ಮಿಲನ್: ಗಾಜಾದ ಮೇಲಿನ ಇಸ್ರೇಲ್ ದಾಳಿ ಹಾಗೂ ಪ್ಯಾಲಸ್ತೀನ್‌ಗೆ (Free Palestine) ಬೆಂಬಲ ಸೂಚಿಸದ್ದಕ್ಕಾಗಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯ ( Giorgia Meloni) ತೀವ್ರ ಬಲಪಂಥೀಯ ಸರ್ಕಾರದ ನಿರ್ಧಾರದ ವಿರುದ್ಧ ಪ್ಯಾಲಸ್ತೀನ್ ಪರ ಹೋರಾಟಗಾರರು ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ ಇಟಲಿಯ ಹಲವಾರು ನಗರಗಳಲ್ಲಿ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು . ಗಾಜಾದಲ್ಲಿ ಪ್ಯಾಲಸ್ತೀನ್‌ಯನ್ನರ ಸಾಮೂಹಿಕ ಹತ್ಯೆಗಳ ವಿರುದ್ಧ ಕಾರ್ಮಿಕ ಸಂಘಗಳು ಕರೆ ನೀಡಿದ್ದ 'ಎಲ್ಲವನ್ನೂ ನಿರ್ಬಂಧಿಸೋಣ' ಎಂಬ ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಈ ಪ್ರದರ್ಶನಗಳು ನಡೆದವು.
ಮಿಲನ್‌ನ ಸೆಂಟ್ರಲ್ ಸ್ಟೇಷನ್‌ನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಕಪ್ಪು ಬಟ್ಟೆ ಧರಿಸಿ ಪ್ಯಾಲಸ್ತೀನ್ ಧ್ವಜವನ್ನು ಬೀಸುತ್ತಿದ್ದ ಪ್ರತಿಭಟನಾಕಾರರ ಗುಂಪು ಕಂಬವನ್ನು ಬಳಸಿ ನಿಲ್ದಾಣದ ಕಿಟಕಿಯನ್ನು ಒಡೆದು ಪೊಲೀಸರ ಮೇಲೆ ಕುರ್ಚಿಯನ್ನು ಎಸೆದರು. ಈ ಘರ್ಷಣೆಯಲ್ಲಿ 60 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡರು. ಮಿಲನ್‌ನಲ್ಲಿ 10 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ವೆನಿಸ್ ಬಂದರಿನಲ್ಲಿ, ಪೊಲೀಸರು ಪ್ರದರ್ಶನಗಳನ್ನು ಹತ್ತಿಕ್ಕಲು ಜಲಫಿರಂಗಿ ಬಳಸಿದರು. ಜಿನೋವಾ, ಲಿವೊರ್ನೊ ಮತ್ತು ಟ್ರೈಸ್ಟೆ ನಗರಗಳ ಬಂದರುಗಳಲ್ಲಿ ಕಾರ್ಮಿಕರು ಪ್ರತಿಭಟನೆಗಳನ್ನು ನಡೆಸಿದರು, ಗಾಜಾದಲ್ಲಿ ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳು ಮತ್ತು ಇತರ ಸರಬರಾಜುಗಳನ್ನು ವರ್ಗಾಯಿಸಲು ಇಟಲಿಯನ್ನು ಕೇಂದ್ರವಾಗಿ ಬಳಸುತ್ತಿರುವದನ್ನು ಪ್ರತಿಭಟಿಸಿದ್ದಾರೆ. ಬೊಲೊಗ್ನಾದಲ್ಲಿ, ಪ್ರತಿಭಟನಾಕಾರರು ಹೆದ್ದಾರಿಯನ್ನು ತಡೆದು, ವಾಹನಗಳನ್ನು ನಿಲ್ಲಿಸಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ: Isreal Hamas War: ಗಾಜಾ ಮೇಲೆ ಮತ್ತೆ ಇಸ್ರೇಲ್ ದಾಳಿ; 50 ಕ್ಕೂ ಅಧಿಕ ಮಂದಿ ಸಾವು
ದಕ್ಷಿಣ ನಗರವಾದ ನೇಪಲ್ಸ್‌ನಲ್ಲಿ, ಜನಸಮೂಹವು ಮುಖ್ಯ ರೈಲ್ವೆ ನಿಲ್ದಾಣಕ್ಕೆ ಬಲವಂತವಾಗಿ ನುಗ್ಗಿದಾಗ ಪೊಲೀಸರೊಂದಿಗೆ ಘರ್ಷಣೆ ನಡೆಯಿತು. ಅವರಲ್ಲಿ ಕೆಲವರು ಸ್ವಲ್ಪ ಸಮಯದವರೆಗೆ ಹಳಿಗಳ ಮೇಲೆ ಇಳಿದರು, ಇದರಿಂದಾಗಿ ರೈಲು ಸೇವೆಯಲ್ಲಿ ವ್ಯತ್ಯವಾಗಿದೆ. ವಾಯುವ್ಯ ನಗರವಾದ ಜಿನೋವಾದಲ್ಲಿ, ನೂರಾರು ಜನರ ಗುಂಪಿನಲ್ಲಿ ಪ್ರತಿಭಟನಾಕಾರರು ಬಂದರಿನ ಸುತ್ತಲೂ ನಡೆದ ಸಭೆಗಳಲ್ಲಿ ಮೆಲೋನಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.