ವಾಷಿಂಗ್ಟನ್, ಮಾ. 13: ಇರಾನ್‌ನ (Iran) ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ (Mojtaba Khamenei) ಅವರ ಆರೋಗ್ಯ ಸ್ಥಿತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿರುವ ಬೆನ್ನಲ್ಲೇ, ಅಮೆರಿಕ (US) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಹತ್ವದ ಹೇಳಿಕೆ ನೀಡಿದ್ದಾರೆ. "ಮೊಜ್ತಾಬಾ ಬಹುಶಃ ಬದುಕಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿರುವ ಸಾಧ್ಯತೆಯಿದೆ" ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ವಾಯುದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತರಾದ ನಂತರ ಅವರ ಪುತ್ರ ಮೊಜ್ತಾಬಾ ನಾಯಕತ್ವ ವಹಿಸಿಕೊಂಡಿದ್ದರು. ಅಂದಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಫಾಕ್ಸ್ ನ್ಯೂಸ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, "ಅವರು ಯಾವುದೋ ಒಂದು ರೂಪದಲ್ಲಿ ಬದುಕಿರಬಹುದು. ಆದರೆ ಅವರು ದೈಹಿಕವಾಗಿ ಜರ್ಜರಿತರಾಗಿದ್ದಾರೆ" ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, 56 ವರ್ಷದ ಈ ಧರ್ಮಗುರು ಟೆಹರಾನ್‌ನ ಸಿನಾ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕೋಮಾದಲ್ಲಿದ್ದಾರೆ ಮತ್ತು ದಾಳಿಯಲ್ಲಿ ಕನಿಷ್ಠ ಒಂದು ಕಾಲನ್ನು ಕಳೆದುಕೊಂಡಿದ್ದಾರೆ ಎಂದು 'ದಿ ಸನ್' ಪತ್ರಿಕೆ ವರದಿ ಮಾಡಿದೆ. ಅಲ್ಲದೆ, ಅವರ ಹೊಟ್ಟೆ ಅಥವಾ ಯಕೃತ್ತಿಗೆ ಗಂಭೀರ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ʼʼಸಮಸ್ಯೆ ಈಗ ಆರಂಭವಾಗಿದೆʼʼ; ಇರಾನ್-ಇಸ್ರೇಲ್ ಯುದ್ಧ ಭಾರತದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದ ರಾಹುಲ್ ಗಾಂಧಿ
ಇರಾನ್ ಸರ್ಕಾರದ ಸ್ಪಷ್ಟನೆ ಏನು?
ಇರಾನ್ ಅಧಿಕಾರಿಗಳು ಮೊಜ್ತಾಬಾ ಗಾಯಗೊಂಡಿರುವುದನ್ನು ಒಪ್ಪಿಕೊಂಡಿದ್ದಾರಾದರೂ, ಅವರು ಸುರಕ್ಷಿತವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಸೈಪ್ರಸ್‌ನಲ್ಲಿರುವ ಇರಾನ್ ರಾಯಭಾರಿ ಅಲಿರೆಜಾ ಸಲೇರಿಯನ್ ಈ ಬಗ್ಗೆ ಮಾಹಿತಿ ನೀಡಿ ಮೊಜ್ತಾಬಾ ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿವೆ. ಹೀಗಾಗಿ ಅವರು ಭಾಷಣ ಮಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಇರಾನ್ ಸರ್ಕಾರಿ ದೂರದರ್ಶನವು ಮೊಜ್ತಾಬಾ ಅವರ ಹೆಸರಿನಲ್ಲಿ ಮೊದಲ ಸಂದೇಶವನ್ನು ಪ್ರಸಾರ ಮಾಡಿದೆ. ಆದರೆ ಇದನ್ನು ಸ್ವತಃ ಅವರೇ ಓದುವ ಬದಲು ಸುದ್ದಿ ವಾಚಕರು ಓದಿದ್ದಾರೆ. ಈ ಸಂದೇಶದಲ್ಲಿ ಅವರು ಅಮೆರಿಕಕ್ಕೆ ಕಠಿಣ ಎಚ್ಚರಿಕೆ ನೀಡಿದ್ದು, "ಮಧ್ಯಪ್ರಾಚ್ಯದಲ್ಲಿರುವ ಎಲ್ಲ ಅಮೆರಿಕದ ಸೇನಾ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು, ಇಲ್ಲದಿದ್ದರೆ ದಾಳಿ ಎದುರಿಸಬೇಕಾಗುತ್ತದೆ" ಎಂದು ಗುಡುಗಿದ್ದಾರೆ. ಅಲ್ಲದೆ, ಯುದ್ಧದಿಂದಾದ ನಷ್ಟಕ್ಕೆ ಪರಿಹಾರ ನೀಡದಿದ್ದರೆ ಶತ್ರು ರಾಷ್ಟ್ರಗಳ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಾಗಿ ಅಥವಾ ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಮೊಜ್ತಾಬಾ ಅಧಿಕಾರ ನಡೆಸುತ್ತಿರುವುದು ಇರಾನ್‌ನ ಆಡಳಿತ ವ್ಯವಸ್ಥೆಯಲ್ಲಿನ ಅಸ್ಥಿರತೆಯನ್ನು ಎತ್ತಿ ತೋರಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.