ಪ್ಯಾರಿಸ್, ಜೂ. 16: ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿರುವ ಅಪರೂಪದ ಭೇಟಿಗೆ ಫ್ರಾನ್ಸ್ ಸಾಕ್ಷಿಯಾಗಿದೆ. ಮಂಗಳವಾರ (ಜೂನ್ 16) ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಮಾರು 16 ತಿಂಗಳ ಬಳಿಕ ಮುಖಾಮುಖಿ ಭೇಟಿಯಾಗಿದ್ದಾರೆ. ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆ (G7 Summit)ಯಲ್ಲಿ ಭಾಗವಹಿಸಲು ಆಗಮಿಸಿದ ʼಆತ್ಮೀಯ ಸ್ನೇಹಿತʼ ಮೋದಿ ಅವರ ಕೈಕುಲುಕಿ ಟ್ರಂಪ್ ಸ್ವಾಗತಿಸಿದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿರುವ ಶೃಂಗಸಭೆಯಲ್ಲಿ ವಿವಿಧ ದೇಶಗಳ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ.
ವಿಶ್ವದ ನಾಯಕರ ಸಮ್ಮುಖದಲ್ಲಿ ಮೋದಿ ಮತ್ತು ಟ್ರಂಪ್ ನಗುತ್ತ ಆತ್ಮೀಯವಾಗಿ ಸಂಭಾಷಣೆ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಅದಾಗ್ಯೂ ಟ್ರಂಪ್ ಮತ್ತು ಮೋದಿ ಅವರ ಟ್ರೇಡ್ ಮಾರ್ಕ್ ಶೈಲಿಯಾದ ಅಪ್ಪುಗೆ ಈ ಬಾರಿ ಮಿಸ್ಸಿಂಗ್ ಎಂದು ನೆಟ್ಟಿಗರು ಹೇಳಿದ್ದು, ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಪದೇ ಪದೆ ಮೋದಿಯನ್ನು ಆತ್ಮೀಯ ಗೆಳೆಯ ಎಂದು ಕರೆಯುವ ಟ್ರಂಪ್ ಈ ಬಾರಿ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.
ಮೋದಿ ಅವರ ಎಕ್ಸ್ ಪೋಸ್ಟ್:
16 ತಿಂಗಳ ಬಳಿಕ ಮೊದಲ ಭೇಟಿ
ವಿಶೇಷ ಎಂದರೆ ಸುಮಾರು 16 ತಿಂಗಳ ಬಳಿಕ ಮೋದಿ ಮತ್ತು ಟ್ರಂಪ್ ಎದುರು ಬದುರಾಗಿ ಮಾತುಕತೆ ನಡೆಸುತ್ತಿದ್ದಾರೆ. ಪಶ್ಚಿಮ ಏಷ್ಯಾ ಯುದ್ಧ ಆರಂಭವಾದ ಬಳಿಕ ಇಬ್ಬರು ನಾಯಕರು ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದರೂ ಮುಖಾಮುಖಿ ಭೇಟಿಯಾಗುತ್ತಿರುವುದು 2025ರ ಫೆಬ್ರವರಿ ನಂತರ ಇದು ಮೊದಲ ಬಾರಿ. ಟ್ರಂಪ್ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದಾಗ ವಾಷಿಂಗ್ಟನ್‌ನ ವೈಟ್ ಹೌಸ್‌ನಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದರು.
ಮೋದಿ ಜತೆ ಟ್ರಂಪ್ ಮಾತುಕತೆ:
ಮೊದಲೇ ತಮ್ಮ ಆಸನದಲ್ಲಿ ಕುಳಿತಿದ್ದ ಟ್ರಂಪ್ ಮೋದಿ ಆಗಮಿಸುತ್ತಿದ್ದಂತೆ ಎದ್ದು ನಿಂತು ಶೇಕ್ ಹ್ಯಾಂಡ್ ನೀಡಿದರು. ಕೆಲ ಹೊತ್ತು ಇಬ್ಬರು ನಾಯಕರು ನಗುತ್ತ ಮಾತನಾಡಿದರು. ಬಳಿಕ ಟ್ರಂಪ್ ಆತ್ಮೀಯವಾಗಿ ಮೋದಿ ಅವರ ತೋಳಿಗೆ ತಟ್ಟಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಇಬ್ಬರು ನಾಯಕರು ಬುಧವಾರ ಬಹು ನಿರೀಕ್ಷಿತ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಜಾಗತಿಕ ಬೆಳವಣಿಗೆ, ಪಶ್ಚಿಮ ಏಷ್ಯಾ ಸಂಘರ್ಷ, ಇಂಧನ ಕೊರತೆ, ಭಾರತೀಯರ ನಾವಿಕರನ್ನು ಅಮೆರಿಕ ಸೇನೆ ಹತ್ಯೆಗೈದಿರುವ ವಿಚಾರವನ್ನು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಎಲ್ಲರಿಗೂ ತೆರೆಯಲಿದೆ ಹೊರ್ಮುಜ್ ಜಲಸಂಧಿ: ಕದನ ಮುಕ್ತಾಯದ ಸೂಚನೆ ಕೊಟ್ರಾ ಡೊನಾಲ್ಡ್ ಟ್ರಂಪ್
ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು 2 ದಿನಗಳ ಭೇಟಿಗಾಗಿ ಮೋದಿ ಫ್ರಾನ್ಸ್‌ಗೆ ಆಗಮಿಸಿದ್ದಾರೆ. ಇದು ಮೋದಿ ಭಾಗವಹಿಸುತ್ತರುವ 7ನೇ ಜಿ7 ಶೃಂಗಸಭೆ ಎನ್ನುವುದು ವಿಶೇಷ. ಶೃಂಗಸಭೆಯಲ್ಲಿ ಭಾಗವಹಿಸುವ ಜತೆಗೆ ವಿಶ್ವ ನಾಯಕರೊಂದಿಗೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶವನ್ನೂ ಮೋದಿ ಹೊಂದಿದ್ದಾರೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ಸೇರಿ ದ್ವಿಪಕ್ಷೀಯ ಸರಣಿ ಸಭೆ ನಡೆಸಲಿದ್ದಾರೆ. ಎಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿರುವ ಗಾಲಾ ಡಿನ್ನರ್‌ನಲ್ಲಿ ಇತರ ವಿಶ್ವ ನಾಯಕರೊಂದಿಗೆ ಮೋದಿ ಕೂಡ ಪಾಲ್ಗೊಳ್ಳಲಿದ್ದಾರೆ.
ಶೃಂಗಸಭೆಯ ಅಜೆಂಡಾ
ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಜಾಗತಿಕ ಆರ್ಥಿಕ ಸ್ಥಿರತೆ, ಇಂಧನ ಭದ್ರತೆ, ಕೃತಕ ಬುದ್ಧಿಮತ್ತೆ, ಉಕ್ರೇನ್ ಮತ್ತು ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ವಿಶಾಲ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಚರ್ಚೆ ನಡೆಸಲಿದ್ದಾರೆ. ಭಾರತವು ಜಿ7ನ ಸದಸ್ಯ ರಾಷ್ಟ್ರವಲ್ಲದಿದ್ದರೂ ನಾಯಕರ ಆಹ್ವಾನದ ಮೇರೆಗೆ ನಿಯಮಿತವಾಗಿ ಭಾಗವಹಿಸುತ್ತಿದೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.