ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hajj Update 2025: ಹಜ್ ನಿಯಮ ಉಲ್ಲಂಘಿಸಿದರೆ 4.5 ಲಕ್ಷ ರೂ. ದಂಡ: ಸೌದಿ ಅರೇಬಿಯಾ ಎಚ್ಚರಿಕೆ

ಇಸ್ಲಾಂ ಧರ್ಮದ 5 ಸ್ತಂಭಗಳಲ್ಲಿ ಒಂದಾದ ಹಜ್ ಯಾತ್ರೆಯನ್ನು 2025ರ ಜೂ. 4ರಿಂದ ಜೂ. 9ರವರೆಗೆ ನಿಗದಿ ಪಡಿಸಲಾಗಿದೆ. ಸೌದಿ ಅರೇಬಿಯಾ ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ತೀರ್ಥಯಾತ್ರೆಯ ಪಾವಿತ್ರ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಹಜ್ ನಿಯಮ ಉಲ್ಲಂಘಿಸಿದರೆ 4.5 ಲಕ್ಷ ರೂ. ದಂಡ

Profile Ramesh B May 2, 2025 3:03 PM

ರಿಯಾದ್‌: ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ (Mecca). ಮುಸ್ಮಿಮರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಂಡು, ಪಾಪಗಳನ್ನು ಕಳೆದುಕೊಳ್ಳಬೇಕೆಂಬ ಮಹದಾಸೆ ಹೊಂದಿರುತ್ತಾರೆ. ಆದರೆ ಈ ಬಾರಿ ಅಧ್ಯಾತ್ಮಿಕ ಅನುಭವವನ್ನು ಪಡೆಯಲು ಹಜ್ ಯಾತ್ರೆ ಕೈಗೊಳ್ಳುವ ಮುನ್ನ ಈ ಸುದ್ದಿ ಓದಿ (Hajj Update 2025). ಇಸ್ಲಾಂ ಧರ್ಮದ 5 ಸ್ತಂಭಗಳಲ್ಲಿ ಒಂದಾದ ಹಜ್ ಯಾತ್ರೆ 2025ರ ಜೂ. 4ರಿಂದ ಜೂ. 9ರವರೆಗೆ ನಿಗದಿಯಾಗಿದೆ. ಪ್ರತಿ ವರ್ಷ ಭಾರತೀಯರು ಸೇರಿದಂತೆ ಲಕ್ಷಾಂತರ ಯಾತ್ರಿಕರು ಅಲ್ಲಿಗೆ ಪ್ರಯಾಣಿಸುತ್ತಾರೆ. ಸೌದಿ ಅರೇಬಿಯಾ ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ತೀರ್ಥಯಾತ್ರೆಯ ಪಾವಿತ್ರ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.

ಅನಧಿಕೃತ ಯಾತ್ರಿಕರು ಭಾರಿ ದಂಡ

ಅನಧಿಕೃತವಾಗಿ ಹಜ್‌ ಯಾತ್ರೆಗೆ ಬರುವ ಯಾತ್ರಾರ್ಥಿಗಳಿಗೆ 20,000 ಸೌದಿ ರಿಯಾಲ್‌ಗಳವರೆಗೆ, ಅಂದರೆ ಸರಿಸುಮಾರು 4.5 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದಾಗಿ ಹಜ್‌ ಎಚ್ಚರಿಕೆ ನೀಡಿದೆ. ‌ಅಲ್ಲದೆ ಗಡಿಪಾರು ಹಾಗೂ ಭವಿಷ್ಯದ ಪ್ರವೇಶ ನಿಷೇಧಗಳಿಗೆ ಕಾರಣವಾಗಬಹುದು. ನಿರ್ಬಂಧಿತ ಅವಧಿಯಲ್ಲಿ ಮೆಕ್ಕಾ ಅಥವಾ ಹತ್ತಿರದ ಪವಿತ್ರ ಸ್ಥಳಗಳಿಗೆ ಪ್ರವೇಶಿಸುವ ವಿಸಿಟ್ ವೀಸಾ ಹೊಂದಿರುವವರಿಗೂ ಈ ಕ್ರಮ ಅನ್ವಯಿಸುತ್ತದೆ.



ಕಟ್ಟುನಿಟ್ಟಿನ ಕ್ರಮ

ಸೌದಿ ಅಧಿಕಾರಿಗಳ ಪ್ರಕಾರ, ಈ ಬಾರಿ ಹಜ್ ಯಾತ್ರೆಗೆ ಬರುವ ಸಂಖ್ಯೆ ನಿರೀಕ್ಷೆಗೂ ಮೀರಿ ಹೋಗಿದೆ. ಹಜ್ ಯಾತ್ರೆಯ ವೇಳೆ ಬರುವ ಅಪಾರ ಸಂಖ್ಯೆಯ ಯಾತ್ರಿಕರನ್ನು ನಿಯಂತ್ರಿಸಲು ಮತ್ತು ಅಕ್ರಮವಾಗಿ ಭೇಟಿ ನೀಡುವ ಜನರನ್ನು ತಡೆಯಲು ನಿಯಮಗಳು ಜಾರಿಯಲ್ಲಿವೆ. ಸುರಕ್ಷತೆಯ ದೃಷ್ಟಿಯಿಂದ ಸರ್ಕಾರವು ಸುಧಾರಿತ ಡಿಜಿಟಲ್ ಟ್ರ್ಯಾಕಿಂಗ್ ಮತ್ತು ಹೆಚ್ಚಿನ ಕಣ್ಗಾವಲುಗಳನ್ನು ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಸರಿಯಾದ ರೀತಿಯಲ್ಲಿ ಅಗತ್ಯವಿರುವ ಪರವಾನಗಿಗಳನ್ನು ಪಡೆಯುವುದು ಎಷ್ಟು ಮುಖ್ಯ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕೃತ ಯಾತ್ರಿಕರಿಗೆ ಸುಲಭವಾಗುವಂತೆ ಹಜ್ ಮತ್ತು ಉಮ್ರಾ ಸಚಿವಾಲಯವು ಅರ್ಜಿ ಪ್ರಕ್ರಿಯೆಯನ್ನು ಸರಳೀಕರಿಸಿರುವುದಾಗಿಯೂ ಅವರು ಹೇಳಿದ್ದಾರೆ.

ಚೆಕ್‌ಪೋಸ್ಟ್‌ಗಳಲ್ಲಿ ತಂಡಗಳನ್ನು ನಿಯೋಜನೆ

ಅನುಮತಿ ಇಲ್ಲದೆ ಮೆಕ್ಕಾಗೆ ಪ್ರವೇಶಿಸಲು ಪ್ರಯತ್ನಿಸುವ ವಲಸಿಗರಿಗೆ ಭಾರಿ ದಂಡ, ಬಂಧನ, ಗಡಿಪಾರು ಮಾತ್ರವಲ್ಲದೆ ಮುಂದೆ ಎಂದಿಗೂ ಮೆಕ್ಕಾಗೆ ಭೇಟಿ ನೀಡಲು ಸಾಧ್ಯವಾಗದಂತೆ ನಿಷೇಧ ಹೇರಲಾಗುವುದು. ಇದಕ್ಕಾಗಿ ಅಧಿಕಾರಿಗಳು ಈಗಾಗಲೇ ಅನೇಕ ಚೆಕ್‌ಪೋಸ್ಟ್‌ಗಳಲ್ಲಿ ತಂಡಗಳನ್ನು ನಿಯೋಜಿಸಿದ್ದು, ನಿಯಮ ಉಲ್ಲಂಘಿಸುವವರನ್ನು ಗುರುತಿಸಿ, ಬಂಧಿಸುವ ಆದೇಶ ನೀಡಿದ್ದಾರೆ.

ಪಾರದರ್ಶಕತೆ ತರಲು ಡಿಜಿಟಲೀಕರಣ

ಸೌದಿ ಅರೇಬಿಯಾ ಈಗಾಗಲೇ ಹಜ್ ಪರವಾನಗಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಿದೆ. ತಸ್ರೀಹ್ ಎಂದು ಕರೆಯಲ್ಪಡುವ ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆಗೆ ಸಂಪರ್ಕ ಹೊಂದಿರುವ ಅಬ್ಶೇರ್ ಮತ್ತು ಮುಖೀಮ್‌ನಂತಹ ವೇದಿಕೆಗಳ ಮೂಲಕ ಯಾತ್ರಿಕರು ಈಗ ಪರವಾನಗಿಗಳಿಗಾಗಿ ಅರ್ಜಿ ಸಲ್ಲಿಸಬಹುದು. ಇದರಿಂದ ಪರವಾನಗಿಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸುಲಭವೆನ್ನಿಸುವುದು ಮಾತ್ರವಲ್ಲದೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬಹುದು.