ವಾಷಿಂಗ್ಟನ್, ಜೂ. 11: ಮಧ್ಯ ಪ್ರಾಚ್ಯದಲ್ಲಿ (Middle East) ಕದನ ವಿರಾಮ ಮುರಿದುಬಿದ್ದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ (Iran) ವಿರುದ್ಧ ತೀವ್ರ ಮಿಲಿಟರಿ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಗುರುವಾರ ರಾತ್ರಿ ಇರಾನ್ ಮೇಲೆ ಅಮೆರಿಕ "ಅತ್ಯಂತ ಭೀಕರ ದಾಳಿ" ನಡೆಸಲಿದ್ದು, ಅದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗುಡುಗಿದ್ದಾರೆ.
ತಮ್ಮ ಟ್ರುತ್ ಸೋಶಿಯಲ್ ಜಾಲತಾಣದಲ್ಲಿ ಬರೆದುಕೊಂಡಿರುವ ಟ್ರಂಪ್, ಇರಾನ್‌ನ ನೌಕಾಪಡೆ, ವಾಯುಪಡೆ, ರೇಡಾರ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಈಗಾಗಲೇ ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ಹೇಳಿದ್ದಾರೆ. ಅಲ್ಲದೆ, ವೆನೆಜುವೆಲಾದಲ್ಲಿ ಮಾಡಿದಂತೆ ಭವಿಷ್ಯದಲ್ಲಿ ಇರಾನ್‌ನ ಪ್ರಮುಖ ತೈಲ ಮತ್ತು ಅನಿಲ ಮೂಲ ಸೌಕರ್ಯಗಳನ್ನು, ವಿಶೇಷವಾಗಿ ಆಯಕಟ್ಟಿನ ಖಾರ್ಗ್ ದ್ವೀಪವನ್ನು ಅಮೆರಿಕ ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ದೈನಂದಿನ 20 ಲಕ್ಷ ಬ್ಯಾರೆಲ್ ತೈಲ ರಫ್ತು ಮಾಡುವ ಖಾರ್ಗ್ ದ್ವೀಪ ಇರಾನ್‌ನ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಚೀನಾ ಸೇರಿ ಹಲವು ದೇಶಗಳಿಗೆ ಇಲ್ಲಿಂದಲೇ ಇಂಧನ ಸರಬರಾಜಾಗುತ್ತದೆ.
ಡೊನಾಲ್ಡ್ ಟ್ರಂಪ್ ಎಚ್ಚರಿಕೆ:
ಗಲ್ಫ್ ಪ್ರದೇಶದಲ್ಲಿ ಮುಂದುವರಿದ ಭೀಕರ ಸಂಘರ್ಷ
ಗುರುವಾರವೂ ಉಭಯ ದೇಶಗಳ ನಡುವೆ ವಾಯುದಾಳಿಗಳು ತೀವ್ರವಾಗಿ ಮುಂದುವರಿದಿವೆ. ಇರಾನ್‌ನ ಕಣ್ಗಾವಲು ಮತ್ತು ಸಂವಹನ ಜಾಲಗಳನ್ನು ಗುರಿಯಾಗಿಸಿ ಅಮೆರಿಕ ಭೀಕರ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್, ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಪ್ರಮುಖ ವಾಯುನೆಲೆಗಳು ಹಾಗೂ ನೌಕಾಪಡೆಯ 5ನೇ ಫ್ಲೀಟ್ ಪ್ರಧಾನ ಕಚೇರಿ ಸೇರಿದಂತೆ ಒಟ್ಟು 18 ಅಮೆರಿಕನ್ ಮಿಲಿಟರಿ ನೆಲೆಗಳ ಮೇಲೆ ಪ್ರತ್ಯುತ್ತರವಾಗಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಜತೆಗೆ ಜೋರ್ಡಾನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೂ ಇರಾನ್ ಪಡೆಗಳು ಯಶಸ್ವಿ ದಾಳಿ ನಡೆಸಿವೆ.
ಒಮಾನ್ ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ಅಮೆರಿಕ ದಾಳಿ; ವಿದೇಶಾಂಗ ಇಲಾಖೆಯಿಂದ ಖಂಡನೆ
ದಾಳಿ ಮಧ್ಯೆಯೂ ಮುಂದುವರಿದ ಸಂಧಾನ ಮಾತುಕತೆ
ಯುದ್ಧದ ಉದ್ವಿಗ್ನತೆಯ ನಡುವೆಯೂ ವಾಷಿಂಗ್ಟನ್ ಮತ್ತು ಟೆಹರಾನ್ ಮಧ್ಯೆ ರಹಸ್ಯ ರಾಜತಾಂತ್ರಿಕ ಸಂವಹನ ಮುಂದುವರಿದಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇರಾನ್ ನಾಯಕರು ತಕ್ಷಣವೇ ಅಮೆರಿಕದ ಷರತ್ತುಗಳಿಗೆ ಒಪ್ಪಿ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಭಾರಿ ಬಾಂಬ್ ದಾಳಿಯನ್ನು ಮತ್ತೆ ತೀವ್ರಗೊಳಿಸುವುದಾಗಿ ಅಮೆರಿಕ ಎಚ್ಚರಿಸಿದೆ.
ಮೂಲಗಳ ಪ್ರಕಾರ, ವಿದೇಶಿ ಬ್ಯಾಂಕ್‌ಗಳಲ್ಲಿ ಸ್ಥಗಿತಗೊಂಡಿರುವ ಇರಾನ್‌ನ ಬಿಲಿಯನ್ ಗಟ್ಟಲೆ ಡಾಲರ್ ಹಣವನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಉಭಯ ದೇಶಗಳ ನಡುವೆ ಇನ್ನೂ ತೀವ್ರ ಭಿನ್ನಾಭಿಪ್ರಾಯ ಮುಂದುವರಿದಿದೆ. ಇರಾನ್ ತನಗೆ ಸೇರಬೇಕಾದ 6ರಿಂದ 12 ಬಿಲಿಯನ್ ಡಾಲರ್ ತಕ್ಷಣದ ಬಿಡುಗಡೆಗೆ ಒತ್ತಾಯಿಸುತ್ತಿದ್ದರೆ, ಅಮೆರಿಕ ಇದನ್ನು ಹಂತ-ಹಂತವಾಗಿ ಕೇವಲ ಮಾನವೀಯ ಮತ್ತು ವೈದ್ಯಕೀಯ ಉದ್ದೇಶಗಳಿಗೆ ಮಾತ್ರ ಬಳಸಲು ಕಠಿಣ ಷರತ್ತು ವಿಧಿಸುತ್ತಿದೆ. ಮಿಲಿಟರಿ ದೃಷ್ಟಿಯಿಂದ ಈ ಯುದ್ಧವು ಸದ್ಯಕ್ಕೆ ಬಿಕ್ಕಟ್ಟಿಗೆ ಸಿಲುಕಿದ್ದು, ರಾಜತಾಂತ್ರಿಕ ಪರಿಹಾರವೊಂದೇ ಸದ್ಯದ ದಾರಿಯಾಗಿದೆ ಎಂದು ಇರಾನ್ ಮೂಲಗಳು ತಿಳಿಸಿವೆ.