ನವದೆಹಲಿ, ಜೂ. 17: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಯ ಮನವಿ ಮೇರೆಗೆ ಕೇಂದ್ರ ಟೆಲಿಗ್ರಾಮ್ ಆ್ಯಪ್ ತಾತ್ಕಾಲಿಕವಾಗಿ ನಿಷೇಧಿಸಿದೆ. ಮೆಟಾ ಭಾಗಶಃ ಪಾಲನ್ನು ಹೊಂದಿರುವ ರಿಲಯನ್ಸ್ (Reliance) ಗ್ರೂಪ್ ಭಾರತದಲ್ಲಿ ಟೆಲಿಗ್ರಾಂ ಅಪ್ಲಿಕೇಶನ್ ಮೇಲೆ ನಿಷೇಧ ಹೇರಲು ತನ್ನ ಪ್ರತಿಸ್ಪರ್ಧಿ ವಾಟ್ಸ್‌ಆ್ಯಪ್ ಜತೆಗೆ ಲಾಬಿ ಮಾಡಿರಬಹುದು ಎಂದು ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್ (CEO Pavel Durov) ಆರೋಪಿಸಿದ್ದಾರೆ. ಭಾರತದ ಹೊರಗಿನ (ಯುಎಇ ಸೇರಿದಂತೆ) ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಂ ಸೇವೆ ಲಭ್ಯವಾಗದಂತೆ ಮಾಡಲು ರಿಲಯನ್ಸ್ ಸಂಚು ರೂಪಿಸಿದೆ ಎಂದು ಕೂಡ ಅವರು ಆರೋಪಿಸಿದರು.
ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಡುವೆ ಡುರೊವ್ ಗೊಂದಲ ಮೂಡಿಸಿರುವುದರಿಂದ, ಹೆಸರು ಬಹಿರಂಗಪಡಿಸಲು ಇಚ್ಛಿಸದ ಟೆಲಿಕಾಂ ಉದ್ಯಮದ ಮೂಲಗಳು ಈ ಆರೋಪಗಳನ್ನು ನಕಲಿ ಸುದ್ದಿ ಎಂದು ಕರೆದಿವೆ.
ಪಾವೆಲ್ ಡುರೊವ್ ಎಕ್ಸ್ ಪೋಸ್ಟ್:
ಪಾವೆಲ್ ಡುರೊವ್ ಹೇಳಿದ್ದೇನು?
ʼʼಭಾರತೀಯ ಟೆಲಿಕಾಂ ಸಂಸ್ಥೆ ರಿಲಯನ್ಸ್ ಬಿಜಿಪಿ ಹೈಜಾಕಿಂಗ್ ಎಂಬ ಅಕ್ರಮ ವಿಧಾನವನ್ನು ಬಳಸಿಕೊಂಡು ಭಾರತ ಹೊರಗಿನ (ಯುಎಇ ಸೇರಿದಂತೆ) ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಂ ಪ್ರವೇಶವನ್ನು ಅಡ್ಡಿಪಡಿಸುತ್ತಿದೆ. ಈ ಕೃತ್ಯ ಉದ್ದೇಶಪೂರ್ವಕವಾಗಿಯೇ ನಡೆಯುತ್ತಿರುವಂತೆ ತೋರುತ್ತಿದೆ. ಏಕೆಂದರೆ ಈ ಕುರಿತು ಹಲವು ವರದಿಗಳು ಬಂದಿದ್ದರೂ ರಿಲಯನ್ಸ್ ಅವನ್ನು ನಿರ್ಲಕ್ಷಿಸಿದೆ. ವಾಟ್ಸ್ಆ್ಯಪ್‌ನ ಮಾತೃಸಂಸ್ಥೆಯಾಗಿರುವ ಮೆಟಾ, ರಿಲಯನ್ಸ್‌ನಲ್ಲಿ ಭಾಗಶಃ ಹೂಡಿಕೆ ಹೊಂದಿರುವುದರಿಂದ, ಇದು ಸ್ಪರ್ಧೆಯ ಭಾಗವಾಗಿರಬಹುದುʼʼ ಎಂದು ಪಾವೆಲ್ ಡುರೊವ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಪರೀಕ್ಷಾ ಅಕ್ರಮ ತಡೆಗೆ ಕೇಂದ್ರದ ಬಿಗಿ ಕ್ರಮ: ದೇಶಾದ್ಯಂತ ಟೆಲಿಗ್ರಾಮ್ ಆ್ಯಪ್‌ಗೆ ತಾತ್ಕಾಲಿಕ ನಿಷೇಧ
ಮೆಟಾ ಸಂಸ್ಥೆಯು ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಸಣ್ಣ ಪ್ರಮಾಣದ ಹೂಡಿಕೆಯನ್ನು ಹೊಂದಿದೆ. ಜಿಯೋ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಡಿಜಿಟಲ್ ವಿಭಾಗವಾಗಿದೆ. ಆದರೆ ಸಮುದ್ರದಡಿಯ ಕೇಬಲ್‌ಗಳ ನಿರ್ವಹಣೆಯನ್ನು ಮತ್ತೊಂದು ಸಂಸ್ಥೆಯಾದ ರಿಲಯನ್ಸ್ ಕಮ್ಯುನಿಕೇಷನ್ಸ್ ನಿರ್ವಹಿಸುತ್ತಿದೆ.
“ಜಾಗತಿಕ ಇಂಟರ್‌ನೆಟ್ ರೂಟಿಂಗ್ ವ್ಯವಸ್ಥೆಯ ಇಂತಹ ದುರುಪಯೋಗವು ಆತಂಕದ ಸಂಗತಿ. ಭಾರತದಲ್ಲಿ ಟೆಲಿಗ್ರಾಂಗೆ ನಿಷೇಧ ಹೇರಿಸುವ ಉದ್ದೇಶದಿಂದ ಇತ್ತೀಚೆಗೆ ನಡೆದ ಲಾಬಿಯಿಂಗ್ ಪ್ರಯತ್ನಗಳ ಹಿಂದೆಯೂ ರಿಲಯನ್ಸ್ ಅಥವಾ ವಾಟ್ಸ್ಆ್ಯಪ್ ಇರಬಹುದು ಎಂದು ತಿಳಿದರೆ ನನಗೆ ಅಚ್ಚರಿಯಾಗುವುದಿಲ್ಲ” ಎಂದು ಪಾವೆಲ್ ಡುರೋವ್ ಹೇಳಿದ್ದಾರೆ.
ಜೂನ್ 21ರಂದು ನಡೆಯಲಿರುವ ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆಯ (NEET-UG) ಮರು ಪರೀಕ್ಷೆಯ ಸಮಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದನ್ನು ತಡೆಯಲು ಭಾರತ ಸರ್ಕಾರ ಜೂನ್ 22ರವರೆಗೆ ಟೆಲಿಗ್ರಾಮ್ ಅಪ್ಲಿಕೇಶನ್ ಅನ್ನು ತಮ್ಮ ಆ್ಯಪ್ ಸ್ಟೋರ್‌ಗಳಿಂದ ತೆಗೆದುಹಾಕುವಂತೆ ಗೂಗಲ್ ಮತ್ತು ಆ್ಯಪಲ್‌ಗೆ ಆದೇಶಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಮೇ 3ರಂದು ನಡೆದ ಹಿಂದಿನ ಪರೀಕ್ಷೆಯನ್ನು ಎನ್‌ಟಿಎ ರದ್ದುಗೊಳಿಸಿತು. ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದನ್ನು ಸುಳ್ಳು ಸಾಕ್ಷ್ಯಗಳ ಮೂಲಕ ತೋರಿಸಲು ಈ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.