ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೇಪಾಳದಲ್ಲಿ ಭಾರಿ ಪ್ರವಾಹ: 8 ಮಂದಿ ಸಾವು, 105 ಭಾರತೀಯರು ನಾಪತ್ತೆ

Severe Floods in Nepal: ನೇಪಾಳದಲ್ಲಿ ಭಾರಿ ಪ್ರವಾಹ ಉಂಟಾದ ಪರಿಣಾಮ ಎಂಟು ಜನರು ಮೃತಪಟ್ಟು, 105 ಮಂದಿ ಭಾರತೀಯರು ಸೇರಿ ಹಲವರು ನಾಪತ್ತೆಯಾಗಿದ್ದಾರೆ. ಟಿಬೆಟ್‌ನಲ್ಲಿ ಉಂಟಾದ ಪ್ರವಾಹದಿಂದಾಗಿ ನೇಪಾಳದ ಹಲವು ಗ್ರಾಮಗಳು ಕೊಚ್ಚಿಹೋಗಿವೆ. ಇದುವರೆಗೆ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ 8 ಮೃತದೇಹಗಳು ಪತ್ತೆಯಾಗಿವೆ.

ನೇಪಾಳದಲ್ಲಿ ಭಾರಿ ಪ್ರವಾಹ

ಕಠ್ಮಂಡು, ಆ. 26: ನೇಪಾಳದಲ್ಲಿ (Nepal) ಭಾರಿ ಪ್ರವಾಹ ಉಂಟಾದ ಪರಿಣಾಮ ಎಂಟು ಜನರು ಮೃತಪಟ್ಟು, 105 ಮಂದಿ ಭಾರತೀಯರು ಸೇರಿ ಹಲವರು ನಾಪತ್ತೆಯಾಗಿದ್ದಾರೆ. ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹವು ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳನ್ನು ಆವರಿಸಿದೆ (Nepal Flood). ಟಿಬೆಟ್‌ನಲ್ಲಿ ಉಂಟಾದ ಪ್ರವಾಹದಿಂದಾಗಿ ನೇಪಾಳದ ಹಲವು ಗ್ರಾಮಗಳು ಕೊಚ್ಚಿ ಹೋಗಿವೆ. ಇದುವರೆಗೆ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ಎಂಟು ಮೃತದೇಹಗಳು ಪತ್ತೆಯಾಗಿವೆ.

291 ವಿದೇಶಿಯರು ಮತ್ತು 93 ನೇಪಾಳಿ ಪ್ರಜೆಗಳು ಸೇರಿ ಕನಿಷ್ಠ 384 ಪ್ರಯಾಣಿಕರು ಪ್ರವಾಹ ಪೀಡಿತ ಪ್ರದೇಶದಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ವಿದೇಶಿಯರಲ್ಲಿ 105 ಮಂದಿ ಭಾರತೀಯರು ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಸುವಾ ಜಿಲ್ಲೆಯಲ್ಲಿ ಕನಿಷ್ಠ 26 ನೇಪಾಳ ಪೊಲೀಸ್ ಸಿಬ್ಬಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಶಸ್ತ್ರ ಪೊಲೀಸ್ ಪಡೆ ಕೂಡ ತನ್ನ ಏಳು ಸಿಬ್ಬಂದಿ ಕಾಣೆಯಾಗಿದ್ದಾರೆ ಎಂದು ತಿಳಿಸಿದೆ. ನೇಪಾಳ ಸೇನೆಯು ಹೆಲಿಕಾಪ್ಟರ್‌ಗಳು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ಪೀಡಿತ ಪ್ರದೇಶದಲ್ಲಿ ನಿಯೋಜಿಸಿದೆ. ಹಾನಿಯ ವಿವರಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಇಲ್ಲಿದೆ ವಿಡಿಯೊ:



ನೇಪಾಳದ ಉತ್ತರದ ಜಿಲ್ಲೆಗಳಲ್ಲಿ ಬುಧವಾರ (ಆಗಸ್ಟ್‌ 26) ಭಾರಿ ಪ್ರವಾಹ ಉಂಟಾಗಿದ್ದು, ರಸ್ತೆಗಳು ಮತ್ತು ವಿದ್ಯುತ್ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ನೇಪಾಳದಲ್ಲಿ ಆರು ಜಲವಿದ್ಯುತ್ ಕೇಂದ್ರಗಳು ಪ್ರವಾಹದಲ್ಲಿ ಮುಳುಗಿವೆ. ಇದು ವಿದ್ಯುತ್‌ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಸೌಲಭ್ಯಗಳಿಗೆ ಹಾನಿಯನ್ನುಂಟು ಮಾಡಿದೆ. ಇದರ ಪರಿಣಾಮವಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮೂಲಗಳು ವರದಿ ಮಾಡಿವೆ. ನೇಪಾಳದಲ್ಲಿ ಹಲವು ಹೆದ್ದಾರಿಗಳನ್ನು ಸಹ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಭೀಕರ ಪ್ರವಾಹ, ಭೂಕುಸಿತ

ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಜಿಲ್ಲೆಗಳ ಪರ್ವತ ಕಣಿವೆಗಳಲ್ಲಿ ಕೆಸರು ಮಿಶ್ರಿತ ನೀರಿನ ಭಾರಿ ಪ್ರವಾಹ ಉಂಟಾಗುತ್ತಿರುವ ದೃಶ್ಯದ ವಿಡಿಯೊವನ್ನು ನೇಪಾಳ ಪೊಲೀಸರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ʼʼನಮಗೆ ಹಾನಿಯ ಪ್ರಮಾಣ ನಿಖರವಾಗಿ ತಿಳಿದಿಲ್ಲ. ಆದರೆ ಪ್ರವಾಹ ಭೀಕರವಾಗಿದೆ. ನದಿಯ ಬಳಿ ವಾಸಿಸುತ್ತಿರುವ ಜನರಿಗೆ ಸ್ಥಳಾಂತರಗೊಳ್ಳಲು ನಾವು ಎಚ್ಚರಿಕೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ, ಪರಿಸ್ಥಿತಿಯನ್ನು ಅವಲೋಕಿಸಲು ನೇಪಾಳ ಪ್ರಧಾನಿ ಬಾಲೇಂದ್ರ ಶಾ ರಾಷ್ಟ್ರೀಯ ವಿಪತ್ತು ಪಡೆ, ಅಪಾಯ ನಿರ್ವಹಣೆ ಮತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ಕರೆದಿದ್ದಾರೆ. ವೈದ್ಯಕೀಯ ತಂಡ, ಸ್ಕೌಟ್ಸ್ ಮತ್ತು ರೆಡ್‌ಕ್ರಾಸ್‌ ಸಮನ್ವಯದಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಕೆಲಸ ಪ್ರಾರಂಭವಾಗಿದೆ ಎಂದು ಶಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.