ವಾಷಿಂಗ್ಟನ್ : ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ (sunita williams) ಮತ್ತು ಅವರ ಸಂಗಾತಿ ಬುಚ್ ವಿಲ್ಮೋರ್ 286 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದ ನಂತರ ಕೊನೆಗೂ ಭೂಮಿಗೆ ಮರಳಿದ್ದಾರೆ. ಅವರ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಮಾರ್ಚ್ 19ರಂದು ಬೆಳಗಿನ ಜಾವ 3:27ಕ್ಕೆ ಫ್ಲೋರಿಡಾದ ಸಮೀಪ ಮೆಕ್ಸಿಕೋ ಕೊಲ್ಲಿಯಲ್ಲಿ ಯಶಸ್ವಿಯಾಗಿ ಕೆಳಗೆ ಇಳಿದಿದೆ.
ನೌಕೆಗಳ ಮೂಲಕ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ನೀರಿನಿಂದ ಯಶಸ್ವಿಯಾಗಿ ಹೊರತೆಗೆಯಲಾಯಿತು. ಬಾಹ್ಯಾಕಾಶ ನೌಕೆಯಲ್ಲಿರುವ ನಾಲ್ವರು ಗಗನಯಾತ್ರಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಇದ್ದಾರೆ. ಡ್ರ್ಯಾಗನ್ ಕ್ಯಾಪ್ಸುಲ್‌ನ ಹ್ಯಾಚ್ ತೆರೆದು ನಾಲ್ವರನ್ನೂ ಕರೆದೊಯ್ಯಲಾಗಿದೆ. ಫ್ಲೋರಿಡಾ ಪ್ಯಾನ್‌ಹ್ಯಾಂಡಲ್ ಬಳಿಯ ಮೆಕ್ಸಿಕೋ ಕೊಲ್ಲಿಯಲ್ಲಿ ಪ್ಯಾರಾಚೂಟ್‌ನೊಂದಿಗೆ ಕ್ಯಾಪ್ಸೂಲ್ ಇಳಿಯಿತು. ಬಾಹ್ಯಾಕಾಶದಿಂದ ನಿರ್ಗಮಿಸಿದ ಕೆಲವೇ ಗಂಟೆಗಳಲ್ಲಿ ಲ್ಯಾಂಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿತು. ನಾಸಾ ಮತ್ತು ಸ್ಪೇಸ್‌ಎಕ್ಸ್ ತಂಡಗಳು ಅವರನ್ನು ತಕ್ಷಣವೇ ಹಡಗಿಗೆ ಸಾಗಿಸಿದವು. ಈ ನಾಲ್ವರೂ ಭೂಮಿಯ ಗುರುತ್ವಕ್ಕೆ ಒಗ್ಗಿಕೊಳ್ಳಲು ತುಸು ಸಮಯ ಬೇಕಾಗಿದ್ದು, ನಂತರ ಮಾಧ್ಯಮಗಳ ಮುಂದೆ ಬರಲಿದ್ದಾರೆ ಎಂದು ತಿಳಿಸಲಾಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಎಂಟು ದಿನಗಳ ಭೇಟಿಗಾಗಿ ತೆರಳಿ, ಈಗ ಫೆಬ್ರವರಿವರೆಗೂ ಅಲ್ಲಿ ಕಾಲ ಕಳೆಯಬೇಕಾದ ಸವಾಲಿನ ಸನ್ನಿವೇಶಕ್ಕೆ ಸಿಲುಕಿರುವ ನಾಸಾ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಇತ್ತೀಚೆಗಷ್ಟೇ ಬಾಹ್ಯಾಕಾಶದಲ್ಲಿಯೇ ತಮ್ಮ 59ನೇ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದರು.
ಜೂನ್ 5, 2024ರಂದು, ಇಬ್ಬರೂ ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಒಂದು ವಾರದ ಕಾರ್ಯಾಚರಣೆಗಾಗಿ ಹೊರಟಿದ್ದರು. ಆದರೆ ಹೀಲಿಯಂ ಸೋರಿಕೆ ಮತ್ತು ಇತರ ತಾಂತ್ರಿಕ ಸಮಸ್ಯೆಗಳಿಂದಾಗಿ ಸ್ಟಾರ್‌ಲೈನರ್ ಹಿಂತಿರುಗಲು ಸಾಧ್ಯವಾಗಲಿಲ್ಲ. ಸ್ಪೇಸ್‌ಎಕ್ಸ್‌ನ ಕ್ರೂ ಡ್ರ್ಯಾಗನ್ ಬಳಸಿ ಅವರನ್ನು ಮರಳಿ ತರಲು ನಾಸಾ ನಿರ್ಧರಿಸಿತು. ಆದರೆ ಅದು ಕೂಡ ವಿಳಂಬವಾಯಿತು. ಮಾರ್ಚ್ 19, 2025 ರಂದು ಸಂಜೆ 5:57 ಕ್ಕೆ (ಯುಎಸ್ ಸಮಯ) ಭಾರತೀಯ ಕಾಲಮಾನ ಮಾರ್ಚ್ 19ರ ಬೆಳಗಿನ ಜಾವ 3.27ಕ್ಕೆ ಭೂಮಿಗೆ ಹಿಂದಿರುಗಿದರು.
ಸುನೀತಾಗೆ ಮುಂದೇನು?
ನಾಲ್ವರನ್ನೂ ಹ್ಯೂಸ್ಟನ್‌ನ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಗುರುತ್ವಾಕರ್ಷಣೆಗೆ ಮರು ಹೊಂದಿಕೊಳ್ಳಲು ವೈದ್ಯಕೀಯ ವೀಕ್ಷಣೆಯಲ್ಲಿ ಉಳಿಯುತ್ತಾರೆ. ಸೂಕ್ಷ್ಮ ಗುರುತ್ವಾಕರ್ಷಣೆಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಸ್ನಾಯುಗಳು ಮತ್ತು ಮೂಳೆಗಳ ಮೇಲೆ ಪರಿಣಾಮ ಬೀರುವುದರಿಂದ ಶಸ್ತ್ರಚಿಕಿತ್ಸಕರು ಅವುಗಳನ್ನು ಪರೀಕ್ಷಿಸುತ್ತಾರೆ. ನಂತರ ಸುನೀತಾ ವಿಲಿಯಮ್ಸ್ ತಮ್ಮ ಕುಟುಂಬ ಹಾಗೂ ನಾಯಿಗಳನ್ನು ಭೇಟಿಯಾಗಲು ತುಂಬಾ ಉತ್ಸುಕರಾಗಿದ್ದಾರೆ.