ವಾಷಿಂಗ್ಟನ್: ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವ ಸಾಧ್ಯತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಳಿವು ನೀಡಿದ್ದಾರೆ, ಸಂಘರ್ಷದಲ್ಲಿ ತನ್ನ ಉದ್ದೇಶಗಳನ್ನು ಸಾಧಿಸಲು ವಾಷಿಂಗ್ಟನ್ "ತುಂಬಾ ಹತ್ತಿರದಲ್ಲಿದೆ" ಎಂದು (Israel Iran War) ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಹಾರ್ಮೊಜ್ ಜಲಸಂಧಿಯನ್ನು ಸುರಕ್ಷಿತಗೊಳಿಸುವ ಜವಾಬ್ದಾರಿಯನ್ನು ಇತರ ರಾಷ್ಟ್ರಗಳು ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದರು.
ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ ಅಮೆರಿಕ ಅಧ್ಯಕ್ಷ, ವಾರಗಳ ತೀವ್ರ ಹೋರಾಟದ ನಂತರ ಅಮೆರಿಕ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಕಡಿಮೆ ಮಾಡಲು ಬಯಸುತ್ತದೆ ಎಂದು ಹೇಳಿದರು. ಇರಾನ್‌ನ ಕ್ಷಿಪಣಿ ಸಾಮರ್ಥ್ಯಗಳನ್ನು ಕುಗ್ಗಿಸುವುದು, ಅದರ ರಕ್ಷಣಾ ಕೈಗಾರಿಕಾ ನೆಲೆಯನ್ನು ಕಿತ್ತುಹಾಕುವುದು ಮತ್ತು ಅದರ ನೌಕಾ ಮತ್ತು ವಾಯು ಶಕ್ತಿಯನ್ನು ತಟಸ್ಥಗೊಳಿಸುವುದು ಸೇರಿದಂತೆ ಅಮೆರಿಕ ಸೇನೆಯ ಪ್ರಮುಖ ಸಾಧನೆಗಳನ್ನು ಅವರು ವಿವರಣೆಯೊಂದಿಗೆ ಹಂಚಿಕೊಂಡಿದ್ದಾರೆ. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸದಂತೆ ಅಮೆರಿಕ ಖಚಿತಪಡಿಸುತ್ತದೆ ಎಂದು ಅವರು ಪುನರುಚ್ಚರಿಸಿದರು.
ಇರಾನ್‌ನ ಭಯೋತ್ಪಾದಕ ಆಡಳಿತಕ್ಕೆ ಸಂಬಂಧಿಸಿದಂತೆ ಮಧ್ಯಪ್ರಾಚ್ಯದಲ್ಲಿ ನಮ್ಮ ಮಹಾನ್ ಮಿಲಿಟರಿ ಪ್ರಯತ್ನಗಳನ್ನು ಕೊನೆಗೊಳಿಸಲು ನಾವು ಪರಿಗಣಿಸುತ್ತಿರುವುದರಿಂದ ನಾವು ನಮ್ಮ ಗುರಿಗಳನ್ನು ತಲುಪಲು ಬಹಳ ಹತ್ತಿರವಾಗುತ್ತಿದ್ದೇವೆ. ಅಮೆರಿಕದ ಪ್ರಯತ್ನಗಳು ಇಸ್ರೇಲ್, ಸೌದಿ ಅರೇಬಿಯಾ, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ಪ್ರಾದೇಶಿಕ ಮಿತ್ರರಾಷ್ಟ್ರಗಳನ್ನು ರಕ್ಷಿಸುವತ್ತಲೂ ಗಮನಹರಿಸಿವೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, 'ವಿಯೆಟ್ನಾಂನಲ್ಲಿ ನೂರಾರು ಅಮೆರಿಕನ್ ಸೈನಿಕರು ಸಾಯುತ್ತಿದ್ದಾಗಲೂ, ಅಮೆರಿಕ ತಾನು ಗೆಲ್ಲುತ್ತಿದ್ದೇನೆ ಎಂದೇ ಹೇಳಿಕೊಳ್ಳುತ್ತಿತ್ತು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಇರಾನ್-ಇಸ್ರೇಲ್ ಯುದ್ಧ: ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್ ದಾಳಿ
ಇಂಧನ ಕೊರತೆ
ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಪ್ರಾದೇಶಿಕ ಇಂಧನ ಕ್ಷೇತ್ರದ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಶೇಕಡಾ 5ರಷ್ಟು ಏರಿಕೆಯಾಗಿ ಬ್ಯಾರಲ್‌ಗೆ 108 ಡಾಲರ್ ಗಿಂತ ಹೆಚ್ಚು ಆಗಿದೆ. ಇದರಿಂದ ಪೆಟ್ರೋಲ್ ಮತ್ತು ಇತರೆ ವಸ್ತುಗಳ ಬೆಲೆ ಹೆಚ್ಚಾಗಿ ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ಉಂಟಾಗಿದೆ.