ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶಕ್ಕೆ ಮರಳಿದರೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಜೈಲು ವಾಸ ಫಿಕ್ಸ್‌; ಎಚ್ಚರಿಕೆ ನೀಡಿದ ಸಚಿವೆ

Sheikh Hasina: ಪದಚ್ಯುತ ಪ್ರಧಾನಿ ಮತ್ತು ನಿಷೇಧಿಸಲ್ಪಟ್ಟ ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಈ ವರ್ಷದ ಅಂತ್ಯದ ವೇಳೆಗೆ ಬಾಂಗ್ಲಾದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ದೇಶಕ್ಕೆ ಮರಳಿದರೆ ಜೈಲಿಗೆ ಕಳುಹಿಸುವುದಾಗಿ ಅಲ್ಲಿನ ರಾಜ್ಯ ಸಚಿವೆಯೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಶೇಖ್ ಹಸೀನಾ (ಸಂಗ್ರಹ ಚಿತ್ರ)

ಢಾಕಾ, ಜು. 14: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ದೇಶಕ್ಕೆ ಮರಳಿದರೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಅಲ್ಲಿನ ರಾಜ್ಯ ಸಚಿವೆ ಶಮಾ ಒಬೇದ್‌ ಇಸ್ಲಾಂ ಎಚ್ಚರಿಸಿದ್ದಾರೆ. ಪದಚ್ಯುತ ಪ್ರಧಾನಿ ಮತ್ತು ನಿಷೇಧಿಸಲ್ಪಟ್ಟ ಅವಾಮಿ ಲೀಗ್ ನಾಯಕಿ ಶೇಖ್‌ ಹಸೀನಾ ಈ ವರ್ಷದ ಅಂತ್ಯದ ವೇಳೆಗೆ ಬಾಂಗ್ಲಾದೇಶಕ್ಕೆ ಹಿಂತಿರುಗುವ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ. “ಪ್ರತಿಯೊಂದು ಅಡಚಣೆ ಮತ್ತು ಪ್ರತಿಯೊಂದು ಪಿತೂರಿಯನ್ನು ನಿವಾರಿಸಿಕೊಂಡು, ಈ ವರ್ಷ ನಾನು ನನ್ನ ದೇಶಕ್ಕೆ ಹಿಂತಿರುಗುತ್ತೇನೆ” ಎಂದು ಕಳೆದ ತಿಂಗಳಷ್ಟೇ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಶೇಖ್‌ ಹಸೀನಾ ತಿಳಿಸಿದ್ದರು.

2024ರ ಆಗಸ್ಟ್ 5ರಂದು ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಂತರ ಶೇಖ್ ಹಸೀನಾ ಅವರ ಸರ್ಕಾರ ಉರುಳಿತು. ಈ ಮೂಲಕ ಅವರ 20 ವರ್ಷಗಳ ಪ್ರಧಾನಿ ಆಡಳಿತವು ಕೊನೆಗೊಂಡಿತು. ಜನಾಕ್ರೋಶ ವ್ಯಕ್ತವಾಗುತ್ತಿದ್ಧಂತೆ ಹಸೀನಾ ತಮ್ಮ ತಾಯ್ನಾಡಿನಿಂದ ಪಲಾಯನ ಮಾಡಿ ಭಾರತಕ್ಕೆ ಆಗಮಿಸಿದ್ದರು. ಅಂದಿನಿಂದ ಅವರು ಭಾರತದಲ್ಲೇ ವಾಸವಾಗಿದ್ದಾರೆ. ಇದೀಗ ಅವರು ತಮ್ಮ ದೇಶಕ್ಕೆ ಹಿಂತಿರುಗಲು ಮುಂದಾಗಿದ್ದರೆ, ಸಚಿವೆಯೊಬ್ಬರು ಜೈಲು ಶಿಕ್ಷೆಯ ಬೆದರಿಕೆ ಹಾಕಿದ್ದಾರೆ.

“ಹಸೀನಾ ಶರಣಾದರೆ, ಕಾನೂನಿನ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅವರು ಜೈಲಿಗೆ ಹೋಗಬೇಕಾಗುತ್ತದೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ” ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಒಬೇದ್ ಇಸ್ಲಾಂ ಹೇಳಿದ್ದಾರೆ. “ಶೇಖ್ ಹಸೀನಾ ಶರಣಾದಾಗ, ಅವರು ಮೊದಲು ಜೈಲಿಗೆ ಹೋಗಬೇಕಾಗುತ್ತದೆ. ಶಿಕ್ಷೆಗೊಳಗಾದ ವ್ಯಕ್ತಿಯ ಹೇಳಿಕೆಗಳನ್ನು ಸರ್ಕಾರ ಪರಿಗಣಿಸುವುದಿಲ್ಲ” ಎಂದು ಶಮಾ ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವ ನಿರ್ಧಾರ ಪ್ರಕಟಿಸಿದ ಶೇಖ್ ಹಸೀನಾ

2025ರ ನವೆಂಬರ್ 17ರಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಮಾನವೀಯತೆಯ ವಿರುದ್ಧದ ಅಪರಾಧಗಳ ಪ್ರಕರಣದಲ್ಲಿ ಹಸೀನಾ ಅವರಿಗೆ ಮರಣ ದಂಡನೆ ವಿಧಿಸಿತು. ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆ ಮೇಲೆ ಮಾರಣಾಂತಿಕ ಕ್ರಮ ತೆಗೆದುಕೊಳ್ಳುವ ಆದೇಶ ಸೇರಿ ಮೂರು ಆರೋಪಗಳ ಮೇಲೆ ಅವರನ್ನು ತಪ್ಪಿತಸ್ಥರೆಂದು ಕೋರ್ಟ್ ಘೋಷಿಸಿತು.

ಹಸೀನಾ ಮತ್ತು ಅವರ ಸಹಾಯಕ, ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರನ್ನು ಪರಾರಿಯಾಗಿರುವ ಅಪರಾಧಿಗಳೆಂದು ಘೋಷಿಸಿ, ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಲಾಯಿತು. ಆದರೆ ಹಸೀನಾ ಈ ತೀರ್ಪನ್ನು ಕಾನೂನುಬಾಹಿರ, ಅಸಂವಿಧಾನಿಕ ಮತ್ತು ರಾಜಕೀಯ ಪ್ರೇರಿತ ಪ್ರಕ್ರಿಯೆಯ ಭಾಗ ಎಂದು ಕರೆದಿದ್ದಾರೆ.

“ನಾನು ನನ್ನ ದೇಶಕ್ಕೆ ಹಿಂದಿರುಗಿದ ನಂತರ ಅವರು ನನ್ನನ್ನು ಬಂಧಿಸಬಹುದು, ಕೊಲ್ಲಬಹುದು. ಆದರೂ, ನಾನು ಹೋಗಲೇಬೇಕು” ಎಂದು ಸಂದರ್ಶನವೊಂದರಲ್ಲಿ ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ 78 ವರ್ಷದ ಪುತ್ರಿ ಹಸೀನಾ ಅವರು ಹೇಳಿದ್ದರು.