Pregnancy: ಗಂಡನ ವೀರ್ಯದಿಂದ ಅಪರೂಪದ ಅಲರ್ಜಿಗೆ ತುತ್ತಾದ ಮಹಿಳೆ- ಶಾಶ್ವತ ಬಂಜೆತನ
ಅಪರೂಪದ ವೈದ್ಯಕೀಯ ಪ್ರಕರಣವೊಂದರಲ್ಲಿ, ಲಿಥುವೇನಿಯಾದ 29 ವರ್ಷದ ಮಹಿಳೆಯೊಬ್ಬರು ವಿಚಿತ್ರ ಅಲರ್ಜಿ ಸಮಸ್ಯೆಗೆ ತುತ್ತಾಗಿದ್ದು, ಗರ್ಭೀಯಾಗುವ ಆಸೆ ಇಟ್ಟುಕೊಂಡಿದ್ದ ಮಹಿಳೆ ಈ ಒಂದು ಅಲರ್ಜಿಯಿಂದ ಬಂಜೆತನಕ್ಕೆ ಗುರಿಯಾಗಿದ್ದಾರೆ. ಹಾಗಾದ್ರೆ ಅಷ್ಟಕ್ಕೂ ಆಗಿದ್ದೇನು..? ಆ ಅಲರ್ಜಿ ಬರಲು ಕಾರಣವೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.


ವಿಲ್ನಿಯಸ್: ಲಿಥುವೇನಿಯಾದ (Lithuania) 29 ವರ್ಷದ ಮಹಿಳೆಗೆ ಮಾನವ ವೀರ್ಯದಲ್ಲಿರುವ (Sperm) ಪ್ರೋಟೀನ್‌ಗಳಿಗೆ ಅಪರೂಪದ ಅಲರ್ಜಿ (Allergy) ಇರುವುದು ದೃಢಪಟ್ಟಿದೆ, ಇದು ಮಹಿಳೆಯರಲ್ಲಿ ಗರ್ಭಧಾರಣೆಗೆ (Pregnancy) ಅಡ್ಡಿಯಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಇತ್ತೀಚಿನ ವೈದ್ಯಕೀಯ ವರದಿಯು ಈ ಕಾಯಿಲೆಯಿಂದ ಗರ್ಭಕೋಶದ ಆರೋಗ್ಯದ ಮೇಲಾಗುವ ಪರಿಣಾಮವನ್ನು ಎತ್ತಿ ತೋರಿಸಿದೆ.
ಮಹಿಳೆ ಮತ್ತು ಆಕೆಯ ಸಂಗಾತಿಯು ಹಲವು ವರ್ಷಗಳಿಂದ ಗರ್ಭಧಾರಣೆಗೆ ಪ್ರಯತ್ನಿಸಿದರೂ ವಿಫಲರಾದರು. ಸಹಜ ಪ್ರಯತ್ನಗಳು ಮತ್ತು ಎರಡು ಬಾರಿಯ ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಕೂಡ ಯಶಸ್ವಿಯಾಗಲಿಲ್ಲ. ಗೈನಕಾಲಾಜಿಕಲ್ ಪರೀಕ್ಷೆಗಳಲ್ಲಿ ಯಾವುದೇ ರಚನಾತ್ಮಕ ಅಥವಾ ಹಾರ್ಮೋನ್ ಸಮಸ್ಯೆಗಳಿಲ್ಲದಿದ್ದರೂ, ಆಕೆಯ ಸಂಗಾತಿಯ ಫರ್ಟಿಲಿಟಿ ಪರೀಕ್ಷೆಯ ವಿವರಗಳು ವರದಿಯಲ್ಲಿ ಉಲ್ಲೇಖವಾಗಿಲ್ಲ.
ಮಹಿಳೆಗೆ ಆಸ್ತಮಾ ಮತ್ತು ಗಾಳಿಯಿಂದ ಹರಡುವ ಧೂಳು, ಬೆಕ್ಕಿನ ಕೂದಲು, ಮತ್ತು ಬೂಷ್ಟಿನಂತಹ ಅಲರ್ಜಿಗಳ ಇತಿಹಾಸವಿತ್ತು. ಈ ಅಲರ್ಜಿಗಳು ಗರ್ಭಧಾರಣೆಗೆ ಅಡ್ಡಿಯಾಗಿರಬಹುದೆಂದು ಶಂಕಿಸಿ, ಆಕೆ ಆಸ್ಪತ್ರೆಯಲ್ಲಿ ಮೌಲ್ಯಮಾಪನಕ್ಕೆ ಒಳಗಾದರು. ರಕ್ತ ಪರೀಕ್ಷೆಯಲ್ಲಿ ಇಯೊಸಿನೊಫಿಲ್‌ಗಳ ಮಟ್ಟವು ಅಸಾಮಾನ್ಯವಾಗಿ ಹೆಚ್ಚಿತ್ತು, ಇದು ಅಲರ್ಜಿಕ್ ಪ್ರತಿಕ್ರಿಯೆಗೆ ಸಂಬಂಧಿಸಿದೆ. ಸಂರಕ್ಷಣೆಯಿಲ್ಲದ ಸಂಭೋಗದ ನಂತರ ಆಕೆಗೆ ಶಿ, ಸೀನುವಿಕೆಯಂತಹ ಲಕ್ಷಣಗಳು ಕಾಣಿಸಿಕೊಂಡಿದ್ದವು, ಆದರೆ ಇದನ್ನು ಆರಂಭಿಕ ಫರ್ಟಿಲಿಟಿ ಚಿಕಿತ್ಸೆಯಲ್ಲಿ ಉಲ್ಲೇಖಿಸಿರಲಿಲ್ಲ.
ಈ ಸುದ್ದಿಯನ್ನು ಓದಿ: Baba Vanga Prediction: ಕಡಿಮೆಯಾಗಲಿದೆ ಬಡವರ ಜೀವಿತಾವಧಿ; ಬಾಬಾ ವಂಗಾ ಪ್ರಕಾರ ಶ್ರೀಮಂತರು ಎಷ್ಟು ವರ್ಷ ಬದುಕುತ್ತಾರೆ ಗೊತ್ತಾ?
ಆಕೆಯ ಸಂಗಾತಿಯ ವೀರ್ಯದ ಮಾದರಿಗಳಿಂದ ನಡೆಸಿದ ಪರೀಕ್ಷೆಯು ‘ಮಾನವ ಸೆಮಿನಲ್ ಪ್ಲಾಸ್ಮಾ ಅಲರ್ಜಿ’ಯನ್ನು ದೃಢಪಡಿಸಿತು. ಈ ಕಾಯಿಲೆಯಿಂದ ಗರ್ಭಕೋಶದಲ್ಲಿ ಉರಿಯೂತ ಉಂಟಾಗಿ, ಗರ್ಭಧಾರಣೆಗೆ ಅಡ್ಡಿಯಾಗಬಹುದು. ಚಿಕಿತ್ಸೆಯಾಗಿ, ಕಾಂಡೋಮ್ ಬಳಕೆಯನ್ನು ಸೂಚಿಸಲಾಯಿತಾದರೂ, ಆಕೆ ಸಹಜ ಗರ್ಭಧಾರಣೆಗೆ ಒಲವು ತೋರಿದರು. ಡಿಸೆನ್ಸಿಟೈಸೇಶನ್ ಥೆರಪಿಯು ಲಿಥುವೇನಿಯಾದಲ್ಲಿ ಲಭ್ಯವಿಲ್ಲ. ಆಕೆಗೆ ಸಂಭೋಗದ ಮೊದಲು ಆಂಟಿಹಿಸ್ಟಾಮೈನ್‌ಗಳನ್ನು ತೆಗೆದುಕೊಳ್ಳಲು ಸೂಚಿಸಲಾಯಿತು, ಆದರೆ ಮೂರು ವರ್ಷಗಳ ನಂತರವೂ ಗರ್ಭಧಾರಣೆ ಸಾಧ್ಯವಾಗಿಲ್ಲ.
ವೈದ್ಯಕೀಯ ಇತಿಹಾಸದಲ್ಲಿ ಕೇವಲ 80 ಇಂತಹ ಪ್ರಕರಣಗಳು ದಾಖಲಾಗಿವೆ. ಈ ಕೇಸ್, ಗರ್ಭಧಾರಣೆಯ ತೊಂದರೆಗಳಿಗೆ ಅಲರ್ಜಿಗಳನ್ನು ಕಾರಣವಾಗಿ ಪರಿಗಣಿಸಬೇಕಾದ ಅಗತ್ಯವನ್ನು ಒತ್ತಿಹೇಳಿದೆ.