ಇಸ್ಲಾಮಾಬಾದ್, ಅ.15: ಶಾಲೆಯೊಂದರ ಮೇಲ್ಛಾವಣಿ ಕುಸಿದು (School Roof Collapse) 21 ಮಂದಿ ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕಿ ಮೃತಪಟ್ಟಿರುವ ದಾರುಣ ಘಟನೆ ಪಾಕಿಸ್ತಾನದ (Pakistan) ವಾಯುವ್ಯ ನಗರವಾದ ಪೇಶಾವರದಲ್ಲಿ ನಡೆದಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯನ್ನು ಲೇಡಿ ರೀಡಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನೂ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ದುರ್ಘಟನೆಯಲ್ಲಿ 21 ಮಂದಿ ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕಿ ಸಾವಿಗೀಡಾಗಿದ್ದಾರೆ. ಸುಮಾರು 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಕೆಲವರ ಸ್ಥಿತಿ ಗಂಭೀರವಾಗಿದೆ. ಹಲವಾರು ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಪಾಠಗಳು ನಡೆಯುತ್ತಿರುವಾಗ ಈ ಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟ ಎಲ್ಲಾ ವಿದ್ಯಾರ್ಥಿಗಳು 13 ವರ್ಷದೊಳಗಿನವರು ಎಂಬುದು ದೃಢಪಟ್ಟಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಆದರೆ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬ ವಿವರಗಳು ಲಭ್ಯವಿಲ್ಲ. ಕುಸಿತಕ್ಕೆ ಏನು ಕಾರಣ ಎಂಬುದು ಇನ್ನೂ ತಿಳಿದುಬಂದಿಲ್ಲ.
ಪಂಜಾಬ್ನ ಅಂತಾರಾಷ್ಟ್ರೀಯ ಗಡಿಯ ಬಳಿ ಇಬ್ಬರು ಪಾಕಿಸ್ತಾನ ನುಸುಳುಕೋರರ ಗುಂಡಿಟ್ಟು ಹತ್ಯೆ
ಛಾವಣಿ ಕುಸಿತದ ಬಗ್ಗೆ ದುಃಖ ವ್ಯಕ್ತಪಡಿಸಿದ ಕೆಪಿ ರಾಜ್ಯಪಾಲರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಲಹೆಗಾರ ಸಮರ್ ಹರೂನ್ ಬಿಲೋರ್, ಗಾಯಗೊಂಡ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆ ಒದಗಿಸುವಂತೆ ಸೂಚಿಸಿದರು. ರಕ್ಷಣಾ ಅಧಿಕಾರಿಗಳ ಪ್ರಕಾರ, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದ್ದು, ತಂಡಗಳು ಅವಶೇಷಗಳಡಿಯಲ್ಲಿ ಮಕ್ಕಳು ಮತ್ತು ಶಾಲಾ ಸಿಬ್ಬಂದಿಯನ್ನು ಹುಡುಕುತ್ತಿವೆ.
ಪೇಶಾವರ ಶಾಲೆಯ ಛಾವಣಿ ಕುಸಿತದಿಂದ ಸಂಭವಿಸಿದ ಸಾವುಗಳಿಗೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ತೀವ್ರ ದುಃಖ ವ್ಯಕ್ತಪಡಿಸಿದರು. ಮಕ್ಕಳು ಸೇರಿದಂತೆ ಈ ದುರಂತ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ಪ್ರಾರ್ಥಿಸಿದರು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸಿದರು. ಅವರಿಗೆ ಸಾಧ್ಯವಿರುವ ಎಲ್ಲಾ ವೈದ್ಯಕೀಯ ಸಹಾಯವನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶಾಲೆಯ ಛಾವಣಿ ಕುಸಿದ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ಪ್ರಧಾನಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.