ಭಾರತದ ಚುನಾವಣೆ ವ್ಯವಸ್ಥೆ, ಚಿತ್ರಸಹಿತ ಗುರುತಿನ ಚೀಟಿ, ಪರಿಷ್ಕರಣೆಗೆ ಟ್ರಂಪ್ ಮೆಚ್ಚುಗೆ ಅಮೆರಿಕದಲ್ಲಿನ್ನೂ ಇಲ್ಲ ಚಿತ್ರಸಹಿತ ಗುರುತಿನ ಚೀಟಿ, ಮತದಾರರ ಬಿಗು ಪರಿಷ್ಕರಣೆ ವ್ಯವಸ್ಥೆ
ವಾಷಿಂಗ್ಟನ್: ಭಾರತ ಮತ್ತು ಅಮೆರಿಕದ ಚುನಾವಣಾ ವ್ಯವಸ್ಥೆಗಳ ನಡುವಿನ ವ್ಯತ್ಯಾಸಗಳು, ಮತದಾರರ ಗುರುತಿನ ದೃಢೀಕರಣ ಹಾಗೂ ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಕುರಿತ ಚರ್ಚೆ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಗುರುತಿನ ದೃಢೀಕರಣ ಹೇಗೆ ನಡೆಯುತ್ತದೆ, ಮಾನ್ಯವಾದ ಫೋಟೋ ಗುರುತಿನ ಚೀಟಿ ಕಡ್ಡಾಯವೇ ಹಾಗೂ ಚುನಾವಣೆ ಯಲ್ಲಿ ಮತದಾರರ ಅರ್ಹತೆಯನ್ನು ಹೇಗೆ ಪರಿಶೀಲಿಸಲಾಗುತ್ತದೆ ಎಂಬ ಕುರಿತು ಪ್ರಶ್ನೆಗಳನ್ನು ಕೇಳಿರುವುದನ್ನು ಉಲ್ಲೇಖಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್ ಸೋಶಿಯಲ್’ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಗುರುತು ಮತ್ತು ಪೌರತ್ವವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪರಿಶೀಲಿಸುವ ಅಗತ್ಯವಿದೆ ಎಂಬ ತಮ್ಮ ನಿಲುವನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.
ಅಮೆರಿಕದಲ್ಲಿ ಮತದಾರರ ನೋಂದಣಿ ಪ್ರಕ್ರಿಯೆಯ ಪೌರತ್ವದ ದಾಖಲೆಗಳನ್ನು ಕಡ್ಡಾಯ ಗೊಳಿಸುವ ಹಾಗೂ ಮತದಾ ನದ ವೇಳೆ ಗುರುತಿನ ಚೀಟಿ ಕಡ್ಡಾಯಗೊಳಿಸುವ ಕ್ರಮಕ್ಕೆ ಟ್ರಂಪ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗೆ ಹಿನ್ನೆಲೆಯಾಗಿ ಭಾರತದ ಚುನಾವಣಾ ವ್ಯವಸ್ಥೆ ಯನ್ನೂ ಟ್ರಂಪ್ ಉಲ್ಲೇಖಿಸಿದ್ದು ಇಲ್ಲಿ ಗಮನಾರ್ಹವಾಗಿದೆ.
ಭಾರತದಲ್ಲಿ 64.6 ಕೋಟಿ ಮತದಾರರಿದ್ದು, ಅವರಲ್ಲಿ ಶೇ.100ರಷ್ಟು ಜನರು ಫೋಟೋ ಐಡಿ ಬಳಸಿದ್ದಾರೆ ಮತ್ತು ಶೇ.1ಕ್ಕಿಂತ ಕಡಿಮೆ ಜನರು ಮಾತ್ರ ಅಂಚೆ ಮೂಲಕ ಮತ ಚಲಾಯಿಸಿದ್ದಾರೆ ಎಂದು ಟ್ರಂಪ್ ಅವರು ಭಾರತದ ಚುನಾವಣಾ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Lokesh Kayarga Column: ಇನ್ನಷ್ಟು ವೀರಪ್ಪನ್ ಹುಟ್ಟಿಕೊಳ್ಳದಿರಲಿ
ಪ್ರಮುಖ ವ್ಯತ್ಯಾಸವೇನು?: ಭಾರತದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು, ಮತದಾರರನ್ನು ನೋಂದಾಯಿಸುವುದು, ಅವರ ಅರ್ಹತೆಯನ್ನು ಪರಿಶೀಲಿಸು ವುದು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ. ಇದಕ್ಕೆ ಭಿನ್ನವಾಗಿ ಅಮೆರಿಕದಲ್ಲಿ ಚುನಾವಣೆಗಳ ನಿರ್ವಹಣೆ ರಾಜ್ಯಗಳು, ಕೌಂಟಿಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ನಡೆಯುತ್ತದೆ.
ಅಮೆರಿಕದಲ್ಲಿ ಮತದಾರರ ನೋಂದಣಿ ಹೇಗೆ?: ಅಮೆರಿಕದಲ್ಲಿ ಮತದಾರರ ಅರ್ಹತೆ ಮತ್ತು ನೋಂದಣಿ ಬಹುತೇಕ ರಾಜ್ಯಗಳ ಜವಾಬ್ದಾರಿಯಾಗಿದೆ. ಮತದಾರರ ನೋಂದಣಿ ಸಾಮಾನ್ಯವಾಗಿ ವ್ಯಕ್ತಿಯೇ ಮಾಡಿಕೊಳ್ಳಬೇಕಾಗುತ್ತದೆ. ಮತದಾರರು ತಾವು ಅಮೆರಿಕದ ಪ್ರಜೆ ಎಂಬುದನ್ನು ಘೋಷಿಸಬೇಕು. ಆದರೆ ಮತದಾರರ ನೋಂದಣಿಯ ಸಂದರ್ಭದಲ್ಲಿ ಪೌರತ್ವದ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂಬ ನಿಯಮ ಎಲ್ಲ ರಾಜ್ಯಗಳಲ್ಲೂ ಇಲ್ಲ.
ಅಮೆರಿಕದ National Voter Registration Act, 1993 (ರಾಷ್ಟ್ರೀಯ ಮತದಾರರ ನೋಂದಣಿ) ಮೂಲಕ ಮೋಟಾರು ವಾಹನ ಕಚೇರಿಗಳು ಮತ್ತು ಕೆಲವು ಸಾರ್ವಜನಿಕ ಸೇವಾ ಕಚೇರಿಗಳಲ್ಲಿ ಮತದಾರರ ನೋಂದಣಿಗೆ ಅವಕಾಶ ಕಲ್ಪಿಸಲಾಯಿತು. ಭಾರತದಲ್ಲಿ ಚುನಾವಣಾ ಆಯೋಗವು ಪ್ರತಿ ರಾಜ್ಯದಲ್ಲೂ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ ಹಾಗೂ ನೋಂದಣಿ ಪ್ರಕ್ರಿಯೆ ನಡೆಸುತ್ತದೆ. ಅರ್ಹ ಮತದಾರರನ್ನು ಗುರುತಿಸಿ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸ ಲಾಗುತ್ತದೆ. ಅರ್ಹ ಮತದಾರರಿಗೆ Electoral Photo Identity Card (EPIC) ನೀಡಲಾಗುತ್ತದೆ.
ಮತಗಟ್ಟೆಯಲ್ಲಿ ಗುರುತಿನ ದೃಢೀಕರಣಕ್ಕಾಗಿ ಆಧಾರ್ ಸೇರಿದಂತೆ ಇತರ ಮಾನ್ಯ ದಾಖಲೆಗಳನ್ನೂ ಬಳಸಬಹುದಾಗಿದೆ. ಈ ಕಾರಣದಿಂದಾಗಿ ಭಾರತದಲ್ಲಿ ಮತದಾರರ ಪಟ್ಟಿಯ ಸಿದ್ಧತೆ ಮತ್ತು ಪರಿಶೀಲನೆಯ ಜವಾಬ್ದಾರಿ ಕೇಂದ್ರೀಕೃತವಾಗಿ ಚುನಾವಣಾ ಆಯೋಗದ ಮೇಲಿರುತ್ತದೆ. ಅಮೆರಿಕ ದಲ್ಲಿ ಇದೇ ಪ್ರಕ್ರಿಯೆ ರಾಜ್ಯ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ನಡೆಯುತ್ತದೆ.
ಸೇವ್ ಅಮೆರಿಕ ಕಾಯಿದೆ ಚರ್ಚೆ: ಟ್ರಂಪ್ ಹೇಳಿಕೆ ನಡುವೆ ಅಮೆರಿಕದ ಸೇವ್ ಅಮೆರಿಕ ಕಾಯ್ದೆ ಕೂಡ ಪ್ರಮುಖ ಚರ್ಚೆಯ ವಿಷಯವಾಗಿದೆ. ಇದು ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಅರ್ಹತೆ ಮತ್ತು ಪೌರತ್ವ ಪರಿಶೀಲನೆಯನ್ನು ಕಟ್ಟುನಿಟ್ಟಾಗಿಸಲು ಪ್ರಸ್ತಾಪಿಸಲಾಗಿರುವ ಒಂದು ಮಹತ್ವದ ಮತ್ತು ವಿವಾದಾತ್ಮಕ ಫೆಡರಲ್ (ರಾಷ್ಟ್ರೀಯ) ಮಸೂದೆಯಾಗಿದೆ. ಮತದಾರ ರಾಗಿ ನೋಂದಾಯಿಸಿಕೊಳ್ಳುವ ಸಂದರ್ಭದಲ್ಲಿ ಅಮೆರಿಕದ ಪೌರತ್ವವನ್ನು ದಾಖಲೆಗಳ ಮೂಲಕ ದೃಢಪಡಿಸುವಂತೆ ಮಾಡುವ ಉದ್ದೇಶ ಹೊಂದಿರುವ ಈ ಮಸೂದೆಗೆ ಟ್ರಂಪ್ ಆಡಳಿತ ಬೆಂಬಲ ನೀಡಿದೆ.
ಹೊಸ ಮತದಾರರು ಪಾಸ್ ಪೋರ್ಟ್, ಜನನ ಪ್ರಮಾಣಪತ್ರ ಅಥವಾ ನೈಸರ್ಗಿಕೀಕರಣದ ದಾಖಲೆ ಗಳಂತಹ ಪೌರತ್ವದ ಪುರಾವೆಗಳನ್ನು ಸಲ್ಲಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂಬುದು ಮಸೂದೆ ಯ ಪ್ರಮುಖ ಅಂಶವಾಗಿದೆ. ಆದರೆ ಈ ಕಾಯ್ದೆ ಜಾರಿ ಕುರಿತು ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು, ಅಮೆರಿಕದ ಲಕ್ಷಾಂತರ ಬಡವರು, ಗ್ರಾಮೀಣ ಭಾಗದ ಜನ ಮತ್ತು ವಿದ್ಯಾರ್ಥಿಗಳ ಬಳಿ ತಕ್ಷಣಕ್ಕೆ ಪಾಸ್‌ಪೋರ್ಟ್ ಅಥವಾ ಜನನ ಪ್ರಮಾಣಪತ್ರಗಳು ಲಭ್ಯವಿರುವುದಿಲ್ಲ. ಈ ನಿಯಮ ದಿಂದಾಗಿ ಅರ್ಹ ನಾಗರಿಕರೇ ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ವಾದಿಸಿದ್ದಾರೆ.
ಸದ್ಯ ಈ ಮಸೂದೆಯು ರಿಪಬ್ಲಿಕನ್ ಪಕ್ಷದ ಪ್ರಾಬಲ್ಯವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ (ಕೆಳಮನೆ) ಅಂಗೀಕಾರಗೊಂಡಿದೆ. ಆದರೆ, ಡೆಮಾಕ್ರಟಿಕ್ ಪಕ್ಷದ ತೀವ್ರ ವಿರೋಧದಿಂದಾಗಿ ಸೆನೆಟ್ ನಲ್ಲಿ (ಮೇಲ್ಮನೆ) ಇದು ಇನ್ನೂ ಬಾಕಿಯ ಉಳಿದಿದೆ. ಸೇವ್ ಅಮೆರಿಕ ಕಾಯ್ದೆ ಅಮೆರಿಕದ ಚುನಾವಣೆಯಲ್ಲಿ ಮತದಾರರ ಪೌರತ್ವದ ದಾಖಲೆ ಮತ್ತು ಗುರುತಿನ ಪರಿಶೀಲನೆಗೆ ಕಾನೂನುಬದ್ಧ ವಾಗಿ ಹೆಚ್ಚಿನ ಒತ್ತು ನೀಡುವ ಪ್ರಸ್ತಾವವಾಗಿದ್ದರೆ, ಭಾರತದ ಎಸ್‌ಐಆರ್ ಎನ್ನುವುದು ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಪರಿಶೀಲನಾ ಪ್ರಕ್ರಿಯೆ. ಅಂದರೆ, ಒಂದು ಕಡೆ ಅಮೆರಿಕದಲ್ಲಿ ಮತದಾರರ ನೋಂದಣಿ ವೇಳೆ ಪೌರತ್ವದ ದೃಢೀಕರಣವನ್ನು ಬಲಪಡಿಸುವುದು ಪ್ರಮುಖ ವಿಷಯ ವಾಗಿದ್ದರೆ, ಭಾರತದಲ್ಲಿ ಈಗಾಗಲೇ ಇರುವ ಮತದಾರರ ಪಟ್ಟಿಯನ್ನು ಪರಿಶೀಲಿಸಿ ನವೀಕರಿಸುವು ದಕ್ಕೆ ಎಸ್‌ಐಆರ್ ಒತ್ತು ನೀಡುತ್ತದೆ.
ಅಮೆರಿಕದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಸೇವ್ ಅಮೆರಿಕ ಕಾಯ್ದೆ, ಅಲ್ಲಿನ ವ್ಯವಸ್ಥೆಯಲ್ಲಿರುವ ಭದ್ರತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಅಂಚೆ ಮತದಾನದಲ್ಲಿ ಕಟ್ಟುನಿಟ್ಟಾದ ಐಡಿ ಪರಿಶೀಲನೆ ಇಲ್ಲದಿರು ವುದು ಮತ್ತು ಮತದಾರರ ಪಟ್ಟಿಯನ್ನು ನಿಯಮಿತವಾಗಿ ಪರಿಷ್ಕರಿಸದಿರು ವುದು ವ್ಯವಸ್ಥೆಯ ಮೇಲಿನ ನಂಬಿಕೆ ಯನ್ನು ಕಡಿಮೆ ಮಾಡಿದೆ ಎಂದು ರಿಪಬ್ಲಿಕನ್ನರು ವಾದಿಸು ತ್ತಾರೆ. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರು ಭಾರತದ ವ್ಯವಸ್ಥೆಯನ್ನು ಶ್ಲಾಘಿಸಿ, ಅಮೆರಿಕ ದಲ್ಲೂ ಕಠಿಣ ನಿಯಮ ತರಲು ಬಯಸುತ್ತಿದ್ದಾರೆ.
ಅನಿವಾಸಿ ಭಾರತೀಯರ ಮೇಲೆ ಪರಿಣಾಮವೇನು? ಅಮೆರಿಕದ ಪೌರತ್ವ ಪಡೆದು, ಅಲ್ಲಿನ ಮಾನ್ಯ ಪಾಸ್ ಪೋರ್ಟ್ ಹಾಗೂ ಪ್ರಮಾಣಪತ್ರ ಹೊಂದಿರುವ ಭಾರತೀಯರಿಗೆ ಈ ಕಾಯ್ದೆಯಿಂದ ಯಾವುದೇ ಕಾನೂನಾತ್ಮಕ ತೊಂದರೆಯಾಗುವುದಿಲ್ಲ. ಅವರು ಮತದಾನ ಮಾಡುವಾಗ ತಮ್ಮ ಪೌರತ್ವದ ದಾಖಲೆಯನ್ನು ಸುಲಭವಾಗಿ ಒದಗಿಸಬಹುದು. ಆದರೆ ಈ ಕಾಯ್ದೆ ಜಾರಿಯಾದರೆ, ಹೊಸದಾಗಿ ಪೌರತ್ವ ಪಡೆದ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕಟ್ಟುನಿಟ್ಟಾದ ಮತ್ತು ದೀರ್ಘಾವಧಿಯ ದಾಖಲೆ ಪರಿಶೀಲನಾ ಪ್ರಕ್ರಿಯೆಯನ್ನು ಎದುರಿಸಬೇಕಾಗಬಹುದು. ಸರ್ಕಾರಿ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ವಿಳಂಬವಾದರೆ, ಅವರು ಮುಂಬರುವ ಚುನಾವಣೆ ಗಳಲ್ಲಿ ತಕ್ಷಣವೇ ಮತ ಚಲಾಯಿಸುವ ಅವಕಾಶವನ್ನು ಕಳೆದುಕೊಳ್ಳಬಹುದು.