ಕೀವ್, ಆ. 17: ಉಕ್ರೇನ್‌ನ ಕ್ರಿವಿ ರಿಹ್‌ನಲ್ಲಿರುವ ಭಾರತೀಯ ಉದ್ಯಮಿ ಲಕ್ಷ್ಮೀ ಮಿತ್ತಲ್ (Lakshmi Mittal) ಒಡೆತನದ ಅರ್ಸೆಲರ್‌ಮಿತ್ತಲ್ ಉಕ್ಕಿನ ಘಟಕದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ (Ukraine- Russian Strike). ದಾಳಿಯಿಂದ ಘಟಕದ ಪ್ರಮುಖ ಇಂಧನ ಪೂರೈಕೆ ಹಾಗೂ ಬ್ಲಾಸ್ಟ್ ಫರ್ನೇಸ್ ಉತ್ಪಾದನಾ ಸೌಲಭ್ಯಗಳಿಗೆ ಹಾನಿಯಾಗಿದ್ದು, ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಭಾನುವಾರ ನಡೆದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯ ಬಳಿಕ ಘಟಕದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಕಾರ್ಯಕರ್ತರು ಹಾಗೂ ವೈದ್ಯಕೀಯ ತಂಡಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಅರ್ಸೆಲರ್‌ಮಿತ್ತಲ್ ಕ್ರಿವಿ ರಿಹ್ ಘಟಕದ ಮೇಲೆ ರಷ್ಯಾ ದಾಳಿ ನಡೆಸಿರುವುದು ಇದೇ ಮೊದಲಲ್ಲ. 2022ರಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಘಟಕದ ರೋಲಿಂಗ್ ಮಿಲ್ ಧ್ವಂಸಗೊಂಡು ಓರ್ವ ಕಾರ್ಮಿಕ ಮೃತಪಟ್ಟಿದ್ದರು.
ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ದೃಶ್ಯ:
ಉಕ್ರೇನ್‌ನ ಅತಿದೊಡ್ಡ ಉಕ್ಕು ಉತ್ಪಾದನಾ ಘಟಕವಾಗಿರುವ ಅರ್ಸೆಲರ್‌ಮಿತ್ತಲ್ ಕ್ರಿವಿ ರಿಹ್ ದೇಶದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲೊಂದಾಗಿದೆ. ಈ ಘಟಕವು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ತವರು ನಗರವಾದ ಕ್ರಿವಿ ರಿಹ್‌ನಲ್ಲಿದೆ.
ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಬದಲಾವಣೆ; ಅಮಿತ್ ಮಾಳವೀಯಗೆ ಗೇಟ್ ಪಾಸ್
ಕೀವ್‌ನ ಪುಸ್ತಕ ಮಾರುಕಟ್ಟೆಯಲ್ಲೂ ಬೆಂಕಿ
ಆಗಸ್ಟ್ 16ರಂದು ಉಕ್ರೇನ್‌ನಾದ್ಯಂತ ನಡೆದ ರಷ್ಯಾದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಸರಣಿಯ ಭಾಗವಾಗಿ ಕೀವ್‌ನಲ್ಲೂ ಭಾರೀ ಹಾನಿಯಾಗಿದೆ. ಪೊಚೈನಾ ಮೆಟ್ರೋ ನಿಲ್ದಾಣದ ಸಮೀಪದ ಐತಿಹಾಸಿಕ ಪೆಟ್ರಿವ್ಕಾ ಪುಸ್ತಕ ಮಾರುಕಟ್ಟೆಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಅಂಗಡಿ ಸಾಲುಗಳು ಮತ್ತು ಪುಸ್ತಕಗಳ ದಾಸ್ತಾನು ಸಂಪೂರ್ಣವಾಗಿ ನಾಶವಾಗಿದೆ.
1990ರ ದಶಕದಿಂದ ಕಾರ್ಯನಿರ್ವಹಿಸುತ್ತಿರುವ ಈ ಮಾರುಕಟ್ಟೆ ಕೀವ್‌ನ ಅತ್ಯಂತ ಹಳೆಯ ಹಾಗೂ ದೊಡ್ಡ ಪುಸ್ತಕ ಮಾರುಕಟ್ಟೆಗಳಲ್ಲೊಂದಾಗಿದೆ. ನಗರದ ಹೋಲೋಸಿವ್ಸ್ಕಿ ಜಿಲ್ಲೆ ಸೇರಿ ಹಲವು ಪ್ರದೇಶಗಳಲ್ಲೂ ಬೆಂಕಿ ಮತ್ತು ಕಟ್ಟಡಗಳಿಗೆ ಹಾನಿಯಾಗಿರುವುದಾಗಿ ವರದಿಯಾಗಿದೆ.