ರೋಮ್, ಮೇ 20: ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ತಮ್ಮ ಐದು ದೇಶಗಳ ಪ್ರವಾಸದ ಅಂತಿಮ ಹಂತವಾಗಿ ಇಟಲಿಯಲ್ಲಿದ್ದಾರೆ. ಮಂಗಳವಾರ (ಮೇ 19) ಪ್ರಧಾನಿ ರೋಮ್‌ಗೆ ಆಗಮಿಸಿದಾಗ ಅವರ ಸ್ನೇಹಿತೆ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಭರ್ಜರಿಯಾಗಿ ಸ್ವಾಗತಿಸಿದರು. ಎಕ್ಸ್‌ನಲ್ಲಿ ಸೆಲ್ಫಿ ಹಂಚಿಕೊಂಡ ಅವರು, ರೋಮ್‌ಗೆ ಸ್ವಾಗತ, ನನ್ನ ಸ್ನೇಹಿತ ಎಂದು ಬರೆದಿದ್ದಾರೆ. ಬುಧವಾರ (ಮೇ 20) ಬೆಳಗ್ಗೆ ವೇಳೆಗೆ ಈ ಪೋಸ್ಟ್ 3.2 ಮಿಲಿಯನ್ (32 ಲಕ್ಷ) ವೀಕ್ಷಣೆಗಳು ಮತ್ತು 1.6 ಲಕ್ಷಕ್ಕೂ ಹೆಚ್ಚು ಲೈಕ್‌ಗಳೊಂದಿಗೆ ವೈರಲ್ ಆಗಿದೆ.
ಮೋದಿ ಮತ್ತು ಮೆಲೋನಿ ನಡುವಿನ ಭೇಟಿಯು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಸಂಚಲನ ಮೂಡಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಟ್ರೆಂಡ್ ಆಗಿರುವ ‘ಮೆಲೋಡಿ ಕ್ರೇಜ್’ ಹುಟ್ಟಿಸಿಕೊಂಡಿರುವ ಉಭಯ ನಾಯಕರು, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸೆಲ್ಫಿಗಳನ್ನು ಪೋಸ್ಟ್ ಮಾಡುವುದನ್ನು ಮರೆಯುವುದಿಲ್ಲ. ಇವರ ವಿಡಿಯೊಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತವೆ.
ಪ್ರಧಾನಿ ಮೋದಿ ಮತ್ತು ಇಟಲಿ ಪ್ರಧಾನಿ ಮೆಲೋನಿ ರೋಮ್‌ನ ಮಧ್ಯ ಭಾಗದಲ್ಲಿರುವ ಐತಿಹಾಸಿಕ ಕೊಲೋಸಿಯಮ್‌ಗೆ ಭೇಟಿ ನೀಡಿದ ಫೋಟೋಗಳು ಈಗ ಸಖತ್ ಸದ್ದು ಮಾಡುತ್ತಿವೆ. ಅಲ್ಲದೆ ಮೆಲೋನಿ ಅವರ ಜತೆ ಕಾರಿನಲ್ಲಿ ಕುಳಿತಿರುವ ಫೋಟೊವನ್ನು ಮೋದಿ ಹಂಚಿಕೊಂಡಿದ್ದು, ಸಖತ್ ಸಂಚಲನ ಮೂಡಿಸಿದೆ.
ಇಲ್ಲಿದೆ ಪೋಸ್ಟ್:
ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ರೋಮ್‌ಗೆ ಆಗಮಿಸಿದ ಬಳಿಕ, ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೋಜನ ವೇಳೆ ಭೇಟಿ ಮಾಡುವ ಅವಕಾಶ ದೊರೆಯಿತು. ನಂತರ ಐತಿಹಾಸಿಕ ಕೊಲೋಸಿಯಮ್‌ಗೆ ಭೇಟಿ ನೀಡಿದೆ ಎಂದು ಮೋದಿ ಬರೆದಿದ್ದಾರೆ.
ನಾರ್ವೆಯ ಅತ್ಯುನ್ನತ ಗೌರವ ಗ್ರ್ಯಾಂಡ್ ಕ್ರಾಸ್ ಸ್ವೀಕರಿಸಿದ ನರೇಂದ್ರ ಮೋದಿ: ಪ್ರಧಾನಿಗಿದು 32ನೇ ಅಂತಾರಾಷ್ಟ್ರೀಯ ಗೌರವ
ಬುಧವಾರ (ಮೇ 20) ಪ್ರಧಾನಿ ಮೋದಿ ಭಾರತಕ್ಕೆ ತೆರಳುವ ಮೊದಲು ಇಟಲಿ ಅಧ್ಯಕ್ಷ ಸೆರ್ಗಿಯೊ ಮ್ಯಾಟರೆಲ್ಲಾ ಅವರನ್ನು ಭೇಟಿ ಮಾಡಿ ಇತರ ರಾಜತಾಂತ್ರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮೆಲೋಡಿ ಕ್ಷಣ ವೈರಲ್
ಮೀಮ್‌ನಲ್ಲಿ ವೈರಲ್ ಮಾಡಲಾಗಿದ್ದ ಉಭಯ ನಾಯಕರ 'ಮೆಲೋಡಿ' ಹೆಸರಿಗೆ ಪೂರಕವಾಗಿ, ಮೋದಿ ಮೆಲೋನಿಗೆ 'ಪಾರ್ಲೆ ಮೆಲೊಡಿ' ಚಾಕೊಲೇಟ್ ಪ್ಯಾಕೆಟ್ ಒಂದನ್ನು ಉಡುಗೊರೆಯಾಗಿ ನೀಡಿದರು. ಇಬ್ಬರೂ ನಾಯಕರು ಚಾಕೊಲೇಟ್ ಪ್ಯಾಕೆಟ್ ಹಿಡಿದುಕೊಂಡಿರುವ ವಿಡಿಯೊವನ್ನು ಇಟಲಿ ಪ್ರಧಾನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಭಾರತದಲ್ಲಿ ಮೆಲೋಡಿ ಚಾಕೊಲೇಟ್ ಟ್ರೆಂಡಿಂಗ್‌ನಲ್ಲಿದೆ.