ವಾಷಿಂಗ್ಟನ್: ಅಮೆರಿಕದ (America) ಶಾಂತಿ ಪ್ರಸ್ತಾವನೆಗೆ ಇರಾನ್ ತನ್ನ ಪ್ರತಿಕ್ರಿಯೆಯನ್ನು ಪಾಕಿಸ್ತಾನದ ಮೂಲಕ ತಿಳಿಸಿದ ಕೆಲವೇ ಗಂಟೆಗಳ ನಂತರ , ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಟೆಹ್ರಾನ್‌ನ ಉತ್ತರವನ್ನು ಸಾರ್ವಜನಿಕವಾಗಿ ತಿರಸ್ಕರಿಸಿದರು, ಇದನ್ನು "ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ತಿಳಿಸಿದ್ದಾರೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಯಾವುದೇ ರಾಜತಾಂತ್ರಿಕ ಮುಕ್ತತೆಯು ದುರ್ಬಲವಾಗಿಯೇ ಉಳಿದಿದೆ ಎಂದು ಹೇಳಿದರು. ಇರಾನ್‌ನ 'ಪ್ರತಿನಿಧಿಗಳು' ಎಂದು ಕರೆಯಲ್ಪಡುವವರ ಪ್ರತಿಕ್ರಿಯೆಯನ್ನು ನಾನು ಈಗಷ್ಟೇ ಓದಿದ್ದೇನೆ. ನನಗೆ ಅದು ಇಷ್ಟವಿಲ್ಲ - ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಟೆಹ್ರಾನ್ ಸುಮಾರು 50 ವರ್ಷಗಳಿಂದ ಅಮೆರಿಕದೊಂದಿಗೆ ಆಟವಾಡುತ್ತಿದೆ ಎಂದು ಟ್ರಂಪ್ ಆರೋಪಿಸಿದರು. ಅವರು ಇನ್ನು ಮುಂದೆ ನಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. ನನಗೆ ಅವರ ಪತ್ರ ಇಷ್ಟವಿಲ್ಲ. ಅದು ಅನುಚಿತ. ಅವರ ಪ್ರತಿಕ್ರಿಯೆ ನನಗೆ ಇಷ್ಟವಾಗಿಲ್ಲ ಎಂದು ಟ್ರಂಪ್ ಅಮೆರಿಕದ ಮಾಧ್ಯಮ ಸಂಸ್ಥೆ ಆಕ್ಸಿಯೋಸ್‌ಗೆ ತಿಳಿಸಿದ್ದಾರೆ.
ಭಾನುವಾರ ಪ್ರಸಾರವಾದ ದೂರದರ್ಶನ ಸಂದರ್ಶನವೊಂದರಲ್ಲಿ ಟ್ರಂಪ್, ಇರಾನ್ ಈಗಾಗಲೇ ದೊಡ್ಡ ಸೋಲನ್ನು ಅನುಭವಿಸಿದೆ ಎಂದು ಹೇಳಿದರು. ಹಾಗಿದ್ದರೂ, ಮಾತುಕತೆಗಳು ವಿಫಲವಾದರೆ ವಾಷಿಂಗ್ಟನ್ ಮಿಲಿಟರಿ ಕಾರ್ಯಾಚರಣೆಗಳನ್ನು ವಿಸ್ತರಿಸಲು ಸಿದ್ಧವಾಗಿದೆ ಎಂದು ಹೇಳಿದ್ದರು. ಅಮೆರಿಕವು ಇರಾನ್‌ನೊಳಗೆ ತನ್ನ ಉದ್ದೇಶಿತ ಗುರಿಗಳಲ್ಲಿ "ಬಹುಶಃ ಶೇಕಡಾ 70" ರಷ್ಟು ಪೂರ್ಣಗೊಳಿಸಿದೆ ಮತ್ತು ಉಳಿದವುಗಳ ವಿರುದ್ಧ ತ್ವರಿತವಾಗಿ ದಾಳಿ ಮಾಡಬಹುದು ಎಂದು ಹೇಳಿದರು.
ಇದರ ನಡುವೆ ಕದನವಿರಾಮದ ನಡುವೆ ಹೊರ್ಮುಜ್ ಜಲಸಂಧಿಯಲ್ಲಿನ ನಿಯಂತ್ರಣದ ಕುರಿತು ಅಮೆರಿಕಾದ ನೌಕಪಡೆ ಹಾಗೂ ಇರಾನ್‌ನ IRGC ನೌಕಾಪಡೆ ಸೆಣಸಾಡುತ್ತಿದ್ದು, ಈ ಬೆನ್ನಲ್ಲೇ, ಗುರುವಾರ(ಮೇ.7ರಂದು) ತಡರಾತ್ರಿ ಜಲಸಂಧಿಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಅಮೆರಿಕಾದ ಕಡೆಯವರೇ ಮೊದಲು ಆಕ್ರಮಣವನ್ನು ಆರಂಭಿಸಿದ್ದು ಎಂದು ಇರಾನ್ ಆರೋಪಿಸುತ್ತಿದೆ. ಈ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಪ್ರತಿಕ್ರಿಯೆ ನೀಡಿದ್ದು ತಮ್ಮ ಟ್ರುತ್ ಸೋಶಿಯಲ್ ನಲ್ಲಿ, "ಹೊರ್ಮುಜ್ ಜಲಸಂಧಿಯಲ್ಲಿ USನ ಮೂರು ಯುದ್ಧನೌಕೆಯನ್ನು ಗುರಯಾಗಿಸಿ ದಾಳಿ ಮಾಡಿದ ಇರಾನಿನ ಹಡಗುಗಳನ್ನು ಅಮೆರಿಕಾ ಹೊಡೆದುರುಳಿಸಿದೆ ಎಂದಿದ್ದಾರೆ. ಅಲ್ಲದೇ, ಇದು ಕೇವಲ ಇರಾನ್ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ನಾವು ಅವರನ್ನು ಇನ್ನಷ್ಟು ಕಠಿಣವಾಗಿ ಮತ್ತು ಹೆಚ್ಚು ಹಿಂಸಾತ್ಮಕವಾಗಿ ಹೊಡೆದುರುಳಿಸುತ್ತೇವೆ" ಎಂದು ಹೇಳಿದ್ದರು.