ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗ ಕಳೆದುಕೊಳ್ಳುವ ಎಚ್-1ಬಿ ವೀಸಾ ಸೇರಿದಂತೆ ಕೆಲವು ವರ್ಗಗಳ ವಿದೇಶಿ ಉದ್ಯೋಗಿಗಳ ವಾಸ್ತವ್ಯಕ್ಕೆ ನೀಡಲಾಗುತ್ತಿದ್ದ ಗರಿಷ್ಠ 60 ದಿನಗಳ ‘ಗ್ರೇಸ್ ಪೀರಿಯಡ್’ ಸೌಲಭ್ಯವನ್ನು ರದ್ದುಪಡಿಸಲು ಡೊನಾಲ್ಡ ಟ್ರಂಪ್ ಆಡಳಿತ ಪ್ರಸ್ತಾವನೆ ಮುಂದಿ ಟ್ಟಿದೆ. ಈ ಪ್ರಸ್ತಾವನೆ ನಿಯಮವಾಗಿ ಜಾರಿಗೆ ಬಂದರೆ, ಉದ್ಯೋಗ ಕಳೆದುಕೊಂಡ ವಿದೇಶಿ ಉದ್ಯೋಗಿ ಗಳಿಗೆ ಅಮೆರಿಕದ ಉಳಿದುಕೊಂಡು ಹೊಸ ಉದ್ಯೋಗ ಹುಡುಕುವ ಅವಕಾಶ ಸೀಮಿತವಾಗಲಿದೆ.
ಇದು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ತಾಂತ್ರಿಕ ವೃತ್ತಿಪರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ರಸ್ತುತ ನಿಯಮದ ಪ್ರಕಾರ, ಎಚ್-1ಬಿ ಸೇರಿ ದಂತೆ ಕೆಲವು ವಲಸೆರಹಿತ ವೀಸಾ ಹೊಂದಿರುವ ವರು ಉದ್ಯೋಗ ಕಳೆದುಕೊಂಡ ಬಳಿಕ ಗರಿಷ್ಠ 60 ದಿನಗಳ ವರೆಗೆ ಅಮೆರಿಕದಲ್ಲಿ ಉಳಿಯಬಹುದು. ಈ ಅವಧಿಯಲ್ಲಿ ಹೊಸ ಉದ್ಯೋಗ ಹುಡುಕುವುದು, ವೀಸಾ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವುದು ಅಥವಾ ಅಮೆರಿಕ ತೊರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅವಕಾಶವಿದೆ. ಉದ್ಯೋಗಿ ಯನ್ನು ಕಂಪನಿ ವಜಾಗೊಳಿಸಿದರೂ ಅಥವಾ ಉದ್ಯೋಗಿಯೇ ಕೆಲಸ ತೊರೆದರೂ ಈ ಸೌಲಭ್ಯ ಅನ್ವಯಿಸುತ್ತದೆ.
ಇದನ್ನೂ ಓದಿ: Visa-Free Entry: ಭಾರತೀಯ ಪ್ರವಾಸಿಗರಿಗೆ ಗುಡ್ ನ್ಯೂಸ್; ಇನ್ಮುಂದೆ ವೀಸಾ ಇಲ್ಲದೆ ಫಿಲಿಪ್ಪೈನ್ಸ್‌ಗೆ ತೆರಳಬಹುದು
ಉದ್ಯೋಗವಿಲ್ಲದಿದ್ದರೆ ವೀಸಾವೂ ಅಂತ್ಯ: ಅಮೆರಿಕದ ಗೃಹ ಭದ್ರತಾ ಇಲಾಖೆ ಮುಂದಿಟ್ಟಿರುವ ಪ್ರಸ್ತಾವದ ಪ್ರಕಾರ, ವಿದೇಶಿ ಉದ್ಯೋಗಿಗೆ ಅಮೆರಿಕ ದಲ್ಲಿ ಉಳಿಯಲು ಆಧಾರವಾಗಿರುವ ಉದ್ಯೋಗವೇ ಕೊನೆಗೊಂಡರೆ, ಅವರ ವಲಸೆ ರಹಿತ ವೀಸಾ ಸ್ಥಿತಿಯೂ ಅಂತ್ಯಗೊಳ್ಳ ಬಹುದು. ಅಮೆರಿಕದಲ್ಲಿ ಉಳಿಯಲು ಮತ್ತೊಂದು ಮಾನ್ಯ ಕಾನೂನುಬದ್ಧ ಅನುಮತಿ ಇಲ್ಲದಿದ್ದರೆ ದೇಶ ತೊರೆಯಬೇಕಾಗ ಬಹುದು. ಒಂದು ವೇಳೆ ಮತ್ತೊಂದು ಅಮೆರಿಕನ್ ಕಂಪನಿ ಉದ್ಯೋಗ ನೀಡಲು ಸಿದ್ಧವಿದ್ದರೂ, ಹೊಸ ಉದ್ಯೋಗದ ಆಧಾರದ ಮೇಲೆ ಅಮೆರಿಕ ಪ್ರವೇಶಕ್ಕಾಗಿ ವಿದೇಶದಲ್ಲಿರುವ ಅಮೆರಿಕ ರಾಯ ಭಾರ ಕಚೇರಿ ಅಥವಾ ದೂತಾವಾಸದ ಮೂಲಕ ಮರು ಅರ್ಜಿ ಸಲ್ಲಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಪ್ರಸ್ತಾವದಲ್ಲಿ ಉಖಿಸಲಾಗಿದೆ.
ಎಚ್-1ಬಿಗೆ ಮಾತ್ರ ಸೀಮಿತವಲ್ಲ: ಪ್ರಸ್ತಾವಿತ ಬದಲಾವಣೆ ಎಚ್-1ಬಿ ವೀಸಾದಾರರಿಗೆ ಮಾತ್ರ ಅನ್ವಯಿಸುವುದಿಲ್ಲ. ಇ-1,ಇ-2, ಇ-3, ಎಚ್-1ಬಿ1, ಎಲ್-1, ಒ-1 ಮತ್ತು ಟಿ.ಎನ್ ಸೇರಿದಂತೆ ಹಲವು ವಲಸೆರಹಿತ ವೀಸಾ ವರ್ಗಗಳಿಗೂ ಇದು ಅನ್ವಯಿಸುವ ಸಾಧ್ಯತೆಯಿದೆ. ಈ ವೀಸಾ ಹೊಂದಿರು ವವರ ಅವಲಂಬಿತರ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.
2016ರಲ್ಲಿ ರೂಪುಗೊಂಡಿದ್ದ ಸೌಲಭ್ಯ: ಉದ್ಯೋಗ ಕಳೆದುಕೊಂಡ ಬಳಿಕ 60 ದಿನಗಳವರೆಗೆ ಅಮೆರಿಕದಲ್ಲಿ ಉಳಿದುಕೊಂಡು ಹೊಸ ಉದ್ಯೋಗ ಹುಡುಕುವ ಅವಕಾಶವನ್ನು 2016ರಲ್ಲಿ ರೂಪಿಸಲಾಗಿದ್ದು, ೨೦೧೭ರಿಂದ ಜಾರಿಗೆ ಬಂದಿತ್ತು. ಹೆಚ್ಚಿನ ಕೌಶಲ್ಯ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ಉದ್ಯೋಗ ಬದಲಾಯಿಸಲು ಸಮಯ ನೀಡುವುದು ಮತ್ತು ಅಮೆರಿಕದ ಕಂಪನಿ ಗಳಿಗೆ ಅಂತಹ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿತ್ತು. 60 ದಿನಗಳ ಗ್ರೇಸ್ ಪೀರಿಯಡ್ ಸದ್ಯಕ್ಕೆ ರದ್ದಾಗಿಲ್ಲ. ಇದು ಟ್ರಂಪ್ ಸರಕಾರದ ಪ್ರಸ್ತಾವ ಮಾತ್ರ. ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ನಡೆಯಲಿದ್ದು, ಸುಮಾರು ಎರಡು ತಿಂಗಳ ಸಾರ್ವಜನಿಕ ಪ್ರತಿಕ್ರಿಯೆ ಅವಧಿಯ ಬಳಿಕವೇ ಅಂತಿಮ ನಿಯಮ ರೂಪುಗೊಳ್ಳಲಿದೆ.
85 ಸಾವಿರ ಎಚ್-1ಬಿ ವೀಸಾ ಮಿತಿ: ಅಮೆರಿಕದ ಕಾನೂನು ಪ್ರಕಾರ ಪ್ರತಿ ವರ್ಷ ಸಾಮಾನ್ಯವಾಗಿ 65000 ಎಚ್-1ಬಿ ವೀಸಾಗಳ ಮಿತಿ ಇದೆ. ಅಮೆರಿಕದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಪದವಿ ಪಡೆದವರಿಗೆ ಹೆಚ್ಚುವರಿಯಾಗಿ 20000 ವೀಸಾಗಳ ಅವಕಾಶವಿದೆ. ವಿಶೇಷ ತಾಂತ್ರಿಕ ಅಥವಾ ಪರಿಣತಿ ಅಗತ್ಯವಿರುವ ಉದ್ಯೋಗಗಳಿಗೆ ವಿದೇಶಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಎಚ್-1ಬಿ ವೀಸಾ ಬಳಸಲಾಗುತ್ತದೆ. ಟ್ರಂಪ್ ಆಡಳಿತದ ಈ ಪ್ರಸ್ತಾವ ಜಾರಿಗೆ ಬಂದರೆ, ಉದ್ಯೋಗ ಕಳೆದುಕೊಳ್ಳುವ ವಿದೇಶಿ ವೃತ್ತಿಪರರಿಗೆ ಅಮೆರಿಕದ ಉಳಿದು ಹೊಸ ಉದ್ಯೋಗ ಹುಡುಕುವ ಪ್ರಕ್ರಿಯೆ ಮತ್ತಷ್ಟು ಕಠಿಣವಾಗುವ ಸಾಧ್ಯತೆಯಿದೆ.
ಭಾರತೀಯ ಉದ್ಯೋಗಿಗಳಿಗೆ ಏಕೆ ಆತಂಕ?
ಅಮೆರಿಕದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಚೀನಾದಂತಹ ದೇಶ ಗಳಿಂದ ಎಚ್-1ಬಿ ವೀಸಾ ಮೂಲಕ ದೊಡ್ಡ ಸಂಖ್ಯೆಯಲ್ಲಿ ನುರಿತ ಉದ್ಯೋಗಿಗಳನ್ನು ನೇಮಕ ಮಾಡಿ ಕೊಳ್ಳಲಾಗುತ್ತದೆ. ಹೀಗಾಗಿ ಉದ್ಯೋಗ ಕಳೆದುಕೊಂಡ ನಂತರ ಹೊಸ ಕೆಲಸ ಹುಡುಕಲು ಸದ್ಯ ಇರುವ 60 ದಿನಗಳ ಅವಕಾಶ ರದ್ದಾದರೆ, ವಿಶೇಷವಾಗಿ ಭಾರತೀಯ ತಾಂತ್ರಿಕ ವೃತ್ತಿಪರರಿಗೆ ತಕ್ಷಣವೇ ಹೊಸ ಉದ್ಯೋಗ ಅಥವಾ ಪರ್ಯಾಯ ಕಾನೂನುಬದ್ಧ ವೀಸಾ ಸ್ಥಿತಿ ಪಡೆಯುವ ಒತ್ತಡ ಎದುರಾಗಬಹುದು. ಅಮೆರಿಕದ ತಂತ್ರಜ್ಞಾನ ಉದ್ಯಮವು ಭಾರತ ಮತ್ತು ಚೀನಾದ ನುರಿತ ಉದ್ಯೋಗಿಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಈ ವಲಯಕ್ಕೆ ಎಚ್-1ಬಿ ವೀಸಾಗಳು ಅತ್ಯಂತ ಪ್ರಮುಖವಾಗಿವೆ. ಟಿಸಿಎಸ್, ಇನೋಸಿಸ್, ಎಚ್‌ಸಿಎಲ್ ಟೆಕ್ ಮತ್ತು ಮೈಂಡ್ ಟ್ರೀ ಸೇರಿದಂತೆ ಪ್ರಮುಖ ಭಾರತೀಯ ಐಟಿ ಕಂಪೆನಿಗಳು ಎಚ್-1ಬಿ ವೀಸಾಗಳ ಪ್ರಮುಖ ಪ್ರಾಯೋಜಕರಾಗಿವೆ. ಡೆಲಾಯ್ಟ, ಪಿಡಬ್ಲ್ಯುಸಿ ಯಂತಹ ಪ್ರಮುಖ ಜಾಗತಿಕ ಕನ್ಸಲ್ಟೆನ್ಸಿ ಸಂಸ್ಥೆಗಳೂ ಎಚ್-1ಬಿ ವೀಸಾ ಪ್ರಾಯೋಜಕರಾಗಿವೆ.