ವಾಷಿಂಗ್ಟನ್ : ಅಮೆರಿಕದಲ್ಲಿ ವಿಮಾನವೊಂದು ಪತನಗೊಂಡಿದ್ದು(Plane Crash), 60ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ಇದೆ. ಹಾರಾಟದ ನಡುವೆಯೇ ಪತನಗೊಂಡು ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದ ಬಳಿಯ ಪೊಟೊಮ್ಯಾಕ್ ನದಿಗೆ ಅಪ್ಪಳಿಸಿದೆ. ಪಿಎಸ್ಎ ಏರ್‌ಲೈನ್ಸ್ ಸೇರಿದ ಸಣ್ಣ ವಿಮಾನವೊಂದು ಗಾಳಿಯಲ್ಲಿದ್ದಾಗಲೇ ಮಿಲಿಟರಿ ಹೆಲಿಕಾಪ್ಟರ್ ಗೆ ಡಿಕ್ಕಿ ಹೊಡೆದು ವಿಮಾನ ನಿಲ್ದಾಣದ ಪಕ್ಕದಲ್ಲಿರುವ ನದಿಗೆ ಅಪ್ಪಳಿಸಿತು. ಘಟನೆಯಲ್ಲಿ ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತಕ್ಷಣ ಜಾಗೃತರಾದ ಅಧಿಕಾರಿಗಳು, ಸ್ಥಳದಲ್ಲಿದ್ದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಿಂದಾಗಿ ಇತರ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಗಳಲ್ಲಿ ಅಡ್ಡಿ ಉಂಟಾಯಿತು.
ಟೆಕ್ಸಾಸ್‌ನ ಸೆನೆಟರ್ ಟೆಡ್ ಕ್ರೂಜ್ ಮಾಹಿತಿ ನೀಡಿದ್ದು, ರೇಗನ್‌ಗೆ ಸಮೀಪಿಸುತ್ತಿದ್ದಾಗ ಪಿಎಸ್‌ಎ ಏರ್‌ಲೈನ್ಸ್ ಜೆಟ್, ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ. ಎಫ್‌ಎಎ ಪ್ರಕಾರ, ಕಾನ್ಸಾಸ್‌ನ ವಿಚಿಟಾದಿಂದ ಹೊರಟಿದ್ದ ಅಮೇರಿಕನ್ ಏರ್‌ಲೈನ್ಸ್ ವಿಮಾನ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ 60ಪ್ರಯಾಣಿಕರಿದ್ದ ಪಿಎಸ್‌ಎ ಫ್ಲೈಟ್ 5342 ಪೊಟೊಮ್ಯಾಕ್ ನದಿಯಲ್ಲಿ ಪತನಗೊಂಡಿದೆ ಎಂದಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ರಾಷ್ಟ್ರೀಯ ಸಾರಿಗೆ ಭದ್ರತಾ ಮಂಡಳಿ (NTSB) ಹೇಳಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ವಿಮಾನ ಪತನ ಘಟನೆಗೆ ತುರ್ತು ಸಿಬ್ಬಂದಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ವಿಮಾನ ನಿಲ್ದಾಣ ತಿಳಿಸಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎನ್‌ಟಿಎಸ್‌ಬಿ ಕಾರ್ಯಪ್ರವೃತ್ತವಾಗಿದೆ.
ಈ ಸುದ್ದಿಯನ್ನೂ ಓದಿ: Noida Airport: ಉತ್ತರ ಭಾರತದ ಪ್ರವಾಸಿ ಹೆಬ್ಬಾಗಿಲು ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು ಮೊದಲ ವಿಮಾನ!
ಸೂಡಾನ್‌ನಲ್ಲೂ ವಿಮಾನ ಪತನ
ದಕ್ಷಿಣ ಸುಡಾನ್‌ನ ಪ್ರದೇಶವೊಂದರಲ್ಲಿ ನಿನ್ನೆ ಸಂಜೆ ಟೇಕ್-ಆಫ್ ಆಗುವ ವೇಳೆ ವಿಮಾನ ಪತನಗೊಂಡಿದ್ದು,ಭಾರತೀಯರು ಸೇರಿದಂತೆ 20 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಚೀನಾದ ತೈಲ ಸಂಸ್ಥೆಯಾದ ಗ್ರೇಟರ್ ಪಯೋನೀರ್ ಆಪರೇಟಿಂಗ್ ಕಂಪನಿ ಚಾರ್ಟರ್ಡ್ ಮಾಡಿದ ಈ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ 21 ಮಂದಿ ಇದ್ದರು ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಸೂಡಾನ್ ರಾಜಧಾನಿ ಜುಬಾದಲ್ಲಿರುವ(Juba) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ತೈಲ ಸೆಂಟರ್ ಬಳಿ ಟೇಕ್ ಆಫ್ ಆಗುತ್ತಿದ್ದಾಗ ವಿಮಾನ ಪತನಗೊಂಡಿದೆ. ವಿಮಾನ ನಿಲ್ದಾಣದಿಂದ 500 ಮೀಟರ್ ದೂರದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಆಯಿಲ್ ರಿಚ್ ಯೂನಿಟಿಯ ಮಾಹಿತಿ ಸಚಿವ ಗಟ್ವೆಚ್ ಬಿಪಾಲ್ ಸಚಿವರು ದೂರವಾಣಿ ಮೂಲಕ ಎಎಫ್‌ಪಿಗೆ ತಿಳಿಸಿದ್ದಾರೆ.