ವಾಷಿಂಗ್ಟನ್, ಜೂ. 8: ಇಸ್ರೇಲ್ ಮತ್ತು ಇರಾನ್ (Israel and Iran) ತಕ್ಷಣವೇ ಪರಸ್ಪರ ದಾಳಿ ಮಾಡುವುದನ್ನು ನಿಲ್ಲಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಸೋಮವಾರ ಕರೆ ನೀಡಿದ್ದಾರೆ. ರಾಜತಾಂತ್ರಿಕ ಪ್ರಯತ್ನಗಳ ಹೊರತಾಗಿಯೂ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, "ಇಸ್ರೇಲ್ ಮತ್ತು ಇರಾನ್ ತಕ್ಷಣವೇ ಶೂಟಿಂಗ್ ನಿಲ್ಲಿಸಬೇಕು" ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸೋಮವಾರ ಮುಂಜಾನೆ ಇಸ್ರೇಲ್ ಮತ್ತು ಇರಾನ್ ಪರಸ್ಪರ ಪ್ರತೀಕಾರದ ದಾಳಿಗಳನ್ನು ನಡೆಸಿದ್ದು, ಇದು ಇಡೀ ಮಧ್ಯ ಪ್ರಾಚ್ಯವನ್ನು ಮತ್ತೊಮ್ಮೆ ಪೂರ್ಣ ಪ್ರಮಾಣದ ಪ್ರಾದೇಶಿಕ ಯುದ್ಧಕ್ಕೆ ತಳ್ಳುವ ಭೀತಿ ಮೂಡಿಸಿದೆ. ಏಪ್ರಿಲ್ 8ರಂದು ಕದನ ವಿರಾಮ ಏರ್ಪಟ್ಟ ನಂತರ ಉಭಯ ದೇಶಗಳ ನಡುವೆ ನಡೆದ ಮೊದಲ ಗುಂಡಿನ ಚಕಮಕಿ ಇದಾಗಿದೆ.
ಲೆಬನಾನ್‌ನ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಸಂಘರ್ಷವು ಅಪಾಯಕಾರಿ ತಿರುವು ಪಡೆದುಕೊಂಡಿತು. ಭಾನುವಾರ ರಾತ್ರಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದರಿಂದ ಉತ್ತರ ಇಸ್ರೇಲ್‌ನ ಹಲವು ಭಾಗಗಳಲ್ಲಿ ಸೈರನ್‌ಗಳು ಮೊಳಗಿದವು. ಏಪ್ರಿಲ್ 8ರ ಕದನ ವಿರಾಮದ ನಂತರ ಇಸ್ರೇಲ್ ಮೇಲಿನ ಇರಾನ್‌ನ ಮೊದಲ ನೇರ ದಾಳಿ ಇದಾಗಿದೆ. ಇರಾನ್‌ನಿಂದ ಕ್ಷಿಪಣಿಗಳು ಬರುವುದನ್ನು ಪತ್ತೆಹಚ್ಚಿ ತಕ್ಷಣವೇ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ್ದಾಗಿ ಇಸ್ರೇಲ್ ಮಿಲಿಟರಿ ತಿಳಿಸಿದೆ.
ಏಪ್ರಿಲ್ 8ರ ನಂತರ ಇರಾನ್‌ನ ಇಂಧನ ತಾಣದ ಮೇಲೆ ನಡೆದ ಮೊದಲ ದಾಳಿ ಇದಾಗಿದ್ದು, ಇಸ್ರೇಲ್ ಪ್ರತೀಕಾರವಾಗಿ ಮಹ್‌ಶಹರ್ ಪೆಟ್ರೋಕೆಮಿಕಲ್ ಸಂಕೀರ್ಣದ ಮೇಲಿನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದೆ. ಇದರಿಂದಾಗಿ ಪ್ಲಾಂಟ್‌ನ ಕೆಲವು ಭಾಗಗಳು ಹಾನಿಗೊಳಗಾಗಿವೆ ಎಂದು ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ. ಅಲ್ಲದೆ, ಟೆಹರಾನ್‌ನ ನಿಯೋಜಿಸುತ್ತಿದ್ದ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಇಸ್ರೇಲ್ ಮಿಲಿಟರಿ ದೊಡ್ಡ ಮಟ್ಟದ ದಾಳಿಯನ್ನು ಘೋಷಿಸಿದೆ.
24 ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ತೈಲ ಟ್ಯಾಂಕರ್‌ನಲ್ಲಿ ಬೆಂಕಿ ಅವಘಡ
ಇಸ್ರೇಲ್ ಕಡೆಗೆ ಇರಾನ್ 11 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ವಾಷಿಂಗ್ಟನ್‌ನ ಇಸ್ರೇಲ್ ರಾಯಭಾರಿ ಯೆಚಿಯೆಲ್ ಲೈಟರ್ ಹೇಳಿದ್ದಾರೆ. ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆಗಳು ಮತ್ತು ಮೂಲಸೌಕರ್ಯಗಳನ್ನು ಇಸ್ರೇಲ್ ಗುರಿಯಾಗಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಮತ್ತು ಹಾನಿಯ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದಾಗಿನಿಂದ ಈ ಸಂಕೀರ್ಣದ ಐದು ಉತ್ಪಾದನಾ ಲೈನ್‌ಗಳಿಗೆ ಹಾನಿಯಾಗಿದೆ ಎಂದು ತಿಳಿಸಲಾಗಿದೆ.
ಭಾನುವಾರ ನಡೆದ ದೂರವಾಣಿ ಸಂಭಾಷಣೆಯಲ್ಲಿ ಟ್ರಂಪ್ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಮುಂದಿನ ದಾಳಿಗಳನ್ನು ತಪ್ಪಿಸಲು ಒತ್ತಾಯಿಸಿದ್ದರು ಎಂದು ವರದಿಯಾಗಿದೆ. ʼʼನಾವು ಶೀಘ್ರದಲ್ಲೇ ಒಂದು ಉತ್ತಮ ಒಪ್ಪಂದವನ್ನು ಮಾಡಿಕೊಳ್ಳಲಿದ್ದೇವೆ. ಆದ್ದರಿಂದ ಹೆಚ್ಚುವರಿ ದಾಳಿಗಳನ್ನು ತಡೆಹಿಡಿಯಿರಿʼʼ ಎಂದು ಟ್ರಂಪ್ ನೆತನ್ಯಾಹು ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇಸ್ರೇಲ್ ಮಾತ್ರ ಹೆಜ್ಬೊಲ್ಲಾ ವಿರುದ್ಧದ ತನ್ನ ದಾಳಿಯನ್ನು ಮುಂದುವರಿಸಿದೆ.