ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಸ್ರೇಲ್-ಅಮೆರಿಕ ಹೊರತುಪಡಿಸಿ ಬೇರೆ ದೇಶಗಳಿಗೆ ಹೊರ್ಮುಜ್‌ ಜಲಮಾರ್ಗ ಮುಕ್ತ: ಟ್ರಂಪ್ ಬೆದರಿಕೆ ಬೆನ್ನಲ್ಲೇ ಇರಾನ್ ಘೋಷಣೆ

Israel-Iran-US conflict: ಮಧ್ಯಪ್ರಾಚ್ಯ ಸಂಘರ್ಷದ ನಂತರ ಹೊರ್ಮಜ್ ಜಲಸಂಧಿ ಜಾಗತಿಕ ಬಿಕ್ಕಟ್ಟಾಗಿ ಪರಿಣಮಿಸಿದೆ. ಇದೀಗ ಇರಾನ್ ಮೃದು ಧೋರಣೆಯನ್ನು ತೋರಿದೆ. ಅಮೆರಿಕ ಮತ್ತು ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳನ್ನು ಹೊರತುಪಡಿಸಿ ಬೇರೆಲ್ಲ ದೇಶಗಳ ಸರಕು ಸಾಗಣೆಗೆ ಜಲಮಾರ್ಗ ಮುಕ್ತವಾಗಿದೆ ಎಂದು ತಿಳಿಸಿದೆ. ಭದ್ರತೆ ಮತ್ತು ಸುರಕ್ಷತಾ ವಿಚಾರಗಳ ಬಗ್ಗೆ ತಿಳಿದುಕೊಂಡು ಈ ಜಲಸಂಧಿಯನ್ನು ದಾಟಬಹುದು ಎಂದು ಹೇಳಿದೆ.

ಸಾಂದರ್ಭಿಕ ಚಿತ್ರ

ಟೆಹರಾನ್, ಮಾ. 22: ಹೊರ್ಮುಜ್ ಜಲಸಂಧಿಯ (Strait of Hormuz) ಮೂಲಕ ಹಡಗುಗಳಿಗೆ ಹಾದುಹೋಗಲು ಅವಕಾಶ ನೀಡುವ ಬಗ್ಗೆ ಇರಾನ್ (Iran) ತನ್ನ ನಿಲುವನ್ನು ಮೃದುಗೊಳಿಸಿದೆ. ಅಮೆರಿಕ ಮತ್ತು ಇಸ್ರೇಲ್‌ಗೆ (Israel) ಸಂಬಂಧಿಸಿದ ಹಡಗುಗಳನ್ನು ಹೊರತುಪಡಿಸಿ ಎಲ್ಲ ಸಾಗಣೆಗೆ ಜಲಮಾರ್ಗ ಮುಕ್ತವಾಗಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.

48 ಗಂಟೆಗಳ ಒಳಗೆ ಜಲಮಾರ್ಗವು ಸಂಪೂರ್ಣವಾಗಿ ತೆರೆಯದಿದ್ದರೆ ಇರಾನಿನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಕೆಲವೇ ಗಂಟೆಗಳ ನಂತರ ಇರಾನ್‌ನ ಈ ನಿರ್ಧಾರ ತಿಳಿದುಬಂದಿದೆ.

ಇರಾನ್‌ನ ಶತ್ರುಗಳಿಗೆ ಸಂಬಂಧಿಸದ ಹಡಗುಗಳು ಟೆಹರಾನ್ ಜತೆ ಭದ್ರತೆ ಮತ್ತು ಸುರಕ್ಷತಾ ವಿಚಾರಗಳ ಬಗ್ಗೆ ತಿಳಿದುಕೊಂಡು ಈ ಜಲಸಂಧಿಯನ್ನು ದಾಟಬಹುದು ಎಂದು ಇರಾನ್‌ನ ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (IMO) ಪ್ರತಿನಿಧಿ ಅಲಿ ಮೂಸವಿ ತಿಳಿಸಿದ್ದಾರೆ.

ಇಸ್ರೇಲ್‌ ಪ್ರಮುಖ ಪರಮಾಣು ಸಂಶೋಧನಾ ತಾಣದ ಮೇಲೆ ಇರಾನ್ ದಾಳಿ

ಪರ್ಷಿಯನ್ ಕೊಲ್ಲಿಯಲ್ಲಿ ಸಮುದ್ರ ಸುರಕ್ಷತೆಯನ್ನು ಸುಧಾರಿಸಲು ಮತ್ತು ನಾವಿಕರನ್ನು ರಕ್ಷಿಸಲು ವಿಶ್ವಸಂಸ್ಥೆಯೊಂದಿಗೆ ಸಹಕರಿಸಲು ಇರಾನ್ ಸಿದ್ಧವಾಗಿದೆ. ಇದೇ ವೇಳೆ, ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ದಾಳಿಗಳೇ ಹೊರ್ಮುಜ್ ಜಲಸಂಧಿಯ ಪ್ರಸ್ತುತ ಪರಿಸ್ಥಿತಿಗೆ ಮೂಲ ಕಾರಣವೆಂದು ಅವರು ಹೇಳಿದರು.

ರಾಜತಾಂತ್ರಿಕತೆ ಇರಾನ್‌ನ ಪ್ರಮುಖ ಆದ್ಯತೆ. ಆದರೆ ಸಂಪೂರ್ಣವಾಗಿ ದಾಳಿಗಳನ್ನು ನಿಲ್ಲಿಸುವುದು, ಹಾಗೆಯೇ ಪರಸ್ಪರ ನಂಬಿಕೆ ಮತ್ತು ವಿಶ್ವಾಸ ಹೆಚ್ಚಿಸುವುದು ಮುಖ್ಯ ಎಂದು ಮೌಸಾವಿ ಹೇಳಿದರು. ಫೆಬ್ರವರಿ 28ರಂದು ಇರಾನ್ ಈ ಪ್ರಮುಖ ಇಂಧನ ಸರಬರಾಜು ಮಾರ್ಗವನ್ನು ಬಂದ್ ಮಾಡಿತು. ಈ ಮಾರ್ಗದ ಮೂಲಕ ಜಾಗತಿಕ ತೈಲ ಮತ್ತು ದ್ರವೀಕೃತ ಅನಿಲದ ಸುಮಾರು ಐದನೇ ಭಾಗ ಸಾಗುತ್ತದೆ. ಅಮೆರಿಕ, ಇಸ್ರೇಲ್ ಮತ್ತು ಅವರ ಮಿತ್ರ ರಾಷ್ಟ್ರಗಳಿಗೆ ಒಂದು ಲೀಟರ್ ತೈಲವೂ ತಲುಪಲು ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ಇರಾನ್ ವಿರುದ್ಧ ಅಮೆರಿಕ-ಇಸ್ರೇಲಿ ಯುದ್ಧದ ನಡುವೆ ಹೊರ್ಮುಜ್ ಜಲಸಂಧಿಯಲ್ಲಿ ಹೋಗುವ ಹಡಗುಗಳನ್ನು ಟೆಹರಾನ್ ತಡೆಯಿತು. ಇದರಿಂದ ಜಾಗತಿಕವಾಗಿ ಹಲವು ದೇಶಗಳಿಗೆ ತೈಲ ಹಾಗೂ ಅನಿಲದ ಬಿಕ್ಕಟ್ಟು ಉಂಟಾಯಿತು.

ಅಮೆರಿಕವು ಈ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ರಕ್ಷಣೆಯಾಗಿ ನೌಕಾ ಒಕ್ಕೂಟವನ್ನು ನಿರ್ಮಿಸಲು ಪ್ರಯತ್ನಿಸಿದೆ. ಆದರೆ ಬಹುತೇಕ ನಾಟೋ ಮಿತ್ರ ರಾಷ್ಟ್ರಗಳು ಇರಾನ್ ವಿರುದ್ಧ ಸೈನಿಕ ಕಾರ್ಯಾಚರಣೆಗಳಲ್ಲಿ ತೊಡಗಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ಹೇಳಿವೆ. ನಾಟೋ ಅಮೆರಿಕದ ಸಹಾಯಕ್ಕೆ ಬರದೇ ಇರುವುದು ಕೂಡ ದೊಡ್ಡಣ್ಣನ ಕೆಂಗಣ್ಣಿಗೆ ಕಾರಣವಾಗಿದೆ.