ಮುಜಾಫರಾಬಾದ್: ಮಾನವ ಹಕ್ಕುಗಳ ಉಲ್ಲಂಘನೆ, ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದ ವಿರುದ್ಧ ಜಂಟಿ ಅವಾಮಿ ಕ್ರಿಯಾ ಸಮಿತಿ (Joint Awami Action Committee) ನಡೆಸುತ್ತಿರುವ ಪ್ರತಿಭಟನೆಯನ್ನು (JAAC Protest) ಹತ್ತಿಕ್ಕಲು ಪಾಕಿಸ್ತಾನ ಪಡೆಗಳು (Pakistan military) ಹಿಂಸಾತ್ಮಕ ಕ್ರಮ ಕೈಗೊಂಡಿದ್ದು ಇದರಿಂದ 19 ಮಕ್ಕಳು, 7 ಗರ್ಭಿಣಿಯರು ಸೇರಿದಂತೆ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಜೂನ್ 5ರಿಂದ 9ರ ನಡುವೆ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ (Pakistan-occupied Jammu and Kashmir) ದೊಡ್ಡ ಪ್ರಮಾಣದ ರಕ್ತಪಾತವಾಗಿದೆ. ಈ ಘಟನೆಗಳ ಕುರಿತು ತನಿಖೆಗೆ ಈಗ ಅಂತಾರಾಷ್ಟ್ರೀಯ ಸಮುದಾಯಗಳು ಒತ್ತಾಯಿಸಿವೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜಂಟಿ ಅವಾಮಿ ಕ್ರಿಯಾ ಸಮಿತಿಯು ಮಾನವ ಹಕ್ಕುಗಳ ಉಲ್ಲಂಘನೆ, ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪಾಕಿಸ್ತಾನ ಪಡೆಗಳು ಹಿಂಸಾತ್ಮಕ ಕ್ರಮ ಕೈಗೊಂಡಿವೆ. ಇದರಿಂದ ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ.
ಪೂಂಚ್‌ನಲ್ಲಿ ಗಡಿ ದಾಟಿ ಬಂದ ಪಿಒಕೆಯ ಅಪ್ರಾಪ್ತನ ಬಂಧನ
ಹಿಂಸಾಚಾರದಲ್ಲಿ 19 ಮಕ್ಕಳು ಮತ್ತು ಏಳು ಗರ್ಭಿಣಿಯರು ಸೇರಿದಂತೆ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಪಾಕಿಸ್ತಾನದ ಮುಖ್ಯ ಭೂಭಾಗದಿಂದ ಸುಮಾರು 14,000 ಭದ್ರತಾ ಸಿಬ್ಬಂದಿಯನ್ನು ಪಿಒಕೆಯಾದ್ಯಂತ ನಿಯೋಜಿಸಲಾಗಿತ್ತು. ನಿರಾಯುಧ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ.
ಕಾರ್ಯಾಚರಣೆಯ ವೇಳೆ ಯಾವುದೇ ದಾಖಲೆ ಉಳಿಯದಂತೆ ಮಾಡಲು ಈ ಪ್ರದೇಶದಲ್ಲಿ ಇಂಟರ್ನೆಟ್ ಮತ್ತು ಸಂವಹನ ನಿರ್ಬಂಧಗಳನ್ನು ವಿಧಿಸಲಾಗಿದೆ. ಜೆಎಎಸಿ ಆಂದೋಲನದಲ್ಲಿ ಭಾಗಿಯಾಗಿದ್ದ ಹಲವಾರು ನಾಯಕರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯ ಕೂಡ ಭಾಗಿಯಾಗಿದೆ. ಒಂದು ಮಾಹಿತಿಯ ಪ್ರಕಾರ ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಯಿಂದ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜೆಎಎಸಿ ಬಂದೂಕು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಬಳಸಿ ಕಿರಿದಾದ ಹಾದಿಗಳಿಂದ ಗೆರಿಲ್ಲಾ ಶೈಲಿಯಲ್ಲಿ ದಾಳಿ ನಡೆಸಲಾಗಿದ್ದು, ಇದನ್ನು ಹತ್ತಿಕ್ಕುವ ಪ್ರಯತ್ನವನ್ನು ಪಾಕಿಸ್ತಾನದ ಅಧಿಕಾರಿಗಳು ನಡೆಸಿದ್ದಾರೆ.
ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿಯಂತ್ರಿಸಲು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಮಿರ್ಪುರ್, ಮುಜಾಫರಾಬಾದ್, ಗಿಲ್ಗಿಟ್-ಬಾಲ್ಟಿಸ್ತಾನ್, ದಡಿಯಾಲ್, ರಾವಲಕೋಟ್, ಸುಧ್ನೋಟಿ ಮತ್ತು ತಟ್ಟಪಾನಿಗಳಲ್ಲಿ ಪ್ರತಿಭಟನೆಗಳು ಹರಡಿವೆ ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯಾಕಾಂಡಕ್ಕೆ ಭಾರತ ಖಂಡನೆ ; ವಿದೇಶಾಂಗ ಸಚಿವಾಲಯ ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ ಪಿಒಜೆಕೆಯಲ್ಲಿ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಯಿಂದ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದೆ. ಇದು ಅದರ ವೈಫಲ್ಯಗಳನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದೆ.