ಢಾಕಾ: ಗಲಭೆ ಪೀಡಿತ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ದಿನೇ ದಿನೆ ಬಿಗಡಾಯಿಸುತ್ತಿದೆ. ಹಿಂದೂ ದೇಗುಲ, ಮನೆಗಳನ್ನು ಪುಡಿಗಟ್ಟಿ ಅಟ್ಟಹಾಸ ಮೆರೆಯುತ್ತಿರುವ ಕಿಡಿಗೇಡಿಗಳು ಇದೀಗ ನೊಬೆಲ್ ಪುರಸ್ಕೃತ, ವಿಶ್ವಕವಿ, ಚಿಂತಕ ರವೀಂದ್ರನಾಥ ಟ್ಯಾಗೋರ್ ಅವರ ನಿವಾಸವನ್ನು ಧ್ವಂಸಗೊಳಿಸಿದ್ದಾರೆ(Rabindranath Tagore). ರವೀಂದ್ರನಾಥ ಟ್ಯಾಗೋರ್ ಅವರ ನಿವಾಸ ಕುರ್ಚೇರಿಬಾರಿ (ಸದ್ಯ ಮ್ಯೂಸಿಯಂ ಆಗಿದೆ) ಮೇಲೆ ಪುಂಡರು ದಾಳಿ ನಡೆಸಿ, ಅದನ್ನು ಹಾನಿ ಮಾಡಿದ್ದಾರೆ. ಇನ್ನು ಈ ಘಟನೆಗೆ ಭಾರತದಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ. ಇಂತಹ ವಿಧ್ವಂಸಕ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಾಂಗ್ಲಾದೇಶ ಹಂಗಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಏನಿದು ಘಟನೆ?
ಸದ್ಯ ವಸ್ತು ಸಂಗ್ರಹಾಲಯವಾಗಿರುವ ಟ್ಯಾಗೋರ್ ನಿವಾಸ ಕುರ್ಚೇರಿಬಾರಿಯಲ್ಲಿ ಪ್ರವಾಸಿಗ ಮತ್ತು ಸಿಬ್ಬಂದಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿದೆ. ಈ ಜಗಳ ತಾರಕಕ್ಕೇರಿ ಸಾರ್ವಜನಿಕ ನಡುವೆ ದೊಡ್ಡ ಗಲಾಟೆಯೇ ಉಂಟಾಗಿದೆ. ಉದ್ರಿಕ್ತ ಗುಂಪು ಮ್ಯೂಸಿಯಂ ಮೇಲೆ ದಾಳಿ ನಡೆಸಿ, ಹಾನಿ ಮಾಡಿದ್ದಾರೆ.
ಭಾರತದ ವಿದೇಶಾಂಗ ಇಲಾಖೆ ಮತ್ತು ಜನಪ್ರತಿನಿಧಿಗಳು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಮಾತನಾಡಿ, ಈ ಘಟನೆ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ದ್ವೇಷದ ಸಂಕೇತವಾಗಿದೆ. ಟ್ಯಾಗೋರ್ ಅವರ ತತ್ವ, ಅವರ ಸಾಹಿತ್ಯ ಮತ್ತು ಶಾಂತಿಯ ಸಂದೇಶಗಳಿಗೆ ಮಸಿ ಬಳಿಯಲು ಕಿಡಿಗೇಡಿಗಳು ಈ ಷಡ್ಯಂತ್ರ ನಡೆಸಿದ್ದಾರೆ ಎಂದಿದ್ದಾರೆ.
ಸದ್ಯ ಬಾಂಗ್ಲಾದೇಶ ಸರ್ಕಾರ ತಾತ್ಕಾಲಿಕವಾಗಿ ಮ್ಯೂಸಿಯಂ ಮುಚ್ಚಿದ್ದು, ಪುರಾತತ್ವ ಇಲಾಖೆಯಿಂದ ಮೂರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿ ಐದು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ. ಆದರೆ ದಾಳಿ ಬಗ್ಗೆ ಸರ್ಕಾರ ಯಾವುದೇ ತಕ್ಷಣದ ಅಧಿಕೃತ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಸುದ್ದಿಯನ್ನೂ ಓದಿ: Sheikh Hasina: ಬಾಂಗ್ಲಾದೇಶದಿಂದ ಶೇಖ್ ಹಸೀನಾ ಪಲಾಯನ ಮಾಡಿದ್ದು ಹೇಗೆ? ಬಯಲಾಯ್ತು ನಿಜಾಂಶ
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಯ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇದು ಹಿಂದೂ ಬಂಗಾಳಿಗಳ ಸಂಸ್ಕೃತಿಯ ಮೇಲೆ ನಡೆಯುತ್ತಿರುವ ದಾಳಿ ಎಂದಿದ್ದಾರೆ. ಇನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಈ ವಿಷಯವನ್ನು ಬಾಂಗ್ಲಾ ಸರ್ಕಾರದ ಮುಂದೆ ಗಂಭೀರವಾಗಿ ಪ್ರಸ್ತಾಪಿಸುವಂತೆ ಕೋರಿದ್ದಾರೆ.
ಟ್ಯಾಗೋರ್ ಅವರ ಮನೆ, 1840ರಲ್ಲಿ ಅವರ ತಾತ ದ್ವಾರಕಾನಾಥ ಟ್ಯಾಗೋರ್ ಅವರು ಖರೀದಿಸಿದ್ದು, ಈಗ ಸಂರಕ್ಷಿತ ಪುರಾತತ್ವ ಸ್ಥಳವಾಗಿದೆ. ಇದನ್ನು ರವೀಂದ್ರ ಸ್ಮಾರಕ ಮ್ಯೂಸಿಯಂ ಎಂದು ಕರೆಯಲಾಗುತ್ತದೆ. ಇಡೀ ಮನೆ ಒಂದು ವಿಶಿಷ್ಟ ಇಂಡೋ-ಯುರೋಪಿಯನ್ ಶೈಲಿಯಲ್ಲಿ ನಿರ್ಮಾಣವಾಗಿದ್ದು, ನದಿಯ ಎದುರಿನಲ್ಲಿ ವಿಶಾಲ ಹಸಿರು ತೋಟದ ನಡುವೆ ಇದೆ. ಈ ಸ್ಥಳದಲ್ಲಿ ಪ್ರತಿವರ್ಷ ರವೀಂದ್ರ ಉತ್ಸವ ನಡೆಯುತ್ತಿತ್ತು ಎನ್ನಲಾಗಿದೆ