ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತೀಯರ ಸುರಕ್ಷತೆಗೆ ಕತಾರ್‌ ಸರ್ಕಾರದಿಂದ ಸಂಪೂರ್ಣ ಸಹಕಾರ

ಯುಎಸ್, ಇಸ್ರೇಲ್ ಸೇನಾಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇದಕ್ಕೆ ಪ್ರತೀಕಾರವಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಕತಾರ್ ನ ಹಲವು ಭಾಗಗಳ ಮೇಲೂ ದಾಳಿ ನಡೆಸಲಾಗಿತ್ತು. ಆದರೆ ಕತಾರ್ ಸರ್ಕಾರ ಜನತೆಯ ಸುರಕ್ಷತೆಗೆ ಸಂಪೂರ್ಣ ಒತ್ತು ನೀಡಿದ್ದು, ಭಾರತೀಯರು ಇಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಕನ್ನಡಿಗರಾದ ಕತಾರ್ ಭಾರತೀಯ ಕ್ರೀಡಾ ಕೇಂದ್ರದ ಸಲಹಾ ಮಂಡಳಿ ಸದಸ್ಯರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ಕತಾರ್: ಭಾರತೀಯರು ಕತಾರ್‌ನಲ್ಲಿ (Indians in qatar) ಸಂಪೂರ್ಣ ಸುರಕ್ಷಿತವಾಗಿದ್ದಾರೆ. ಕತಾರ್ ಸರ್ಕಾರ (Qatar government) ಅವರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಿದೆ ಎಂದು ಕನ್ನಡಿಗರಾದ ಕತಾರ್ ಭಾರತೀಯ ಕ್ರೀಡಾ ಕೇಂದ್ರದ (Qatar Indian Sports Centre) ಸಲಹಾ ಮಂಡಳಿ (Advisory council member) ಸದಸ್ಯರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ತಿಳಿಸಿದ್ದಾರೆ. ಕಳೆದ ಫೆಬ್ರವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಸೇನಾ ಪಡೆಗಳು ಇರಾನ್ ಮೇಲೆ ದಾಳಿ ನಡೆಸಿದ ಪರಿಣಾಮ ಇರಾನ್ ಕೊಲ್ಲಿ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕತಾರ್ ಸರ್ಕಾರ ಜನತೆಯ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಕತಾರಿನ ದೋಹಾದಲ್ಲಿರುವ ಜನಸಾಮಾನ್ಯರಿಗೆ ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಕತಾರ್ ದೇಶದ ಆಂತರಿಕ ಮಂತ್ರಾಲಯಗಳು ನಿರಂತರ ಸೂಚನೆಗಳನ್ನು ನೀಡುತ್ತಿವೆ. ಭಾನುವಾರ 1ರಿಂದ ವೈದ್ಯಕೀಯ ಹಾಗೂ ನಾಗರಿಕ ಸರಬರಾಜು ಸೇವೆಗಳನ್ನು ಹೊರತುಪಡಿಸಿ ಇನ್ನು ಯಾವುದೇ ಸಂಸ್ಥೆಗಳು ಹಾಗೂ ಶಾಲೆಗಳು ಚಟುವಟಿಕೆಗಳನ್ನು ನಡೆಸುತ್ತಿಲ್ಲ.

ಇರಾನ್ ದಾಳಿಯಿಂದ ಕತಾರ್ ಎಲ್‌ಎನ್‌ಜಿ ರಫ್ತಿಗೆ ಅಡ್ಡಿ: ಭಾರತ ಸೇರಿ ಹಲವು ರಾಷ್ಟ್ರಗಳ ಕಾಡಲಿದ್ಯಾ ಇಂಧನ ಕೊರತೆ? ಇಂಧನ ಕೊರತೆ?

ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಇದ್ದಂತಹ ವಾತಾವರಣವು ಮರು ಸೃಷ್ಟಿಯಾಗಿ ಶಾಲೆಗಳು ಹಾಗೂ ಸಂಸ್ಥೆಗಳ ಕೆಲಸಗಳು ಮನೆಯಿಂದಲೇ ನಡೆಯುತ್ತಿವೆ. ಸ್ಥಳೀ್ಯ ಮಂತ್ರಾಲಯಗಳು ದಿನನಿತ್ಯದ ಸೂಚನೆಗಳನ್ನು ಎಲ್ಲರ ಮೊಬೈಲ್ ಗೆ ಕಳಿಸುತ್ತಿದ್ದು, ಎಲ್ಲರೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತಿದೆ.

ಮೂಲ ಸೌಕರ್ಯಗಳು, ವಿದ್ಯುತ್, ನೀರು, ಅನ್ನಹಾರ,ತರಕಾರಿ, ದವಸ ಧಾನ್ಯ ಹಾಗೂ ಮತ್ತಿತರ ದಿನನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳು ಲಭ್ಯವಿದೆ. ಹಾಲು-ಮೊಸರು ಎಂದಿನಂತೆ ಎಲ್ಲ ಕಡೆಯೂ ದೊರೆಯುತ್ತಿದೆ. ಇಲ್ಲಿ ಎಲ್ಲ ರೀತಿಯಲ್ಲೂ ಸುರಕ್ಷಿತವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳು ಪರಿಹಾರವಾದ ಮೇಲೆ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಲಿದೆ. ಅಲ್ಲಿಯವರೆಗೆ ಎಲ್ಲರೂ ತಾಳ್ಮೆಯಿಂದ ಇರುವಂತೆ ಸರ್ಕಾರ ಸೂಚಿಸಿದೆ.

ಯಾವುದೇ ರೀತಿಯಲ್ಲಿ ಅನವಶ್ಯಕವಾಗಿ ಹೊರಗಡೆ ತಿರುಗಾಡುವುದು, ಕಟ್ಟಡಗಳ ಹತ್ತಿರದಲ್ಲಿ ಕ್ಷಿಪಣಿಗಳ ತುಣುಕುಗಳು ಬಿದ್ದಿರುವುದರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಳುಹಿಸುವುದನ್ನು ಮಾಡದಂತೆ ಸೂಚಿಸಲಾಗಿದೆ. ಈ ರೀತಿ ಮಾಡಿದರೆ ಸೂಕ್ತ ಕ್ರಮವನ್ನು ಜರಗಿಸಲಾಗುವುದು ಎಂದು ಮಂತ್ರಾಲಯಗಳು ಸೂಚಿಸಿವೆ.

ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಡ್ರೋನ್‌ ದಾಳಿ; ದುಬೈ, ಕತಾರ್‌ನಲ್ಲಿಯೂ ಭಾರೀ ಸ್ಫೋಟ

ಆರೋಗ್ಯದ ಕಾರಣ ಅಥವಾ ಇನ್ನಿತರ ವಿಶೇಷ ಕಾರಣಾಂತರಗಳಿಂದ ತವರಿಗೆ ತೆರಳಲು ಇಚ್ಚಿಸುವವರು ಭಾರತೀಯ ದೂತವಾಸದ ಪ್ರತಿನಿಧಿಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಇಂತಹವರಿಗೆ ಸೌದಿ ಅರೇಬಿಯಾದ ರಿಯಾದ್ ಅಥವ ಜೆಡ್ಡಾ ನಗರಗಳಿಗೆ ನೆಲಮಾರ್ಗದಲ್ಲಿ ಕಳುಹಿಸಿ ಅಲ್ಲಿಂದ ವಾಯುಮಾರ್ಗದಲ್ಲಿ ಭಾರತಕ್ಕೆ ಹಿಂದಿರುಗಲು ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದು ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author