ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾಹಿತ್ಯೋತ್ಸವ– 2026: ವಿದ್ಯಾರಣ್ಯ ಕನ್ನಡ ಕೂಟದಿಂದ ಶಿಕಾಗೋದಲ್ಲಿ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆ ಸೊಗಡಿನ ಅನಾವರಣ

ವಿದ್ಯಾರಣ್ಯ ಕನ್ನಡ ಕೂಟದ ವತಿಯಿಂದ ಶಿಕಾಗೋದಲ್ಲಿ “ಸಾಹಿತ್ಯೋತ್ಸವ – 2026” ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಇಂಡಿಯಾ ಹಬ್‌ನಲ್ಲಿ ಇತ್ತೀಚೆಗೆ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯ ಸೊಗಡನ್ನು ಅನಾವರಣಗೊಳಿಸಲಾಗಿದ್ದು, ಅಪಾರ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಯಿತು.

ಸಂಗ್ರಹ ಚಿತ್ರ

ವರದಿ: ಭವ್ಯಶ್ರೀ ಪೃಥ್ವಿರಾಜ್, ಶಿಕಾಗೊ

ಶಿಕಾಗೋ: ವಿದ್ಯಾರಣ್ಯ ಕನ್ನಡ ಕೂಟದ (Vidyaranya Kannada Koota) ವತಿಯಿಂದ 2026ರ ಜೂನ್ 6ರಂದು ಶಿಕಾಗೋದ (Shikago) ಇಂಡಿಯಾ ಹಬ್‌ನಲ್ಲಿ “ಸಾಹಿತ್ಯೋತ್ಸವ – 2026” (Sahityotsava- 2026) ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ನಡೆಸಲಾಯಿತು. ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯ ಸೊಗಡನ್ನು ಅನಾವರಣಗೊಳಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮವು ಶಿಕಾಗೋದ ಕನ್ನಡಿಗರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರದಲ್ಲಿ ಗಣ್ಯರಾದ ಪ್ರಕಾಶ್ ಹೇಮಾವತಿ, ಅರುಣ್ ಮೂರ್ತಿ, ಅಣ್ಣಾಪುರ ಶಿವಕುಮಾರ್, ಶಾರದಾ ಚೈತ್ರ ಹಾಗೂ ವಿದ್ಯಾರಣ್ಯ ಕನ್ನಡ ಕೂಟದ ಅಧ್ಯಕ್ಷರಾದ ಗಿರೀಶ್ ರಾಮಮೂರ್ತಿಯವರ ಉಪಸ್ಥಿತಿಯಲ್ಲಿ ದೀಪ ಬೆಳಗುವುದರೊಂದಿಗೆ ಆರಂಭಿಸಲಾಯಿತು.

ಬೆಳಗ್ಗೆ 10.30ರಿಂದ ಆರಂಭಗೊಂಡ ಕಾರ್ಯಕದಲ್ಲಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಸಭಿಕರನ್ನು ಸ್ವಾಗತಿಸಿ, ಸಾಹಿತ್ಯೋತ್ಸವದ ಮಹತ್ವವನ್ನು ವಿವರಿಸಿದರು. ಸಂಜೆ 4.30ರವರೆಗೆ ನಡೆದ ಕಾರ್ಯಕ್ರಮಗಳಲ್ಲಿ ಕಾವ್ಯವಾಚನ, “ಒಂದು ನಿಮಿಷ ಕನ್ನಡ ಮಾತಾಡಿ”, ಮಕ್ಕಳ ಮಾತುಕತೆ, ಪುಸ್ತಕ ಲೋಕಾರ್ಪಣೆ, “ನನ್ನ ಜೀವನದಲ್ಲಿ ಪ್ರೇರಣೆ ನೀಡಿದ ಸಾಲುಗಳು” ಮಂಕುತಿಮ್ಮನ ಕಗ್ಗದ ಪ್ರೇರಣಾದಾಯಕ ಸಾಲುಗಳು, ಭಾವಗೀತೆಗಳು, ಆಧುನಿಕ ಯುಗದಲ್ಲಿ ಕನ್ನಡ ಸಾಹಿತ್ಯದ ಸ್ಥಾನಮಾನ, ಸಾಮಾಜಿಕ ಜಾಲತಾಣಗಳು ಹಾಗೂ ಕನ್ನಡದ ಕುರಿತು ವಿಶೇಷ ವಿಚಾರ ಮಂಡನೆಗಳು, “ಹರಟೆ – ನಮ್ಮ ಊರಿನ ಭಾಷಾ ಸೊಗಡು” ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.

ಭಾರತಕ್ಕೆ ಮತ್ತೊಂದು ಹೊಸ ಸವಾಲು; ಜೆನೆರಿಕ್ ಔಷಧಗಳ ಮೇಲೆ ಶೇಕಡಾ 200ರಷ್ಟು ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

ಕಾರ್ಯಕ್ರಮದ ಸಮಾರೋಪವಾಗಿ ಪುಟ್ಟ ಬಾಲಕಿಯ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಗೀತೆಗೆ ನೀಡಿದ ಮನಮೋಹಕ ನೃತ್ಯ ಎಲ್ಲರ ಮನ ಗೆದ್ದಿತು. ವಿವಿಧ ವಕ್ತಾರರು ಮತ್ತು ನಿರೂಪಕರು ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಮಂಡಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಈ ಬಾರಿಯ ಸಾಹಿತ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿ ಸಾಹಿತ್ಯೋತ್ಸವ ಸಮಿತಿಯ ವತಿಯಿಂದ ಪ್ರಪ್ರಥಮ ಬಾರಿಗೆ ಮೂರು ಪುಸ್ತಕಗಳ ಲೋಕಾರ್ಪಣೆಯನ್ನು ಅತಿಥಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ಕರ್ನಾಟಕ ಹಾಗೂ ಶಿಕಾಗೋ ಮೂಲದ ಲೇಖಕರ ಕೃತಿಗಳನ್ನು ಬಿಡುಗಡೆ ಮಾಡುವ ಮೂಲಕ ನಮ್ಮ ಸಾಹಿತಿಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಒದಗಿಸಬೇಕು ಹಾಗೂ ವಿದ್ಯಾರಣ್ಯ ಕನ್ನಡ ಕೂಟ ಮನಸ್ಸು ಮಾಡಿದರೆ ತಾಯ್ನಾಡಿನ ಪ್ರತಿಭೆಗಳಿಗೂ ವಿದೇಶದಲ್ಲಿ ಅವಕಾಶ ಕಲ್ಪಿಸಬಹುದು ಎಂಬ ಸುಂದರ ಆಶಯವನ್ನು ಸಾಕಾರಗೊಳಿಸಲಾಯಿತು.

shikago2

ಸ್ಥಳೀಯ ಲೇಖಕಿ ಶಾರದಾ ಚೈತ್ರ ಅವರ ‘ನಿಗಳ’, ಕರ್ನಾಟಕದ ಲೇಖಕಿ ಟಿ. ಆರ್. ಉಷಾರಾಣಿ ಹಾಗೂ ಇತರ ಐವರು ಲೇಖಕರ ಸಹಯೋಗದಲ್ಲಿ ಪ್ರಕಟವಾದ ‘ಪಂಚವಟಿ’, ಹಾಗೂ ಲೇಖಕ ಸೀತಾರಾಮ ಜಿ. ಬೆಳೆಯೂರು ಅವರ ‘ಮಂತ್ರಮುಗ್ಧ’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಲೇಖಕರನ್ನು ಪರಿಚಯಿಸಿ, ಗೌರವಿಸಲಾಯಿತು.

“ಹರಟೆ” ಕಾರ್ಯಕ್ರಮದಲ್ಲಿ ಕನ್ನಡದ ವಿವಿಧ ಪ್ರಾದೇಶಿಕ ಭಾಷೆಗಳು, ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಹಾಸ್ಯಮಯವಾಗಿ ಪರಿಚಯಿಸಿದ ಕಾರ್ಯಕ್ರಮವು ತ್ರಿವೇಣಿ ರಾವ್ ಅವರ ನಿರೂಪಣೆಯಲ್ಲಿ ಎಲ್ಲರ ಗಮನ ಸೆಳೆಯಿತು.

ಕನ್ನಡದ ನುಡಿ, ಹಾಡು, ಹರಟೆ, ಸಾಹಿತ್ಯ ಮತ್ತು ಸಂಗೀತ... ಇವೆಲ್ಲವೂ ಒಂದೇ ವೇದಿಕೆಯಲ್ಲಿ ಅರಳಿದ ಸುಂದರ ಸಂಭ್ರಮವೇ ಈ ಸಾಹಿತ್ಯೋತ್ಸವ. ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬರಲ್ಲೂ ಕನ್ನಡದ ಮೇಲಿನ ಅಭಿಮಾನ ಮತ್ತು ಪ್ರೀತಿ ತುಂಬಿ ತುಳುಕುತ್ತಿತ್ತು. ಸಾಹಿತ್ಯ, ಸಂಗೀತ, ಪದ್ಯ, ಗದ್ಯ, ವಿಚಾರ ವಿನಿಮಯ ಹಾಗೂ ಹಾಸ್ಯ ಇವೆಲ್ಲವೂ ಎಲ್ಲರೂ ಒಂದಾಗಿ ಬೆರೆತು ಆನಂದದಲ್ಲಿ ತೇಲಾಡುವಂತೆ ಮಾಡಿತ್ತು.

ಈ ಬಾರಿಯ ಕಾರ್ಯಕ್ರಮದ ಮತ್ತೊಂದು ಅತ್ಯಂತ ವಿಶೇಷ ಕ್ಷಣವೆಂದರೆ ಮಕ್ಕಳ ಕನ್ನಡ ಪ್ರೀತಿ. ವೇದಿಕೆಯ ಮೇಲೆ ಮಕ್ಕಳು ನಿರರ್ಗಳವಾಗಿ, ಆತ್ಮವಿಶ್ವಾಸದಿಂದ ಕನ್ನಡದಲ್ಲೇ ಮಾತನಾಡಿದ ಕ್ಷಣಗಳು ಸಭಿಕರ ಮನಸ್ಸನ್ನು ಗೆದ್ದವು. ಅವರ ಚಟಪಟ ಮಾತುಗಳನ್ನು ಕೇಳಿದಾಗ ಪ್ರತಿಯೊಬ್ಬರ ಮುಖದಲ್ಲೂ ಹೆಮ್ಮೆಯ ನಗು ಮೂಡಿತು. ವಿದೇಶದ ನೆಲೆಯಲ್ಲಿಯೂ ಕನ್ನಡ ಭಾಷೆ ಮುಂದಿನ ಪೀಳಿಗೆಯ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರು ಬಿಡುತ್ತಿರುವುದು ಎಲ್ಲರಿಗೂ ಅಪಾರ ಸಂತಸವನ್ನುಂಟು ಮಾಡಿತು.

shikago3

ಶೇಖ್ ಹಸೀನಾ ಮರಳುವ ಮುನ್ಸೂಚನೆ ಬೆನ್ನಲ್ಲೇ ಬಾಂಗ್ಲಾದೇಶ ಅಧ್ಯಕ್ಷ ಶಹಾಬುದ್ದೀನ್ ರಾಜೀನಾಮೆ ಸಾಧ್ಯತೆ

ವೇದಿಕೆಯ ಅಲಂಕಾರ, ಕನ್ನಡ ಅಕ್ಷರ ತೋರಣ, ಸಾಹಿತ್ಯಮಯ ವಾತಾವರಣ, ಪುಸ್ತಕ ಪ್ರದರ್ಶನ ಹಾಗೂ ಸ್ವಯಂಸೇವಕರ ಪರಿಶ್ರಮ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣಗಳಾಗಿದ್ದವು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲಾ ಅತಿಥಿಗಳು, ಕಲಾವಿದರು, ಪ್ರಾಯೋಜಕರು ಹಾಗೂ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿ, ಎಲ್ಲರೂ ಒಟ್ಟಾಗಿ ಸ್ಮರಣಾರ್ಥ ಗುಂಪು ಛಾಯಾಚಿತ್ರ ತೆಗೆಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ವಿದ್ಯಾ ಇರ್ವತ್ತೂರು

View all posts by this author