ಹೇಗ್, ಮೇ 17: ʼʼಮೊದಲು ಕೊರೊನಾ, ಬಳಿಕ ಯುದ್ಧ, ಇದೀಗ ಇಂಧನ ಬಿಕ್ಕಟ್ಟು-ಕಳೆದೊಂದು ದಶಕದಿಂದ ಜಗತ್ತಿಗೆ ವಿಪತ್ತು ಎದುರಾಗುತ್ತಿದ್ದು, ಇದರಿಂದ ಮತ್ತೆ ಬಡತನ ಕಾಡಲಿದೆ. ಶೀಘ್ರದಲ್ಲೇ ಇಂಧನ ಬಿಕ್ಕಟ್ಟು ಬಗೆಹರಿಯದಿದ್ದರೆ ದಶಕಗಳ ಪ್ರಯತ್ನ ವ್ಯರ್ಥವಾಗಲಿದೆʼʼ ಎಂದು ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಎಚ್ಚರಿಸಿದ್ದಾರೆ. ಇದು ಮಹಾ ವಿಪತ್ತುಗಳ ದಶಕ ಎಂದು ಅವರು ಬಣ್ಣಿಸಿದ್ದಾರೆ. ಜಾಗತಿಕ ಆರ್ಥಿಕತೆ ಸ್ಥಿತಿಯ ಬಗ್ಗೆ ಶನಿವಾರ (ಮೇ 16) ಎಚ್ಚರಿಕೆ ನೀಡಿದ್ದಾರೆ.
''ವಿಶ್ವದಾದ್ಯಂತ ಹರಡುತ್ತಿರುವ ಬಿಕ್ಕಟ್ಟುಗಳನ್ನು ತುರ್ತಾಗಿ ಹಿಮ್ಮೆಟ್ಟಿಸದಿದ್ದರೆ ಬಡತನದ ವಿರುದ್ಧ ದಶಕಗಳಿಂದ ಸಾಧಿಸಲಾದ ಪ್ರಗತಿ ವ್ಯರ್ಥವಾಗಲಿದೆʼʼ ಎಂದು ಮೋದಿ ಹೇಳಿದ್ದಾರೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ನಂತರ, ವಿಶೇಷವಾಗಿ ತೈಲ ಸಮೃದ್ಧ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆಯಲ್ಲಿ, ಮೋದಿ ಪ್ರಸ್ತುತ ದಶಕವನ್ನು ಸಂಕೀರ್ಣ ವಿಪತ್ತಿನ ಅವಧಿ ಎಂದು ಬಣ್ಣಿಸಿದ್ದಾರೆ.
ನರೇಂದ್ರ ಮೋದಿ ಅವರ ಭಾಷಣ:
ವಿಪತ್ತುಗಳ ದಶಕ
"ಮೊದಲು ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಬಂತು, ನಂತರ ಯುದ್ಧಗಳು ಭುಗಿಲೆದ್ದವು, ಮತ್ತು ಈಗ ಇಂಧನ ಬಿಕ್ಕಟ್ಟು ಎದುರಾಗಿದೆ. ಇದು ಜಗತ್ತಿಗೆ ವಿಪತ್ತುಗಳ ದಶಕವಾಗಿ ಬದಲಾಗುತ್ತಿದೆ. ಇದರಿಂದ ಕಳೆದ ಹಲವು ದಶಕಗಳ ಸಾಧನೆಗಳು ಕೊಚ್ಚಿ ಹೋಗುತ್ತಿವೆ ಮತ್ತು ವಿಶ್ವದ ಜನಸಂಖ್ಯೆಯ ಒಂದು ದೊಡ್ಡ ಭಾಗವು ಮತ್ತೆ ಬಡತನಕ್ಕೆ ತಳ್ಳಲ್ಪಡುತ್ತದೆ" ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ವಿದೇಶದಲ್ಲಿರುವ ಭಾರತೀಯರು ತಮ್ಮ ದೇಶಕ್ಕೆ ಹಿಂತಿರುಗಿ ಹೂಡಿಕೆ ಮಾಡುವಂತೆ ವೈಯಕ್ತಿಕವಾಗಿ ಮನವಿ ಮಾಡಿದ್ದಾರೆ. ಇದನ್ನು ʼಮೋದಿ ಗ್ಯಾರಂಟಿʼ ಎಂದು ಕರೆದಿದ್ದಾರೆ.
ರಕ್ಷಣೆ, ಇಂಧನ, ವ್ಯಾಪಾರ; ಭಾರತ- ನೆದರ್ಲ್ಯಾಂಡ್ ಮಹತ್ವದ ಒಪ್ಪಂದದಲ್ಲೇನಿದೆ?
ಯುವಶಕ್ತಿಯಿಂದ ಸಶಕ್ತ ಭಾರತ
ʼʼಭಾರತದ ಯುವಶಕ್ತಿ ಇಂದು ಬಾನಂಗಳ ಸ್ಪರ್ಶಿಸಲು ತವಕಿಸುತ್ತಿದೆ. ಮುಖ್ಯವಾಗಿ ಭಾರತದ ಸ್ಟಾರ್ಟ್‌ಅಪ್ ವ್ಯವಸ್ಥೆ ಬಲಿಷ್ಠವಾಗುತ್ತಿರುವುದು ಯುವಶಕ್ತಿಯ ಉನ್ನತ ಆಶೋತ್ತರಗಳ ಹಿಂದಿನ ಪ್ರೇರಣೆ. ನಾವಿಂದು ಜಗತ್ತಿನ ತೃತೀಯ ಬೃಹತ್ ಸ್ಟಾರ್ಟ್‌ಅಪ್ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಿದೆ. ಭಾರತ ಒಲಿಂಪಿಕ್ಸ್‌ಗೆ ಅತಿಥೇಯ ವಹಿಸಲು ಬಯಸುತ್ತಿದೆ. ಜಾಗತಿಕ ಉತ್ಪಾದನಾ ಕೇಂದ್ರವಾಗಲು ಆಶಿಸಿದೆʼʼ ಎಂದು ಮೋದಿ ತಿಳಿಸಿದರು.
ಇಂಧನ ಉಳಿತಾಯಕ್ಕೆ ಕರೆ ನೀಡಿದ್ದ ಮೋದಿ
ಇತ್ತೀಚೆಗಷ್ಟೆ ಮಾತನಾಡಿದ ನರೇಂದ್ರ ಮೋದಿ ಇಂಧನ ಉಳಿತಾಯಕ್ಕೆ ಕರೆ ನೀಡಿದ್ದರು. ವರ್ಕ್ ಫ್ರಮ್ ಹೋಂ, ಸಾರ್ವಜನಿಕ ವಾಹನ ಹೆಚ್ಚಾಗಿ ಬಳಸಬೇಕು ಎಂದು ಹೇಳಿದ್ದರು. ಅಲ್ಲದೆ ಚಿನ್ನದ ಖರೀದಿಯನ್ನೂ ಕಡಿಮೆ ಮಾಡಬೇಕು ಎಂದಿದ್ದರು. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಇನ್ನೂ ಬಗೆಹರಿಯದ ಕಾರಣ ಇಂಧನ ಬಳಕೆಗೆ ಕಡಿವಾಣ ಹಾಕುವಂತೆ ಸೂಚಿಸಿದ್ದರು. ಹೊರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧವನ್ನು ಇರಾನ್ ಇನ್ನೂ ಸಡಿಲಿಸದ ಕಾರಣ ಇಂಧನ ಸಾಗಾಟದ ಬಿಕ್ಕಟ್ಟು ಹಾಗೇ ಮುಂದುವರಿದಿದೆ. ಇದೇ ಹಿನ್ನೆಲೆಯಲ್ಲಿ ಇತ್ತೀಚೆಗೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಲಾಗಿದೆ. ತಲಾ 3 ರುಪಾಯಿ ಅಧಿಕವಾಗಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.