ರಿಯೋ: ಜೋಹಾನ್ಸ್‌ಬರ್ಗ್‌ನ ಪಶ್ಚಿಮದಲ್ಲಿರುವ ಬೆಕರ್ಸ್‌ಡಾಲ್ ಪಟ್ಟಣದಲ್ಲಿ ಭಾನುವಾರ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ ಹತ್ತು ಜನರು (Shootout Case) ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಬಂದೂಕುಧಾರಿಗಳು ಏಕಾಏಕಿ ಹೋಟೆಲಿಗೆ ನುಗ್ಗಿ ಜನಸಮೂಹದ ಮೇಲೆ ಗುಂಡು ಹಾರಿಸಿದರು ಎಂದು ವರದಿಯಾಗಿದೆ. ಬೆಕರ್ಸ್‌ಡಾಲ್ ಜೋಹಾನ್ಸ್‌ಬರ್ಗ್‌ನಿಂದ ನೈಋತ್ಯಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ. ಪೊಲೀಸರು ಬರುವ ಮೊದಲೇ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.
ದಾಳಿಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ, ಆದರೆ ಇಲ್ಲಿಯವರೆಗೆ ದಾಳಿಯ ಕಾರಣ ತಿಳಿದು ಬಂದಿಲ್ಲ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿಯ ಹಿಂದಿನ ಉದ್ದೇಶ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗೌಟೆಂಗ್ ಪ್ರಾಂತ್ಯದ ಪೊಲೀಸ್ ವಕ್ತಾರ ಬ್ರೆಂಡಾ ಮುರಿಡಿಲಿ AFP ಗೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಪ್ರಮುಖ ಚಿನ್ನದ ಗಣಿಗಳ ಬಳಿ ಇರುವ ಬಡ ಪ್ರದೇಶವಾದ ಬೆಕರ್ಸ್‌ಡಾಲ್‌ನಲ್ಲಿರುವ ಅಕ್ರಮ ಹೋಟೆಲಿನ ಬಳಿ ಗುಂಡಿನ ದಾಳಿ ನಡೆದಿದೆ.
ಗೌಟೆಂಗ್ ಪ್ರಾಂತ್ಯದ ಪೊಲೀಸ್ ವಕ್ತಾರ ಬ್ರೆಂಡಾ ಮುರಿಡಿಲಿ ಮಾತನಾಡಿ, ಗುಂಡಿನ ದಾಳಿ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಮೃತರ ವಿವರಗಳನ್ನ ಕಲೆಹಾಕಲಾಗುತ್ತಿದೆ. ಜೊತೆಗೆ ದಾಳಿ ನಡೆದ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವಾರ, ಅಮೆರಿಕದ ಪ್ರತಿಷ್ಠಿತ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಭಯಾನಕ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಸಾವನ್ನಪ್ಪಿ, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಎಂಜಿನಿಯರಿಂಗ್ ಮತ್ತು ಭೌತಶಾಸ್ತ್ರ ಕಟ್ಟಡದೊಳಗೆ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ.
ಬೋಂಡಿ ಬೀಚ್ ಗುಂಡಿನ ದಾಳಿ ಪ್ರಕರಣ: ಅಪ್ಪ ಸತ್ತರೂ ಭಾರತಕ್ಕೆ ಬಂದಿಲ್ಲ ಆರೋಪಿ ಸಾಜಿದ್ ಅಕ್ರಮ್
ಸಂಜೆ 4:22ರ ಸುಮಾರಿಗೆ ಬ್ರೌನ್ ವಿಶ್ವವಿದ್ಯಾಲಯದಿಂದ ತುರ್ತು ಎಚ್ಚರಿಕೆ ಹೊರಡಿಸಲಾಗಿತ್ತು. "ಸಕ್ರಿಯ ಶೂಟರ್" ಇದ್ದು, ವಿದ್ಯಾರ್ಥಿಗಳು ಬಾಗಿಲುಗಳನ್ನು ಲಾಕ್ ಮಾಡಿ, ಫೋನ್‌ಗಳನ್ನು ಸೈಲೆಂಟ್ ಮಾಡಿಕೊಂಡು ಅಡಗಿಕೊಳ್ಳಿ ಎಂದು ಸೂಚಿಸಲಾಗಿತ್ತು. ಪೊಲೀಸರು, ಫೆಡರಲ್ ಏಜೆಂಟ್‌ಗಳು ಮತ್ತು ತುರ್ತು ಪ್ರತಿಕ್ರಿಯಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದವು.