ನವದೆಹಲಿ: ಐಟಿ ಕ್ಷೇತ್ರದಲ್ಲಿ ಉದ್ಯೋಗ ಭದ್ರತೆಯ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟಿಸಿಎಸ್, ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಇನ್ಫೋಸಿಸ್‌ನಂತಹ ಪ್ರಮುಖ ಕಂಪನಿಗಳು ಈಗಾಗಲೇ ಸಾವಿರಾರು ನೌಕರರನ್ನು ಮನೆಗೆ ಕಳುಹಿಸಿದ್ದು, ಸರಣಿ ಉದ್ಯೋಗ ಕಡಿತವು ಯುವ ಉದ್ಯೋಗಿಗಳಲ್ಲಿ ತೀವ್ರ ಭೀತಿಯನ್ನು ಸೃಷ್ಟಿಸಿದೆ. ಈ ಸಾಮೂಹಿಕ ವಜಾಗೊಳಿಸುವಿಕೆಗೆ ಕಂಪನಿಗಳು ವಿವಿಧ ತಾಂತ್ರಿಕ ಕಾರಣಗಳನ್ನು ನೀಡುತ್ತಿವೆಯಾದರೂ, ಇದರ ಹಿಂದೆ ಇರುವುದು 'ಕೃತಕ ಬುದ್ಧಿಮತ್ತೆ' (AI) ತಂತ್ರಜ್ಞಾನ ಎಂಬುದು ಕಹಿ ಸತ್ಯ. ಈ ಆತಂಕದ ನಡುವೆಯೇ, ಇದೀಗ ಮತ್ತೊಂದು ಪ್ರಮುಖ ಟೆಕ್ ಸಂಸ್ಥೆ 'ಒರಾಕಲ್' ತನ್ನ ಸಾವಿರಾರು ಉದ್ಯೋಗಿಗಳಿಗೆ ಇಮೇಲ್ ಮೂಲಕ ʼಇಂದೇ ನಿಮ್ಮ ಕೊನೆಯ ದಿನʼ ಎಂದು ವಜಾ ಆದೇಶ ರವಾನಿಸಿ ಶಾಕ್ ನೀಡಿದೆ.
ಜಾಗತಿಕ ಸಾಫ್ಟ್‌ವೇರ್ ದೈತ್ಯ ಒರಾಕಲ್ ಸಂಸ್ಥೆಯು ತನ್ನ ವ್ಯಾಪಕ ಸಾಂಸ್ಥಿಕ ಪುನರ್ರಚನೆಯ ಭಾಗವಾಗಿ ಇಂದು ಮುಂಜಾನೆ 6 ಗಂಟೆಗೆ ತನ್ನ ಸಾವಿರಾರ ಉದ್ಯೋಗಿಗಳಿಗೆ ಇಮೇಲ್ ಕಳುಹಿಸುವ ಮೂಲಕ ಭಾರೀ ಉದ್ಯೋಗ ಕಡಿತದ ಹೊಸ ಪ್ರಕ್ರಿಯೆ ಆರಂಭಿಸಿದೆ. ಉದ್ಯೋಗ ಕಡಿತಕ್ಕೆ ಮೂಲ ಕಾರಣ ಒರಾಕಲ್ ಸಂಸ್ಥೆ ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಮೂಲಸೌಕರ್ಯಗಳ ಮೇಲಿನ ಭಾರೀ ಹೂಡಿಕೆ ಗಣನೀಯವಾಗಿ ಹೆಚ್ಚಿಸುತ್ತಿರುವ ಹಿನ್ನಲೆ ಕಂಪನಿಯಲ್ಲಿ ಉದ್ಯೋಗಿಗಳಿಗೆ ನೀಡುವ ವೆಚ್ಚ ನಿಯಂತ್ರಣಕ್ಕಾಗಿ ಈ ಕಠಿಣ ನಿರ್ಧಾರ ಕೈಗೊಂಡಿದೆ. ಆದರೆ ಈ ಪ್ರಕ್ರಿಯೆಯಿಂದ ಉದ್ಯೋಗಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಇಮೇಲ್‌ನಲ್ಲಿ ಏನಿದೆ?
ಒರಾಕಲ್ ಕಪನಿಯು ತನ್ನ ಉದ್ಯೋಗಿಗಳಿಗೆ ಇಮೇಲ್ ಮೂಲಕ, ʼನಿಮ್ಮ ಹುದ್ದೆಗೆ ಸಂಬಂಧಿಸಿದಂತೆ ನಾವು ಒಂದು ಕಠಿಣವಾದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಒರಾಕಲ್ ಸಂಸ್ಥೆಯ ಪ್ರಸ್ತುತ ವ್ಯವಹಾರದ ಅಗತ್ಯತೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ವಿಶಾಲವಾದ ಸಾಂಸ್ಥಿಕ ಬದಲಾವಣೆಯ ಭಾಗವಾಗಿ ನಿಮ್ಮ ಹುದ್ದೆಯನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ. ಪರಿಣಾಮವಾಗಿ, ಇಂದೇ ನಿಮ್ಮ ಕೊನೆಯ ಕೆಲಸದ ದಿನ." ʼನಮ್ಮೊಂದಿಗೆ ಕೆಲಸ ಮಾಡಿದ ಅವಧಿಯಲ್ಲಿ ನೀವು ತೋರಿದ ಸಮರ್ಪಣೆ, ಶ್ರಮ ಮತ್ತು ನೀಡಿದ ಕೊಡುಗೆಗೆ ನಾವು ಕೃತಜ್ಞರಾಗಿದ್ದೇವೆ. ವಜಾಗೊಳಿಸುವಿಕೆಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಮಾಡಿದ ನಂತರ, ಸೆವೆರೆನ್ಸ್ ಯೋಜನೆಯ ನಿಯಮಗಳು ಮತ್ತು ನಿಬಂಧನೆಗಳಿಗೊಳಪಟ್ಟು ನೀವು ಪರಿಹಾರ ಪಡೆಯಲು ಅರ್ಹರಾಗುತ್ತೀರಿ. ನಿಮ್ಮ ಪರಿಹಾರ ಮತ್ತು ಸೇವೆಯ ಅಂತಿಮ ದಿನಾಂಕದ ವಿವರಗಳೊಂದಿಗೆ 'ಡಾಕ್ಯುಸೈನ್' ಮೂಲಕ ನಿಮ್ಮ ಒರಾಕಲ್ ಇಮೇಲ್ ಐಡಿಗೆ ಪ್ರತ್ಯೇಕ ಇಮೇಲ್ ಬರಲಿದೆ.ʼ ಎಂದು ಹೇಳಿದೆ.
ಲಿಂಕ್ಡ್‌ಇನ್ ಮತ್ತು ರೆಡ್ಡಿಟ್‌ನಂತಹ ಜಾಲತಾಣಗಳಲ್ಲಿ ಉದ್ಯೋಗಿಗಳು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಕಂಪನಿಯಲ್ಲಿ ಸತತವಾಗಿ ಉತ್ತಮ ರೇಟಿಂಗ್ಸ್ ಮತ್ತು ಪ್ರದರ್ಶನ ನೀಡಿದ್ದ ಹಿರಿಯ ಉದ್ಯೋಗಿಗಳನ್ನು ಹಾಗೂ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದವರನ್ನೂ ಸಹ ಈ ಬಾರಿ ಕೆಲಸದಿಂದ ತೆಗೆದುಹಾಕಲಾಗಿದೆ. ತಕ್ಷಣವೇ ಲ್ಯಾಪ್‌ಟಾಪ್ ಮತ್ತು ಇಮೇಲ್ ಆಕ್ಸೆಸ್ ಕಳೆದುಕೊಂಡಿದ್ದರಿಂದ, ಮುಂದಿನ ಪರಿಹಾರ ಧನ ಮತ್ತು ದಾಖಲೆಗಳ ಪ್ರಕ್ರಿಯೆಗಾಗಿ ಉದ್ಯೋಗಿಗಳು ತಮ್ಮ ವೈಯಕ್ತಿಕ ಇಮೇಲ್ ಐಡಿಗಳನ್ನು ನೀಡುವಂತೆ ಸೂಚಿಸಲಾಗಿದೆ.
ಈ ಉದ್ಯೋಗ ಕಡಿತಕ್ಕೆ ಕಾರಣವೇನು?
ಒರಾಕಲ್ ಈಗಾಗಲೇ ಮೇ 31ಕ್ಕೆ ಕೊನೆಗೊಂಡ ಕಳೆದ ಹಣಕಾಸು ವರ್ಷದಲ್ಲಷ್ಟೇ ತನ್ನ ಒಟ್ಟು ಸಿಬ್ಬಂದಿ ಪಡೆಯಲ್ಲಿ ಶೇ. 13 ರಷ್ಟು, ಅಂದರೆ ಸುಮಾರು 21,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಹೊರಹಾಕಿತ್ತು. ಪ್ರಸ್ತುತ 1.41 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆಯು ಇದೀಗ ಮತ್ತೆ ಸಾಮೂಹಿಕ ವಜಾಕ್ಕೆ ಮುಂದಾಗಲು ಪ್ರಮುಖ ಕಾರಣವೇ ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಇನ್ಫ್ರಾಸ್ಟ್ರಕ್ಚರ್. ಕಂಪನಿಯು ಡೇಟಾ ಸೆಂಟರ್‌ಗಳು ಹಾಗೂ ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ಮೊದಲ ತ್ರೈಮಾಸಿಕದಲ್ಲೇ ಬರೋಬ್ಬರಿ $28.5 ಬಿಲಿಯನ್ ಹೂಡಿಕೆ ಮಾಡಿದ್ದು, ಈ ಇಡೀ ವರ್ಷಕ್ಕೆ ಒಟ್ಟು $90 ಬಿಲಿಯನ್‌ನಿಂದ $95 ಬಿಲಿಯನ್ ವಿನಿಯೋಗಿಸುವ ಬೃಹತ್ ಯೋಜನೆ ರೂಪಿಸಿದೆ. ಈ ಭಾರಿ ಪ್ರಮಾಣದ ಹೂಡಿಕೆಯಿಂದ ಉಂಟಾಗಿರುವ ಆರ್ಥಿಕ ವೆಚ್ಚವನ್ನು ಸರಿದೂಗಿಸಲು ಹಾಗೂ ಸಂಸ್ಥೆಯ ಆಂತರಿಕ ವೆಚ್ಚವನ್ನು ತಗ್ಗಿಸಲು ಒರಾಕಲ್ ಮತ್ತೆ ಉದ್ಯೋಗ ಕಡಿತದ ಹಾದಿ ಹಿಡಿದಿದೆ.