವಾಗಿರುವುದರ ಸ್ಪಷ್ಟ ಸೂಚನೆ. ಜತೆಗೆ ನಾಶ ಅಥವಾ ಕುಸಿತದ ಗುರುತು ಎಂದು ವರದಿಯೊಂದು ತಿಳಿಸಿದೆ. 2025ರ ಮೇಯಲ್ಲಿ ನಡೆದ ದಾಳಿಯ ದೀರ್ಘಕಾಲಿಕ ಪರಿಣಾಮವು ಹತ್ತು ತಿಂಗಳ ಬಳಿಕವೂ ಸ್ಪಷ್ಟವಾಗಿ ಉಳಿದಿದೆ.

ಇಲ್ಲಿದೆ ಚಿತ್ರಣ:



ಇತ್ತೀಚಿನ ಚಿತ್ರಣಗಳು ಕಟ್ಟಡವನ್ನು ಸಂಪೂರ್ಣವಾಗಿ ಕೆಡವಲಾಗಿದೆ ಎಂದು ದೃಢಪಡಿಸುತ್ತದೆ ಎಂದು ಉಪಗ್ರಹ ಚಿತ್ರಣ ವಿಶ್ಲೇಷಕ ಡೇಮಿಯನ್ ಸೈಮನ್ ಹೇಳಿದ್ದಾರೆ. ದಾಳಿಯ ಪರಿಣಾಮವು ಕಟ್ಟಡದ ಛಾವಣಿಗೆ ಮಾತ್ರ ಸೀಮಿತವಾಗಿರದೆ, ಅದರ ಒಳಗಿನ ಆಳವಾದ ಭಾಗಗಳಿಗೂ ತಲುಪಿದ್ದಿರಬಹುದು ಎಂಬುದರ ಕುರುಹನ್ನೂ ಈ ಚಿತ್ರಗಳು ನೀಡುತ್ತವೆ. ಸುಮಾರು 35x30 ಮೀಟರ್ ಗಾತ್ರದ ಈ ಕಟ್ಟಡದಲ್ಲಿ ಸಂಭವಿಸಿದ ಗಂಭೀರ ರಚನಾತ್ಮಕ ಹಾನಿಯ ಕಾರಣದಿಂದಲೇ ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿ, ಸೌಲಭ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.

ಪಾಕಿಸ್ತಾನವು ಕದನ ವಿರಾಮ ಒಪ್ಪಂದಕ್ಕೆ ಬರುವ ಮೂಲಕ ಯುದ್ಧವನ್ನು ಕೊನೆಗೊಳಿಸಲು ಮುಂದಾದ ಕೆಲವು ಗಂಟೆಗಳ ಮೊದಲು 2025ರ ಮೇ 10ರಂದು ಬೆಳಗಿನ ಜಾವ 2ರಿಂದ ಬೆಳಗ್ಗೆ 5 ಗಂಟೆಯ ನಡುವೆ ಭಾರತೀಯ ವಾಯುಪಡೆಯು ದಾಳಿ ಮಾಡಿದ 10 ಪಾಕಿಸ್ತಾನಿ ವಾಯುನೆಲೆಗಳಲ್ಲಿ ಮುರಿದ್ ಕೂಡ ಒಂದು.

ಆಪರೇಷನ್ ಸಿಂಧೂರ್ ನಿಂದ ಹಾನಿಗೊಳಗಾದ ವಾಯುನೆಲೆಯ ರಿಪೇರಿ ಶುರು ಮಾಡಿದ ಪಾಕ್‌!

ವರದಿಯಲ್ಲಿ ಉಲ್ಲೇಖಿಸಿದಂತೆ ಈ ಕಟ್ಟಡವು ಮಾನವರಹಿತ ವೈಮಾನಿಕ ವಾಹನಗಳ (UAV) ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದಿರಬಹುದು ಎಂದು ಹೇಳಲಾಗಿದೆ. ಇದೇ ನೆಲೆಯಲ್ಲಿರುವ ಭೂಗರ್ಭ ಕಟ್ಟಡದ ಮೇಲೂ ಭಾರತೀಯ ವಾಯುಪಡೆ ದಾಳಿ ನಡೆಸಿದೆ ಎನ್ನಲಾಗಿದೆ.

ಭಾರತದ ವೈಮಾನಿಕ ದಾಳಿಯ ನಂತರ ಸಂಗ್ರಹಿಸಲಾದ ಉಪಗ್ರಹ ಚಿತ್ರಣವು ಈ ರಚನೆಯ ಛಾವಣಿಗೆ ಆಗಿರುವ ಹಾನಿಯನ್ನು ತೋರಿಸಿದೆ. ನಂತರ ಹಾನಿಯ ಮೌಲ್ಯಮಾಪನ ಚಟುವಟಿಕೆ ನಡೆಯುತ್ತಿರುವಾಗ ಅದನ್ನು ಟಾರ್ಪಾಲಿನ್‌ನಿಂದ ಮುಚ್ಚಲಾಯಿತು. 2025ರ ಡಿಸೆಂಬರ್ ನಂತರದ ಕಟ್ಟಡವನ್ನು ಟಾರ್ಪಾಲಿನ್ ಮತ್ತು ನಿರ್ಮಾಣ ಜಾಲರಿಯಿಂದ ಸುತ್ತುವರಿಯಲಾಯಿತು. ಇದು ದುರಸ್ತಿ ಕೆಲಸ ಪ್ರಾರಂಭವಾಗಿದೆ ಎಂಬುದರ ಸೂಚನೆ ಎಂದು ಸೈಮನ್ ಹೇಳಿದರು.

ಭಾರತೀಯ ವಾಯುಪಡೆಯ ದಾಳಿಯ ಸ್ವಲ್ಪ ಸಮಯದ ನಂತರ ಅಂದರೆ ಮೇ 10ರಂದು ತೆಗೆದ ಚಿತ್ರವು ಕೇಂದ್ರ ಕಟ್ಟಡಗಳಿಗೆ ಸ್ಪಷ್ಟ ಹಾನಿಯನ್ನು ಬಹಿರಂಗಪಡಿಸುತ್ತದೆ. 2025ರ ಜೂನ್ 2ರ ಹೊತ್ತಿಗೆ, ಕಾರ್ಯಾಚರಣೆಯ ಸರಿಸುಮಾರು ಮೂರು ವಾರಗಳ ನಂತರ, ಹಾನಿಗೊಳಗಾದ ಕೇಂದ್ರ ಕಟ್ಟಡದ ಒಂದು ಭಾಗವನ್ನು ಹಸಿರು ಟಾರ್ಪಲ್‌ನಿಂದ ಮುಚ್ಚಲಾಗಿತ್ತು. ಇದೀಗ ಹೊರಬಂದ ಉಪಗ್ರಹ ಚಿತ್ರದಲ್ಲಿ ಕಟ್ಟಡವನ್ನು ಪುನರ್ ನಿರ್ಮಿಸುವುದು ಅಸಾಧ್ಯ ಎಂಬುದನ್ನು ತೋರಿಸಿದೆ.