ದುಬೈ, ಡಿ.19: ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ದೇಶಗಳಲ್ಲಿ ಸಂಘಟಿತ ಭಿಕ್ಷಾಟನೆ(Pakistani Beggars) ಮತ್ತು ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಬಿಗಿ ಕ್ರಮವನ್ನು ತೆಗೆದುಕೊಂಡಿವೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾಕ್ಕೆ ತೆರಳುವ ಪಾಕಿಸ್ತಾನಿ ಪ್ರಜೆಗಳ ಮೇಲೆ ತೀವ್ರ ನಿಗಾ ವಹಿಸುತ್ತಿವೆ. ಈ ವರ್ಷ ಭಿಕ್ಷಾಟನೆ ಮಾಡಿದ ಆರೋಪದ ಮೇಲೆ ಸೌದಿ ಅರೇಬಿಯಾ ಮಾತ್ರ 24,000 ಪಾಕಿಸ್ತಾನಿಗಳನ್ನು ಗಡಿಪಾರು ಮಾಡಿದೆ. ಯುಎಇ ಹೆಚ್ಚಿನ ಪಾಕಿಸ್ತಾನಿ ನಾಗರಿಕರ ಮೇಲೆ ವೀಸಾ ನಿರ್ಬಂಧಗಳನ್ನು ವಿಧಿಸಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನಿ ನಾಗರಿಕರು ಹೆಚ್ಚಿನ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಸೌದಿ ಅರೇಬಿಯಾ ಈ ವರ್ಷ ಭಿಕ್ಷಾಟನೆ ಆರೋಪದ ಮೇಲೆ 24,000 ಪಾಕಿಸ್ತಾನಿಗಳನ್ನು ಗಡಿಪಾರು ಮಾಡಿದರೆ, ದುಬೈ ಸುಮಾರು 6,000, ಅಜೆರ್ಬೈಜಾನ್ ಸುಮಾರು 2,500 ಪಾಕಿಸ್ತಾನಿ ಭಿಕ್ಷುಕರನ್ನು ಗಡಿಪಾರು ಮಾಡಿದೆ. ಪಾಕಿಸ್ತಾನದ ಫೆಡರಲ್ ಇನ್‌ವೆಸ್ಟಿಗೇಷನ್ ಏಜೆನ್ಸಿಯ ನೀಡಿದ ಮಾಹಿತಿಯೂ ಸಮಸ್ಯೆ ಪ್ರಮಾಣ ಎಷ್ಟು ತೀವ್ರವಾಗಿದೆ ಎಂದು ತೋರಿಸುತ್ತಿದೆ. 2025 ರಲ್ಲಿ, ಸಂಘಟಿತ ಭಿಕ್ಷಾಟನೆ ಸಿಂಡಿಕೇಟ್‌ಗಳನ್ನು ನಾಶಮಾಡಲು ಮತ್ತು ಅಕ್ರಮ ವಲಸೆಯನ್ನು ತಡೆಯುವ ಪ್ರಯತ್ನದಲ್ಲಿ ಅಧಿಕಾರಿಗಳು ವಿಮಾನ ನಿಲ್ದಾಣಗಳಲ್ಲಿ 66,154 ಪ್ರಯಾಣಿಕರನ್ನು ವಿಮಾನದಿಂದ ಇಳಿಸಿದ್ದರು.
ಎಫ್‌ಐಎ ಮಹಾನಿರ್ದೇಶಕ ರಿಫತ್ ಮುಖ್ತಾರ್, ಈ ವಿಷಯದ ಬಗ್ಗೆ ಮಾತನಾಡಿ, "ಈ ಜಾಲಗಳು ಪಾಕಿಸ್ತಾನದ ಪ್ರತಿಷ್ಠೆಗೆ ಹಾನಿ ಮಾಡುತ್ತಿವೆ. ಭಿಕ್ಷಾಟನೆ ಕೇವಲ ಕೊಲ್ಲಿಗೆ ಸೀಮಿತವಲ್ಲ. ಆಫ್ರಿಕಾ, ಯುರೋಪ್, ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನಂತಹ ದೇಶಗಳಿಗೂ ಪ್ರವಾಸಿ ವೀಸಾಗಳ ದುರುಪಯೋಗ ಮಾಡಿ ಭಿಕ್ಷಾಟನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಎಫ್‌ಐಎ ಮೂಲಕ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಿದೆ. ಆದರೆ ಈ ಜಾಲಗಳು ಇನ್ನೂ ಸಕ್ರಿಯವಾಗಿರುವುದು ಪಾಕಿಸ್ತಾನದ ಅಂತಾರಾಷ್ಟ್ರೀಯ ಪ್ರತಿಷ್ಠೆಗೆ ದೊಡ್ಡ ಹೊಡೆತ ನೀಡುತ್ತಿದೆ ಎಂದು ಪಾಕ್ ಸರ್ಕಾರಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ಸೈಬರ್ ಸೆಕ್ಯುರಿಟಿ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಕೌಶಲ್ಯ ತರಬೇತಿ ನೀಡಲು ಮುಂದಾದ IBM
2024 ರಲ್ಲಿ, ಪಶ್ಚಿಮ ಏಷ್ಯಾದ ದೇಶಗಳಲ್ಲಿ ಬಂಧಿತರಾಗಿರುವ ಭಿಕ್ಷುಕರಲ್ಲಿ ಹೆಚ್ಚಿನವರು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಈ ಅಂಕಿ ಅಂಶವು 90% ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಡಾನ್ ಪತ್ರಿಕೆಯಲ್ಲಿ ಬರೆದ ವಕೀಲೆ ರಫಿಯಾ ಜಕಾರಿಯಾ, "ಭಿಕ್ಷಾಟನೆಯನ್ನು ಪಾಕಿಸ್ತಾನದಲ್ಲಿ ಸಂಘಟಿತ ಉದ್ಯಮವೆಂದು ಬಣ್ಣಿಸಬಹುದು ಎಂದು ಉಲ್ಲೇಖಿಸಿದ್ದರು. ಈ ಹೇಳಿಕೆ ಪಾಕಿಸ್ತಾನದ ನಿರುದ್ಯೋಗ, ಬಡತನ ಹಾಗೂ ವಲಸೆ ಸಮಸ್ಯೆಗೆ ಒಂದು ಉದಾಹರಣೆಯಾಗಿದೆ.