ವಾಷಿಂಗ್ಟನ್, ಮೇ 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಇರಾನ್ ವಿಷಯದಲ್ಲಿ ಕಠಿಣ ತೀರ್ಮಾನ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ರಾಜತಾಂತ್ರಿಕ ಸಂಧಾನಗಳು ವಿಫಲವಾದರೆ ಇರಾನ್ ವಿರುದ್ಧ ಮಿಲಿಟರಿ ಶಕ್ತಿ ಬಳಸಿ ಭೀಕರ ವೈಮಾನಿಕ ದಾಳಿಗಳನ್ನು ಪುನರಾರಂಭಿಸಲು ಉನ್ನತ ಅಧಿಕಾರಿಗಳು ರಕ್ಷಣಾ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಟ್ರಂಪ್ ಚೀನಾ ಪ್ರವಾಸ ಮುಗಿಸಿ ಮರಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ವಿಶ್ವದ ಇತರ ರಾಷ್ಟ್ರಗಳು ಯುದ್ಧ ತಪ್ಪಿಸಲು ಹಾಗೂ ಆಯಕಟ್ಟಿನ ಪ್ರದೇಶವಾದ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಸಂಧಾನದ ಮಾರ್ಗ ಹುಡುಕುತ್ತಿವೆ. ಬೀಜಿಂಗ್‌ನಿಂದ ಹೊರಟ ನಂತರ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್‌ನ ಶಾಂತಿ ಪ್ರಸ್ತಾವನೆಯನ್ನು ತಿರಸ್ಕರಿಸಿದರು. ʼʼನಾನು ಇರಾನ್ ಪ್ರಸ್ತಾವನೆಯನ್ನು ನೋಡಿದೆ. ಅದರ ಮೊದಲ ವಾಕ್ಯವೇ ನನಗೆ ಇಷ್ಟವಾಗದಿದ್ದರೆ ನಾನು ಅದನ್ನು ಕಸದ ಬುಟ್ಟಿಗೆ ಎಸೆಯುತ್ತೇನೆ" ಎಂದರು.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ನಡೆಸಿದ ಉನ್ನತ ಮಟ್ಟದ ಮಾತುಕತೆಯ ಬೆನ್ನಲ್ಲೇ ಈ ಉದ್ವಿಗ್ನತೆ ತೀವ್ರಗೊಂಡಿದೆ. ಚೀನಾವು ಇರಾನ್‌ನ ಪ್ರಮುಖ ಕಾರ್ಯತಂತ್ರದ ಪಾಲುದಾರನಾಗಿದ್ದು, ಹೊರ್ಮುಜ್ ಜಲಸಂಧಿಯ ಇಂಧನ ಸರಬರಾಜಿನ ಮೇಲೆ ಅವಲಂಬಿತವಾಗಿದೆ. ಅಧ್ಯಕ್ಷ ಜಿನ್‌ಪಿಂಗ್ ಅವರೊಂದಿಗೆ ಇರಾನ್ ಬಗ್ಗೆ ಚರ್ಚಿಸಿರುವುದನ್ನು ಟ್ರಂಪ್ ಸ್ಪಷ್ಟಪಡಿಸಿದ್ದಾರಾದರೂ, ಇರಾನ್ ಮೇಲೆ ಒತ್ತಡ ಹೇರುವಂತೆ ಚೀನಾಗೆ ಮನವಿ ಮಾಡಿಲ್ಲ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯ ಶಾಂತಿ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡಲಿದೆ: ಪ್ರಧಾನಿ ಮೋದಿ
ಆದರೆ ಪೆಂಟಗನ್ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಳೆದ ತಿಂಗಳ ಕದನ ವಿರಾಮದ ನಂತರ, ಮತ್ತೊಮ್ಮೆ 'ಆಪರೇಷನ್ ಎಪಿಕ್ ಫ್ಯೂರಿ' ಕಾರ್ಯಾಚರಣೆಯನ್ನು ಹೊಸ ಹೆಸರಿನಲ್ಲಿ ಪುನರಾರಂಭಿಸಲು ಮಿಲಿಟರಿ ಯೋಜಕರು ಸಿದ್ಧರಾಗಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿ ಮಿಲಿಟರಿ ತಾಲೀಮಿನಲ್ಲಿ ನಿರತವಾಗಿದ್ದು, ಮುಂದಿನ ವಾರದ ಆರಂಭದಲ್ಲೇ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ಪರಮಾಣು ಅಸ್ತ್ರ ಹೊಂದುವಂತಿಲ್ಲ ಮತ್ತು ಹೊರ್ಮುಜ್ ಜಲಸಂಧಿ ಮುಕ್ತವಾಗಿರಬೇಕು ಎಂಬುದನ್ನು ಅಮೆರಿಕ ಹಾಗೂ ಚೀನಾ ಒಪ್ಪಿಕೊಂಡಿವೆ. ಜಲಸಂಧಿ ಅಮೆರಿಕದ ನಿಯಂತ್ರಣದಲ್ಲಿದ್ದು, ಇರಾನ್‌ಗೆ ದಿನಕ್ಕೆ 500 ಮಿಲಿಯನ್ ಡಾಲರ್ ನಷ್ಟವಾಗುತ್ತಿದೆ ಎಂದು ಟ್ರಂಪ್ ವಿವರಿಸಿದ್ದಾರೆ. ತೈವಾನ್ ವಿಷಯದಲ್ಲಿ ಭಿನ್ನಾಪ್ರಾಯ ಮೂಡಿದರೆ ಅದು ಅಮೆರಿಕ ಮತ್ತು ಚೀನಾ ನಡುವೆ ನೇರ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಜಿನ್‌ಪಿಂಗ್ ಟ್ರಂಪ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.