ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

P೦K Unrest: ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಪಿಒಕೆಯಲ್ಲಿ ಭಾರೀ ಪ್ರತಿಭಟನೆ!

ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅನಿರ್ದಿಷ್ಟಾವಧಿಗೆ ಮುಷ್ಕರಕ್ಕೆ ಕರೆ ನೀಡಲಾಗಿದ್ದು ಸಾವಿರಾರು ಜನರು ಬೀದಿಗಿಳಿದಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅವಾಮಿ ಕ್ರಿಯಾ ಸಮಿತಿ (ಎಎಸಿ) ಸೋಮವಾರ ಕರೆ ನೀಡಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಸಾವಿರಾರು ಜನರು ಬೀದಿಗಿಳಿದಿದ್ದಾರೆ.

ಪಿಒಕೆಯಲ್ಲಿ ಉದ್ವಿಗ್ನತೆ: ಪಾಕ್‌ ವಿರುದ್ಧ ಭಾರೀ ಆಕ್ರೋಶ

-

ಮುಜಫರಾಬಾದ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pakistan occupied Kashmir) ಈಗ ಉದ್ವಿಗ್ನತೆ ಹೆಚ್ಚಾಗಿದೆ. ಅವಾಮಿ ಕ್ರಿಯಾ ಸಮಿತಿ (Awami Action Committee) ಸೋಮವಾರ ಈ ಪ್ರದೇಶದಾದ್ಯಂತ ವ್ಯಾಪಕ ಪ್ರತಿಭಟನೆ (Protest) ಹಮ್ಮಿಕೊಂಡಿದ್ದು, ಇದು ಇಲ್ಲಿನ ಇತಿಹಾಸದಲ್ಲೇ ಅತೀ ದೊಡ್ಡ ಪ್ರತಿಭಟನೆಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಪ್ರಧಾನಿ ಶೆಹಬಾಜ್ ಷರೀಫ್ (PM Shehbaz Sharif) ಸರ್ಕಾರದ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅನಿರ್ದಿಷ್ಟಾವಧಿಗೆ ಮುಷ್ಕರಕ್ಕೆ ಕರೆ ನೀಡಲಾಗಿದ್ದು ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಅಂಗಡಿಗಳನ್ನು ಮುಚ್ಚಿ, ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಭಾರಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಇಸ್ಲಾಮಾಬಾದ್ ಅಪಾರ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಮಧ್ಯರಾತ್ರಿಯಿಂದ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿದೆ. ಇತ್ತೀಚೆಗೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿರುವ ನಾಗರಿಕ ಸಮಾಜದ ಒಕ್ಕೂಟವಾದ ಅವಾಮಿ ಕ್ರಿಯಾ ಸಮಿತಿಯು ಪಾಕ್ ಆಕ್ರಮಿತ ಕಾಶ್ಮೀರದ ಭಾಗವು ರಾಜಕೀಯ, ಆರ್ಥಿಕ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಆರೋಪಿಸಿ ಸಾವಿರಾರು ಜನರನ್ನು ಒಗ್ಗೂಡಿಸಿದೆ. ಪಾಕಿಸ್ತಾನದಲ್ಲಿ ವಾಸಿಸುವ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ ಪಿಒಕೆ ಅಸೆಂಬ್ಲಿಯಲ್ಲಿ 12 ಶಾಸಕಾಂಗ ಸ್ಥಾನಗಳನ್ನು ರದ್ದುಗೊಳಿಸುವುದು ಸೇರಿದಂತೆ ಇದು ಇಲ್ಲಿ ಪ್ರಮುಖ 38 ಸುಧಾರಣೆಗಳಿಗೆ ಒತ್ತಾಯಿಸಿದೆ.

ಶಾಸಕಾಂಗ ಸ್ಥಾನಗಳು ಪ್ರತಿನಿಧಿ ಆಡಳಿತವನ್ನು ದುರ್ಬಲಗೊಳಿಸುತ್ತದೆ ಎಂದಿರುವ ಸ್ಥಳೀಯರು ಸಬ್ಸಿಡಿ, ಮಂಗಳ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಉತ್ತಮ ವಿದ್ಯುತ್ ಸುಂಕ, ಇಸ್ಲಾಮಾಬಾದ್ ಭರವಸೆ ನೀಡಿದ ದೀರ್ಘಕಾಲದಿಂದ ವಿಳಂಬವಾಗಿದ್ದ ಸುಧಾರಣೆಗಳ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವಾಮಿ ಕ್ರಿಯಾ ಸಮಿತಿಯ ಪ್ರಮುಖ ನಾಯಕ ಶೌಕತ್ ನವಾಜ್ ಮಿರ್, ನಮ್ಮ ಅಭಿಯಾನ ಯಾವುದೇ ಸಂಸ್ಥೆಯ ವಿರುದ್ಧವಲ್ಲ. 70 ವರ್ಷಗಳಿಗೂ ಹೆಚ್ಚು ಕಾಲ ನಮ್ಮ ಜನರಿಗೆ ನಿರಾಕರಿಸಲಾದ ಮೂಲಭೂತ ಹಕ್ಕುಗಳಿಗಾಗಿ ಎಂದು ಹೇಳಿದ್ದಾರೆ.

ಭದ್ರತೆ ಹೆಚ್ಚಳ

ಪ್ರತಿಭಟನೆ ತೀವ್ರಗೊಂಡ ಬಳಿಕ ಪ್ರತಿಭಟನಾಕಾರರೊಂದಿಗೆ ಮಾತುಕತೆಗಳು ವಿಫಲವಾಗಿದ್ದು ಅಧಿಕಾರಿಗಳು ಬಲಪ್ರದರ್ಶನಕ್ಕೆ ಮುಂದಾಗಿದ್ದಾರೆ. ಭಾರಿ ಶಸ್ತ್ರಸಜ್ಜಿತ ಪಡೆಗಳು ಪಿಒಕೆ ಪಟ್ಟಣಗಳಲ್ಲಿ ಧ್ವಜ ಮೆರವಣಿಗೆಗಳನ್ನು ನಡೆಸಿತು. ಪಂಜಾಬ್‌ನಿಂದ ಸಾವಿರಾರು ಸೈನಿಕರನ್ನು ಸ್ಥಳಕ್ಕೆ ಕರೆಸಲಾಗಿದೆ. ಪ್ರಮುಖ ನಗರಗಳ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಮುಚ್ಚಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.

ಸ್ಥಳೀಯ ಭದ್ರತಾ ಪಡೆಗಳನ್ನು ಬಲಪಡಿಸಲು ಇಸ್ಲಾಮಾಬಾದ್ ನಿಂದ ಹೆಚ್ಚುವರಿಯಾಗಿ 1,000 ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಈ ಕ್ರಮ ಅಗತ್ಯ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುದಸ್ಸರ್ ಫಾರೂಕ್ ತಿಳಿಸಿದ್ದಾರೆ. ಅವಾಮಿ ಕ್ರಿಯಾ ಸಮಿತಿಯ ಸಮಾಲೋಚಕರು, ಪಿಒಕೆ ಆಡಳಿತ ಮತ್ತು ಫೆಡರಲ್ ಮಂತ್ರಿಗಳ ನಡುವಿನ ಮಾತುಕತೆಗಳು ಮುರಿದುಬಿದ್ದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಸಮಿತಿಯು ಗಣ್ಯರಿಗೆ ನೀಡುವ ಸವಲತ್ತುಗಳು ಮತ್ತು ನಿರಾಶ್ರಿತರ ಅಸೆಂಬ್ಲಿ ಸ್ಥಾನಗಳನ್ನು ತೆಗೆದುಹಾಕಲು ನಿರಾಕರಿಸಿದ್ದರಿಂದ ಮಾತುಕತೆ ಸಂಪೂರ್ಣ ವಿಫಲವಾಯಿತು.

ಇದನ್ನೂ ಓದಿ: ನಮ್ಮವರ ಆಟ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು; ಟೀಮ್‌ ಇಂಡಿಯಾಕ್ಕೆ ಸಿಎಂ ಅಭಿನಂದನೆ

ಮುಜಫರಾಬಾದ್‌ನಲ್ಲಿ ಏನಾಗಿದೆ?

ಮುಜಫರಾಬಾದ್‌ನ ವ್ಯಾಪಾರಿ ಸಂಘಗಳು ಭಾನುವಾರ ಅಂಗಡಿಗಳನ್ನು ತೆರೆದಿಡುವುದಾಗಿ ಘೋಷಿಸಿದ್ದು, ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಅವಕಾಶವನ್ನು ನೀಡಿತು. ಭದ್ರತಾ ಪಡೆಗಳು ನಗರಕ್ಕೆ ಪ್ರವೇಶಿಸಿ ಭಾರಿ ಭದ್ರತೆಯನ್ನು ಕೈಗೊಂಡಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ನಾಗರಿಕರು ಸ್ವಾತಂತ್ರ್ಯಕ್ಕಾಗಿ ಘೋಷಣೆಗಳನ್ನು ಕೂಗಿದರು. ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದು, ಸೋಮವಾರ ಪ್ರತಿಭಟನೆಯನ್ನು ತೀವ್ರಗೊಳಿಸಲಾಗಿದೆ.