ವಾಷಿಂಗ್ಟನ್, ಮಾ. 31: ಹೊರ್ಮುಜ್ ಜಲಸಂಧಿ (Strait of Hormuz) ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಅದಾಗ್ಯೂ ಇರಾನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ ಎಂಬುದಾಗಿ ವರದಿ ತಿಳಿಸಿದೆ. ಜಲಸಂಧಿಯ ಮೂಲಕ ಹಡಗು ಕಾರ್ಯಾಚರಣೆಗಳನ್ನು ಅನುಮತಿಸದಿದ್ದರೆ, ಅಮೆರಿಕವು ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುತ್ತದೆ ಎಂದು ಕೆಲವೇ ದಿನಗಳ ಹಿಂದೆ ಟ್ರಂಪ್ ಬೆದರಿಕೆ ಹಾಕಿದ್ದರು. ಇದೀಗ ಅಮೆರಿಕ ಅಧ್ಯಕ್ಷ ಯೂಟರ್ನ್ ಹೊಡೆದಿದ್ದಾರೆ.
ವರದಿಯ ಪ್ರಕಾರ, ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ತೈಲವನ್ನು ಸಾಗಿಸುವ ಚಾಕ್‌ಪಾಯಿಂಟ್ ಅನ್ನು ಮತ್ತೆ ತೆರೆಯಲು ನಡೆಸುವ ಮಿಲಿಟರಿ ಕಾರ್ಯಾಚರಣೆಯನ್ನು ಕೈ ಬಿಡುವುದಾಗಿ ಟ್ರಂಪ್ ಹೇಳಿದ್ದಾರೆ. ಸಂಘರ್ಷವು ನಾಲ್ಕರಿಂದ ಆರು ವಾರಗಳ ಕಾಲಮಿತಿಯನ್ನು ಮೀರಿ ಮುಂದುವರಿಯಲಿದೆ ಎಂದು ಟ್ರಂಪ್ ಅಂದಾಜಿಸಿದ್ದಾರೆಂದು ವರದಿಯಾಗಿದೆ.
ಇರಾನ್‌ನ ನೌಕಾಪಡೆ ಮತ್ತು ಅದರ ಕ್ಷಿಪಣಿ ದಾಸ್ತಾನುಗಳನ್ನು ಹತ್ತಿಕ್ಕುವುದು ಮತ್ತು ಪ್ರಸ್ತುತ ಯುದ್ಧವನ್ನು ಕೊನೆಗೊಳಿಸುವುದರತ್ತ ಟ್ರಂಪ್ ಗಮನ ಹರಿಸಿದ್ದಾರೆ ಎನ್ನಲಾಗಿದೆ. ಜತೆಗೆ ವ್ಯಾಪಾರದ ಮುಕ್ತ ಹರಿವನ್ನು ಪುನರಾರಂಭಿಸಲು ಟೆಹರಾನ್ ಮೇಲೆ ರಾಜತಾಂತ್ರಿಕವಾಗಿ ಒತ್ತಡ ಹೇರಲಿದ್ದಾರೆ ಎಂದು ವರದಿ ತಿಳಿಸಿದೆ. ಅದು ವಿಫಲವಾದರೆ, ಯುರೋಪ್ ಮತ್ತು ಕೊಲ್ಲಿಯಲ್ಲಿರುವ ಮಿತ್ರರಾಷ್ಟ್ರಗಳ ಮೇಲೆ ಜಲಸಂಧಿಯನ್ನು ಮತ್ತೆ ತೆರೆಯಲು ಮುಂದಾಳತ್ವ ವಹಿಸುವಂತೆ ಒತ್ತಡ ಹೇರಬಹುದು ಎಂದು ವರದಿ ಹೇಳಿದೆ.
ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ಹೊರ್ಮುಜ್ ಜಲಸಂಧಿಯು ವಿಶ್ವದ ತೈಲದ ಸರಿಸುಮಾರು ಶೇಕಡಾ 25ರಷ್ಟು ಪ್ರಮುಖ ಮಾರ್ಗವಾಗಿದೆ. ಭಾರತದ 80 ಪ್ರತಿಶತವು ಇದರ ಮೂಲಕ ಹಾದುಹೋಗುತ್ತದೆ. ಇರಾನ್ ಹಡಗು ಸಾಗಣೆಗೆ, ವಿಶೇಷವಾಗಿ ಅಮೆರಿಕ ಮತ್ತು ಯುದ್ಧವನ್ನು ಬೆಂಬಲಿಸುವ ದೇಶಗಳಿಗೆ ಮಾರ್ಗವನ್ನು ಮುಚ್ಚಿದೆ. ಇದರಿಂದಾಗಿ ಕಂಟೇನರ್, ಡ್ರೈ ಬಲ್ಕ್ ಮತ್ತು ದ್ರವ ಸರಕು ಹಡಗುಗಳು ಸೇರಿದಂತೆ ದಿನಕ್ಕೆ ನೂರಾರು ಹಡಗುಗಳ ಸಾಗಣೆಯನ್ನು ಬಹುತೇಕ ಸ್ಥಗಿತಗೊಳಿಸಲಾಗಿದೆ.
ಪರಮಾಣು ಮಾತುಕತೆಗಳು ಸ್ಥಗಿತಗೊಂಡ ನಂತರ ಮತ್ತು ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಪುನರಾರಂಭಿಸಿದೆ ಎಂದು ಹೇಳಿಕೊಂಡ ಬಳಿಕ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್‌ನಾದ್ಯಂತ ಸಂಘಟಿತ ವೈಮಾನಿಕ ದಾಳಿಗಳನ್ನು ನಡೆಸಿದಾಗ ಯುದ್ಧ ಪ್ರಾರಂಭವಾಯಿತು. 'ಆಪರೇಷನ್ ಎಪಿಕ್ ಫ್ಯೂರಿ' ಎಂದು ಹೆಸರಿಸಲಾದ ಈ ದಾಳಿಗಳು ಇರಾನಿನ ನಗರಗಳನ್ನು ಗುರಿಯಾಗಿಸಿಕೊಂಡಿತ್ತು. ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಇರಾನ್‌ನ ಅನೇಕ ಉನ್ನತ ನಾಯಕರನ್ನು ಹತ್ಯೆ ಮಾಡಲಾಯಿತು. ಇರಾನ್ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿತು. ಅವುಗಳಲ್ಲಿ ಹಲವು ದುಬೈ, ಕುವೈತ್, ಅಬುಧಾಬಿ, ಕತಾರ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ಪ್ರದೇಶಗಳನ್ನು ಹಾನಿಗೊಳಿಸಿವೆ.